ತೋರಣಗಲ್ಲಿನ ಜೆಎಸ್‌ಡಬ್ಲೂ ವಿಜಯನಗರ ಕಾರ್ಖಾನೆಯಲ್ಲಿ ಜಿಲ್ಲೆಯ 9 ರಕ್ತ ಕೇಂದ್ರಗಳ ಬೆಂಬಲದೊಂದಿಗೆ ಶುಕ್ರವಾರ ರಕ್ತಮಿತ್ರ 2.0 ಮೆಗಾ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಒಂದೇ ದಿನ 3535 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಂಸ್ಥೆ ಸ್ಥಾಪಿಸಿದೆ.
ಸಂಡೂರು: ಓ.ಪಿ ಜಿಂದಾಲ್ ಅವರ 96ನೇ ಜನ್ಮದಿನದ ಸ್ಮರಣಾರ್ಥ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಎಸ್‌ಡಬ್ಲೂ ಫೌಂಡೇಶನ್ ಸಹಯೋಗದಲ್ಲಿ ತಾಲೂಕಿನ ತೋರಣಗಲ್ಲಿನ ಜೆಎಸ್‌ಡಬ್ಲೂ ವಿಜಯನಗರ ಕಾರ್ಖಾನೆಯಲ್ಲಿ ಜಿಲ್ಲೆಯ 9 ರಕ್ತ ಕೇಂದ್ರಗಳ ಬೆಂಬಲದೊಂದಿಗೆ ಶುಕ್ರವಾರ ರಕ್ತಮಿತ್ರ 2.0 ಮೆಗಾ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಒಂದೇ ದಿನ 3535 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಂಸ್ಥೆ ಸ್ಥಾಪಿಸಿದೆ.
ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ತದಾನ ಅತ್ಯಂತ ಉದಾತ್ತ ಮಾನವೀಯ ಕಾರ್ಯಗಳಲ್ಲಿ ಒಂದಾಗಿದೆ. ಒಂದೇ ಯೂನಿಟ್ ರಕ್ತ ಬಹು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ಓ.ಪಿ. ಜಿಂದಾಲ್ ಅವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಹಾಗೂ ಕೈಗಾರಿಕೆಗೆ ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಕಲ್ಯಾಣಕ್ಕೂ ಜೆಎಸ್‌ಡಬ್ಲೂ ಸಂಸ್ಥೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಅವರು ಶ್ಲಾಘಿಸಿದರು. ಜೆಎಸ್‌ಡಬ್ಲೂ ಸ್ಟೀಲ್ ವಿಜಯನಗರದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಎಲ್.ಆರ್. ಸಿಂಗ್ ಮಾತನಾಡಿ, ಜೆಎಸ್‌ಡಬ್ಲೂನಲ್ಲಿ ನಾವು ಕೇವಲ ಉಕ್ಕನ್ನು ಉತ್ಪಾದಿಸುತ್ತಿಲ್ಲ. ನಾವು ಬಲವಾದ ಸಮುದಾಯಗಳನ್ನು ನಿರ್ಮಿಸುತ್ತಿದ್ದೇವೆ. ಸಮಾಜಕ್ಕೆ ಅಗತ್ಯವಿರುವ ಸೇವೆಯನ್ನು ಸಲ್ಲಿಸಲು ಜೆಎಸ್‌ಡಬ್ಲೂ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಒಂದು ವಾರದೊಳಗೆ 1000 ಹಾಸಿಗೆಗಳ ಆಮ್ಲಜನಕ ಬೆಂಬಲಿತ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ನಾವು ಈ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ.
ದೇಶದ ಅತ್ಯಂತ ಸವಾಲಿನ ಸಮಯದಲ್ಲಿ ನಿರ್ಣಾಯಕ ಆರೋಗ್ಯ ಬೆಂಬಲವನ್ನು ಒದಗಿಸಿದ್ದೇವೆ. ಕಳೆದ ವರ್ಷ ನಮ್ಮ ಉದ್ಯೋಗಿಗಳು ಮತ್ತು ಪಾಲುದಾರರು ಮೂರು ದಿನಗಳಲ್ಲಿ 5040 ಯುನಿಟ್ ರಕ್ತವನ್ನು ದಾನ ಮಾಡಿದ್ದರು. ಈ ನಿರಂತರ ಸೇವಾ ಮನೋಭಾವ ನಮ್ಮ ಎಲ್ಲ ಸಿಎಸ್‌ಆರ್ ಉಪಕ್ರಮಗಳಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ರಕ್ತ ಜೀವನದ ಅಡಿಪಾಯವಾಗಿದೆ. ರಕ್ತ ಕೊರತೆಯ ಅಸಂಖ್ಯಾತ ರೋಗಿಗಳಿಗೆ ಅಪಾಯವನ್ನುಂಟು ಮಾಡುತ್ತಿದೆ. ರಕ್ತ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಗೆ ಬೆಂಬಲ ನೀಡಲು ಅಗತ್ಯವಿರುವಾಗ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವಂತೆ ಸಾರ್ವಜನಿಕರಿಗೆ, ವಿಶೇಷವಾಗಿ ಅಪರೂಪದ ರಕ್ಷದ ಗುಂಪುಗಳನ್ನು ಹೊಂದಿರುವ ದಾನಿಗಳಲ್ಲಿ ಮನವಿ ಮಾಡಿದರು.
ಜೆಜೆಎಸ್‌ಡಬ್ಲೂ ಫೌಂಡೇಶನ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ರಿತೇಶ್ ಸಿನ್ಹಾ ರಕ್ತದಾನದ ಮಹತ್ವ ಕುರಿತು ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್, ಜೆಎಸ್‌ಡಬ್ಲೂ ಸ್ಟೀಲ್ ಮಾನವ ಸಂಪನ್ಮೂಲ ವ್ಯವಹಾರದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಯೂರೇಶ್ ಬಾಪಟ್, ಜೆಎಸ್‌ಡಬ್ಲೂ ಸ್ಟೀಲ್ ಆಡಳಿತ ಉಪಾಧ್ಯಕ್ಷ ಸುನಿಲ್ ರಾಲ್ಫ್, ಜೆಎಸ್‌ಡಬ್ಲೂ ಫೌಂಡೇಶನ್ ಪ್ರಾದೇಶಿಕ ಮುಖ್ಯಸ್ಥ ಪೆದ್ದಣ್ಣ ಬೀಡಲ, ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಸನ್ಯಾ ಈಪೆನ್, ಬಳ್ಳಾರಿಯ ಜಿಲ್ಲಾ ಶಸ್ತ್ರ ಚಿಕಿತ್ಸಕರದ ಡಾ. ಬಸವರಾಜ್ ರೆಡ್ಡಿ, ಜೆಎಸ್‌ಡಬ್ಲೂ ಫೌಂಡೇಶನ್ ಮುಖ್ಯಸ್ಥರಾದ ಭಾರತಿ ಪಳನಿಸ್ವಾಮಿ ಮತ್ತಿತರ ಅಧಿಕಾರಿಗಳು, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ಮರಿಯಂಬಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅಬ್ದುಲ್ಲಾ, ತಾಲೂಕು ವೈದ್ಯಾಧಿಕಾರಿ ಡಾ. ಹರೀಶ್, ನರ್ಸಿಂಗ್ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು, ರಕ್ತ ಕೇಂದ್ರಗಳ ಪ್ರತಿನಿಧಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.