ಕೊಟ್ಟೂರು: ಪಟ್ಟಣದ ಇತಿಹಾಸದಲ್ಲೇ ಎಲ್ಲ ವಾರ್ಡ್‌ಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ಯೋಜನೆಯಡಿ ₹36 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಕೆ. ನೇಮರಾಜ ನಾಯ್ಕ ಹೇಳಿದರು.
ಫೆ. 12ರಂದು ಕೊಟ್ಟೂರು ರಥೋತ್ಸವ ಹಿನ್ನೆಲೆಯಲ್ಲಿ ಕಾಮಗಾರಿಗೆ ವೇಗ ನೀಡುವಂತೆ ಮತ್ತು ಫೆ. 8ರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದೆ. ಉಜ್ಜಯಿನಿ ರಸ್ತೆಯನ್ನು ಪಿಎಲ್‌ಡಿ ಬ್ಯಾಂಕ್‌ನಿಂದ 2 ಕಿ.ಮೀ. ವರೆಗೆ ₹2 ಕೋಟಿ ವೆಚ್ಚದಲ್ಲಿ, ಚಿರಿಬಿ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರು ಆರಂಭಿಸಲಿದ್ದಾರೆ. ಸ್ವಾಮಿ ರಥೋತ್ಸವಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ರಸ್ತೆಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಜೆಪಿ ಬಡಾವಣೆ, ರಾಜೀವ್ ಬಡಾವಣೆ, ಎಲ್.ಬಿ. ಬಡಾವಣೆ, ಬಸವೇಶ್ವರ ಬಡಾವಣೆ ಸೇರಿ ಬಹುತೇಕ ವಾರ್ಡ್‌ಗಳಲ್ಲಿ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ: ಹ.ಬೊ. ಹಳ್ಳಿ ಪುರಸಭೆಯನ್ನು ನಗರಸಭೆಯಾಗಿ, ಕೊಟ್ಟೂರು, ಮರಿಯಮ್ಮನಹಳ್ಳಿ ಪ.ಪಂ.ಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಸಚಿವರು ಪತ್ರ ಬರೆದಿದ್ದಾರೆ. ಮೂರು ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಶಾಸಕ ಕೆ. ನೇಮಿರಾಜ ನಾಯ್ಕ ತಿಳಿಸಿದರು.ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಮುಖಂಡರಾದ ಎಂಎಂಜೆ ಶೋಭಿತ್, ಕನ್ನಿಹಳ್ಳಿ ಚಂದ್ರಶೇಖರ, ಬೂದಿ ಶಿವಕುಮಾರ್, ಮಲ್ಲಿಕಾರ್ಜುನ, ಬಾವಿಕಟ್ಟಿ ಶಿವಾನಂದ, ಫಕ್ಕೀರಪ್ಪ, ಬಿಎಸ್‌ಆರ್ ಮೂಗಣ್ಣ, ಎಂ. ಕೊಟ್ರೇಶ್, ರುದ್ರಮುನಿ, ಎಂಜಿನಿಯರ್ ಸತೀಶ್, ಹ.ಬೊ.ಹಳ್ಳಿ ನಾಗರಾಜ ಇದ್ದರು.