8ರಿಂದ ಗುರುರಾಯರ 354ನೇ ಆರಾಧನೆ

KannadaprabhaNewsNetwork |  
Published : Aug 04, 2025, 11:45 PM IST
04ಕೆಪಿಆರ್‌ಸಿಆರ್‌ 02:  | Kannada Prabha

ಸಾರಾಂಶ

ಕಲಿಯುಗದ ಕಾಮದೇನು, ಕಲ್ಪವೃಕ್ಷ ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವನ್ನು ಇದೇ 8 ರಿಂದ 14 ವರೆಗೆ ಮಂತ್ರಾಲಯ ಮಠದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದು, ಆರಾಧನೆ ಹಿನ್ನೆಲೆಯಲ್ಲಿ ನಡೆಯಲಿರುವ ಸಪ್ತರಾತ್ರೋತ್ಸವದಲ್ಲಿ ಹತ್ತು ಹಲವು ಧಾರ್ಮಿಕ-ಸಾಂಸ್ಕೃತಿ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಮಹೋತ್ಸವ ಆಚರಣೆಗೆ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕಲಿಯುಗದ ಕಾಮದೇನು, ಕಲ್ಪವೃಕ್ಷ ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವನ್ನು ಇದೇ 8 ರಿಂದ 14 ವರೆಗೆ ಮಂತ್ರಾಲಯ ಮಠದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದು, ಆರಾಧನೆ ಹಿನ್ನೆಲೆಯಲ್ಲಿ ನಡೆಯಲಿರುವ ಸಪ್ತರಾತ್ರೋತ್ಸವದಲ್ಲಿ ಹತ್ತು ಹಲವು ಧಾರ್ಮಿಕ-ಸಾಂಸ್ಕೃತಿ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಮಹೋತ್ಸವ ಆಚರಣೆಗೆ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಸುಕ್ಷೇತ್ರ ಮಂತ್ರಾಲಯದ ಶ್ರೀಮಠದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರಾಧನಾ ಮಹೋತ್ಸವದ ಸಂಪೂರ್ಣ ವಿವರಣೆಯನ್ನು ನೀಡುತ್ತಾ ಮಾತನಾಡಿದ ಶ್ರೀಗಳು, ಸಪ್ತರಾತ್ರೋತ್ಸವದಲ್ಲಿ ಶ್ರೀಮಠದ ಸಂಪ್ರದಾಯದಂತೆ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಇದೇ ವೇಳೆ ಶ್ರೀಮಠದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ನಡೆಸಲಾಗುವುದು. ಆರಾಧನೆ ಪ್ರಯುಕ್ತ ಶ್ರೀಗುರುರಾಯರ ಮೂಲಬೃಂದಾವನಕ್ಕೆ ವಜ್ರ ಕವಚ ಸಮರ್ಪಣೆ ಹಾಗೂ ಸುತ್ತಲಿನ ಶಿಲಾಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಅಳವಡಿಕೆ, ಪ್ರಕಾರದ ದಕ್ಷಿಣ ಭಾಗದ ಶೀಲಾಮಂಟಪಕ್ಕೆ ಸುವರ್ಣ ಲೇಪನೆ ಇಷ್ಟೇ ಅಲ್ಲದೇ ಪುಷ್ಕರಣಿ, ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ಡಾರ್ಮಿಟರಿ ಹಾಲ್, ಲಾಕರ್ ಉದ್ಘಾಟನೆ ಸೇರಿದಂತೆ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ, ಗಣ್ಯರಿಗೆ ಸನ್ಮಾನ ಸಮಾರಂಭ, ಕಲಾವಿದರಿಂದ ಸಾಂಸ್ಕೃತಿಕ ಸಮಾರಂಭಗಳನ್ನು ಏರ್ಪಡಿಸಲಾಗಿದೆ ಎಂದರು.

ಸಪ್ತರಾತ್ರೋತ್ಸವದಲ್ಲಿ ಪ್ರತಿದಿನ ಶ್ರೀಗುರುರಾಯರಿಗೆ ನಿರ್ಮಲ್ಯ ವಿಸರ್ಜನ, ಉತ್ಸವರಾಯರ ಪಾದಪೂಜೆ, ಪಂಚಾಮೃತ, ಸಂಸ್ಥಾನಮಠ ಪೂಜೆ, ಅಲಂಕಾರ ಹಾಗೂ ಮಂಗಳಾರತಿ ಸೇವೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳಾದ ಪ್ರವಚನ, ಭಾಗವತ ಸಪ್ತಾಯ, ವಿವಿಧ ಭಾಷೆಗಳಲ್ಲಿ ರಚಿಸಿದ ಆಧ್ಯಾತ್ಮಿಕ, ಧರ್ಮಗ್ರಂಥಗಳ ಲೋಕಾರ್ಪಣೆ, ಸಂಜೆ ಸಾಂಸ್ಕೃತಿಕ ಸಮಾರಂಭದಲ್ಲಿ ದೇಶದ ನಾನಾ ರಾಜ್ಯಗಳ ಪಂಡಿತರಿಂದ ದಾಸವಾಣಿ, ಕಲಾತಂಡಗಳಿಂದ ಸಂಗೀತ, ಭರತ ನಾಟ್ಯ, ನೃತ್ಯರೂಪಕ, ಹಿಂದೂಸ್ತಾನಿ ಗಾಯನ, ಹರಿಕಥ ಹಾಗೂ ಸಂಜೆ ಸಾಂಸ್ಕೃತಿಕ ಸಮಾರಂಭಗಳು ಜರುಗಲಿವೆ ಎಂದರು.

