ಪಿ.ಎಸ್. ಪಾಟೀಲ
ತಾಲೂಕಿನಲ್ಲಿ 59 ಶುದ್ಧ ನೀರಿನ ಘಟಕಗಳಿವೆ. ಪೈಕಿ 23 ಘಟಕಗಳು ಚಾಲ್ತಿಯಲ್ಲಿವೆ. 36 ಘಟಕಗಳು ಸ್ಥಗಿತಗೊಂಡಿವೆ. ಇದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜತೆಗೆ ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಲಾದ ಘಟಕಗಳು ಮೂಲೆಗುಂಪಾಗಿವೆ.
ಎಲ್ಲೆಲ್ಲಿ ಘಟಕ ಸ್ಥಗಿತ?: ತಾಲೂಕಿನ ಸವಡಿ ಅರಹುಣಸಿ, ಬಳಗೋಡ, ಹೊನ್ನಿಗನೂರ, ಬಿ.ಎಸ್. ಬೇಲೇರಿ, ಬಸರಕೋಡ, ಮೆಣಸಗಿ, ಚಿಕ್ಕಮಣ್ಣೂರ, ತಳ್ಳಿಹಾಳ, ಮುದೇನಗುಡಿ, ಹುಲ್ಲೂರ, ಬಾಸಲಾಪುರ, ಹೊಸಳ್ಳಿ, ಯರೇಕುರಬನಾಳ, ಮೇಲ್ಮಠ, ಹಿರೇಹಾಳ, ಮಾಳವಾಡ, ಮುಗಳಿ, ಕೌಜಗೇರಿ, ಬೆಳವಣಕಿ, ಸಂದಿಗವಾಡ, ಹುನಗುಂಡಿ, ಮಾಡಲಗೇರಿ, ಮಲ್ಲಾಪುರ, ಸವಡಿ, ಹೊನ್ನಾಪುರ, ಸರ್ಜಾಪುರ, ಯಾವಗಲ್ಲ, ಹುನಗುಂಡಿ, ಹೊಳೆಆಲೂರು, ಅಮರಗೋಳ, ಅಬ್ಬಿಗೇರಿ, ಅಸೂಟಿ, ಬೆಳವಣಕಿ, ಕುರಡಗಿ, ಕುರಹಟ್ಟಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿವೆ.ಘಟಕ ಸ್ಥಗಿತಕ್ಕೆ ಕಾರಣ: ತಾಲೂಕಿನಲ್ಲಿರುವ ಬಹುತೇಕ ಶುದ್ಧ ನೀರಿನ ಘಟಕಗಳನ್ನು ಖಾಸಗಿ ಏಜೆನ್ಸಿಗಳು ನಿರ್ಮಿಸಿವೆ. ಆದರೆ ಅವುಗಳ ದುರಸ್ತಿ, ನಿರ್ವಹಣೆ ಜವಾಬ್ದಾರಿಯನ್ನು ಏಜೆನ್ಸಿಗಳು ಮಾಡದಿದ್ದರಿಂದ ಅವೆಲ್ಲವೂ ಸ್ಥಗಿತಗೊಂಡಿವೆ. ಇನ್ನೂ ಕೆಲ ಘಟಕಗಳು ಗ್ರಾಪಂನಿಂದ ಸಮರ್ಪಕ ನೀರು ಪೂರೈಕೆಯಾಗದಿದ್ದರಿಂದ ಬೀಗ ಹಾಕಲಾಗಿದೆ.
ಸಮಸ್ಯಾತ್ಮಕ ಗ್ರಾಮಗಳು: ತಾಲೂಕಿನಲ್ಲಿ ಅತಿ ನೀರಿನ ಸಮಸ್ಯೆಯನ್ನು ಎದುರಿಸುವ ಗ್ರಾಮಗಳ ಪೈಕಿ ಸೋಮನಕಟ್ಟಿ, ಮುದೇನಗುಡಿ, ಹೊಳೆಮಣ್ಣೂರ ನವಗ್ರಾಮ, ಗಾಡಗೋಳಿ ನವಗ್ರಾಮ, ಮೆಣಸಗಿ ನವಗ್ರಾಮ ಪ್ರಮುಖವಾಗಿವೆ. ಈ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಗಲಿ ಮತ್ತು ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯಾಗಲಿ ಕೈಹಿಡಿದಿಲ್ಲ. ಇಲ್ಲಿನ ಜನತೆ ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ.
ಹೊಸ ಪ್ಲಾಟ್(ನಾಗಪ್ಪನ ಕಟ್ಟೆ ಹತ್ತಿರ)ನಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿಯೂ ತೀವ್ರ ನೀರಿನ ಸಮಸ್ಯೆಯನ್ನು ನಿವಾಸಿಗಳು ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಕುರಿತು ಸಾಕಷ್ಟು ಬಾರಿ ಹುಲ್ಲೂರು ಗ್ರಾಪಂ ಅಧಿಕಾರಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಸಮಸ್ಯೆಯಿಂದ ಯಾವಾಗ ಮುಕ್ತಿ ಸಿಗುತ್ತೊ ಅಂತ ಚಿಂತೆ ಕಾಡ್ತಿದೆ ಎನ್ನುತ್ತಾರೆ ಗ್ರಾಮದ ವಿಕ್ರಂ ಬರಡ್ಡಿ.
ಮೆಣಸಗಿ, ಹೊಳೆಮಣ್ಣೂರು, ಗಾಡಗೋಳಿ ನವಗ್ರಾಮಗಳಲ್ಲೂ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸೋಮನಕಟ್ಟಿ ರಸ್ತೆಯ ಬಳಿ ಕೆರೆ ನಿರ್ಮಿಸಲಾಗಿದ್ದು, ಇದರಿಂದ ನೀರು ಪೂರೈಕೆಯಾಗುತ್ತಿಲ್ಲ.
ಮುಂಜಾಗ್ರತಾ ಕ್ರಮ: ತಾಲೂಕಿನಲ್ಲಿ 59 ಶುದ್ದ ನೀರಿನ ಘಟಕಗಳಿವೆ. ಇವುಗಳನ್ನು ಖಾಸಗಿ ಏಜೆನ್ಸಿ ವತಿಯಿಂದ ನಿರ್ಮಿಸಿದ್ದು, ಅವರೇ ನಿರ್ವಹಣೆ ಮಾಡಬೇಕಿತ್ತು. ಆದರೆ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಘಟಕಗಳು ಸ್ಥಗಿತವಾಗಿವೆ. ಘಟಕಗಳ ದುರಸ್ತಿಗೆ ಏಜೆನ್ಸಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದು, ಮೌಖಿಕವಾಗಿಯೂ ಹೇಳಿದರೂ ಸ್ಪಂದಿಸುತ್ತಿಲ್ಲ. ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಚಂದ್ರಶೇಖ ಕಂದಕೂರ ತಿಳಿಸಿದರು.ಆಗ್ರಹ: ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಗ್ರಾಪಂ, ತಾಪಂ, ಜಿಪಂ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಕುರಿ, ಆಡು, ಮೇಕೆ, ಎಮ್ಮೆ, ಎತ್ತು, ಆಕಳು, ಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಹೊಲ, ಗದ್ದೆ, ಹಳ್ಳ, ಕೊಳ್ಳಗಳು, ಗುಡ್ಡ ಸೇರಿದಂತೆ ಅಗತ್ಯವಿದ್ದಲ್ಲಿ ಸಣ್ಣ ಹೊಂಡಗಳನ್ನು ನಿರ್ಮಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ ಆಗ್ರಹಿಸಿದರು.