ಆ.8 ರಂದು ಸಂಜೆ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ ಹಾಗೂ ಧಾನ್ಯೋತ್ಸವ, 9ಕ್ಕೆ ಟಿಟಿಡಿಯಿಂದ ಆಗಮಿಸುವ ಶ್ರೀನಿವಾಸ ದೇವರ ವಸ್ತ್ರ ಸಮರ್ಪಣೆ, ಶಾಖೋತ್ಸವ, ರಜತ ಮಹೋತ್ಸವ ನಡೆಯಲಿದ್ದು, 10ಕ್ಕೆ ಪೂರ್ವಾರಾಧನೆ ಪ್ರಯುಕ್ತ ರಜತ ಸಿಂಹವಾಹನೋತ್ಸವ, 11 ಕ್ಕೆ ಮಧ್ಯಾರಾಧನೆ ಮಹಾಪಂಚಾಮೃತಾಭಿಷೇಕ, 12 ಕ್ಕೆ ಉತ್ತರಾರಾಧನೆ ಪ್ರಯುಕ್ತ ರಾಯರ ಬೃಂದಾವನಕ್ಕೆ ನವರತ್ನ ಖಚಿತ ಕವಚ ಸಮರ್ಪಣೆ, ಮಹಾರಥೋತ್ಸವ ನಡೆಯಲಿದ್ದು, 13ಕ್ಕೆ ಅ ಶ್ವವಾಹನೋತ್ಸವ, ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನಾ ಮಹೋತ್ಸ ಹಾಗೂ ಆ.14ಕ್ಕೆ ಸರ್ವಸಮರ್ಪಣೋತ್ಸವ ಸಮಾರಂಭ ನಡೆಯಲಿವೆ ಎಂದು ವಿವರಿಸಿದರು.

5 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ

ದಿನೇ ದಿನೆ ಶ್ರೀಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಾರಿಯ ಆರಾಧನೆಗೆ ಸುಮಾರು 5 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಶ್ರೀಮಠದಿಂದ ವಸತಿ, ಪ್ರಸಾದ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ. ತುಂಗಭದ್ರಾ ನದಿಯಲ್ಲಿ ಹೆಚ್ಚು ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನದಿತೀರದಲ್ಲಿ ಸ್ನಾನಘಟ್ಟಗಳನ್ನು ನಿರ್ಮಾಣ ಮಾಡಲಾಗಿದೆ. ಸಾಮೂಲಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಆಂದ್ರಪ್ರದೇಶ ಸರ್ಕಾರದ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ವಿದ್ವಾಂಸರಿಗೆ ರಾಘವೇಂದ್ರಾನುಗ್ರಹ ಪ್ರಶಸ್ತಿ

ಶ್ರೀರಾಯರ ಆರಾಧನಾ ಮಹೋತ್ಸವದಲ್ಲಿ ಶ್ರೀಮಠದಿಂದ ಕೊಡುವ ರಾಘವೇಂದ್ರಾನುಗ್ರಹ ಪ್ರಶಸ್ತಿ ಹಾಗೂ ಗುರು ಅನುಗ್ರಹ ಪ್ರಶಸ್ತಿಯನ್ನು ಪ್ರತಿವರ್ಷದಂತೆ ಈ ಬಾರಿಯೂ ವಿತರಿಸಲಾಗುತ್ತಿದ್ದು, ಕಾಶಿವಿಶ್ವನಾಥ ದೇವಸ್ಥಾನದ ಟ್ರಸ್ಟಿ ವಿದ್ವಾನ ರಾಜಾರಾಮ ಶುಕ್ಲಾ ಹಾಗೂ ತಮಿಳುನಾಡಿ ಕಂಚಿಯ ಹಾಗೂ ರಾಮೇಶ್ವರದಲ್ಲಿ ರಾಯರಮಠ ನಿರ್ಮಣ ಮಾಡಿದ ವಿಠಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಗುತ್ತಿದೆ. ಇಷ್ಟೇ ಅಲ್ಲದೇ ದೇಶದ ವಿವಿಧ ರಾಜ್ಯಗಳ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