ಹಾವೇರಿ: ಶಾಲೆ ಪುನಾರಂಭಕ್ಕೆ ದಿನಗಣನೆ ಶುರುವಾಗಿದ್ದು, ಜೂ.1ರಂದು ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ. ಆದರೆ, ಜಿಲ್ಲೆಯಲ್ಲಿ 370 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಪಾಲಕರು ಮಕ್ಕಳನ್ನು ಆತಂಕದಲ್ಲೇ ಶಾಲೆಗೆ ಕಳಿಸುವಂತಾಗಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 1.75 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 1118 ಪ್ರಾಥಮಿಕ ಹಾಗೂ 165 ಪ್ರೌಢಶಾಲೆಗಳು ಸೇರಿದಂತೆ 1283 ಶಾಲೆಗಳಿವೆ. ಇವುಗಳಲ್ಲಿ ಸುಮಾರು 7637 ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಮಳೆ ಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ತರಗತಿ ಕೊರತೆ ಎದುರಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಮಸ್ಯೆಯಾಗುತ್ತಿದೆ. ಜಿಲ್ಲೆಯ 4721 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ 370 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದರೆ, ಇನ್ನೂ 2500ಕ್ಕೂ ಹೆಚ್ಚು ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ. ಈ ನಡುವೆ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದು, ಅನಿವಾರ್ಯವಾಗಿ ಒಂದೇ ಕೊಠಡಿಯಲ್ಲಿ ಮೂರು ನಾಲ್ಕು ತರಗತಿಗಳ ಮಕ್ಕಳನ್ನು ಕೂರಿಸಿ ಕಲಿಸುವ ಪರಿಸ್ಥಿತಿ ಪ್ರತಿ ವರ್ಷದಂತೆ ಈ ಸಲವೂ ಮುಂದುವರಿಯಲಿದೆ. ಇತ್ತೀಚಿಗೆ ಮುಂಗಾರು ಪೂರ್ವ ಮಳೆಗೆ ಜಿಲ್ಲೆಯ ಕೆಲವು ಶಾಲೆಗಳ ಕೊಠಡಿಗಳು ಹಾನಿಯಾಗಿದ್ದು, ಅವುಗಳನ್ನು ದುಸ್ತಿಗೊಳಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಬೇಕಿದೆ. 370 ಕೊಠಡಿಗಳು ಸಂಪೂರ್ಣ ಶಿಥಿಲ: ಜಿಲ್ಲೆಯ 219 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಒಟ್ಟು 370 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ. ಇದರಲ್ಲಿ ಬ್ಯಾಡಗಿ ತಾಲೂಕಿನಲ್ಲಿ 54 ಕೊಠಡಿ, ಹಾನಗಲ್ಲ ತಾಲೂಕಿನಲ್ಲಿ 54 ಕೊಠಡಿ, ಹಾವೇರಿ ತಾಲೂಕಿನಲ್ಲಿ 41 ಕೊಠಡಿ, ಹಿರೇಕೆರುರು ತಾಲೂಕಿನಲ್ಲಿ 60 ಕೊಠಡಿ, ರಾಣಿಬೆನ್ನೂರು ತಾಲೂಕಿನಲ್ಲಿ 41 ಕೊಠಡಿ, ಸವಣೂರು ತಾಲೂಕಿನಲ್ಲಿ 69 ಕೊಠಡಿ, ಶಿಗ್ಗಾಂವಿ ತಾಲೂಕಿನಲ್ಲಿ 51 ಕೊಠಡಿಗಳು ಸೇರಿ ಒಟ್ಟು 370 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಕಟ್ಟಿದ ಕೆಲವೇ ವರ್ಷಗಳಲ್ಲಿ ಬಿರುಕು ಬಿಟ್ಟು ಅವು ಸೋರುವಂತಾಗಿವೆ. ಕೆಲವು ಶಾಲೆಗಳಲ್ಲಿ ಸಿಮೆಂಟ್ ತುಂಡುಗಳು ಮಕ್ಕಳ ತಲೆಮೇಲೆ ಬೀಳುತ್ತಿರುವ ನಿದರ್ಶನಗಳು ಸಾಕಷ್ಟಿದ್ದು, ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ. ಆಂಗ್ಲ ಮಾಧ್ಯಮಕ್ಕೆ ಕೊಠಡಿ ಕೊರತೆ: ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಈ ಮಧ್ಯೆ ಅನೇಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ, ಎಲ್‌ಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ, ಅಲ್ಲಿ ತರಗತಿ ಕೋಣೆಗಳಿಲ್ಲದೇ ಸಮಸ್ಯೆ ಎದುರಾಗುತ್ತಿದೆ. ಇಂಗ್ಲಿಷ್ ಮಾಧ್ಯಮ ಇರುವ ಶಾಲೆಗಳಲ್ಲಿ ಒಂದೇ ತರಗತಿಗೆ ಎರಡು ಮಾಧ್ಯಮವಿರುವುದರಿಂದ ಕೊಠಡಿಗಳಿಲ್ಲದೇ ಸಮಸ್ಯೆಯಾಗುತ್ತಿದೆ. ನೂರಾರು ಶಾಲೆಗಳಲ್ಲಿ ಆಟದ ಮೈದಾನ, ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ಕಲ್ಪಿಸುವ ಬೇಡಿಕೆಯಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವು ಬಳಕೆಗೆ ಬಾರದಂತಾಗಿವೆ. ಇವೆಲ್ಲ ಕಾರಣಗಳಿಂದ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ. ಇದೇ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪೈಪೋಟಿಗೆ ಬಿದ್ದಂತೆ ವಾಹನಗಳನ್ನು ಹಳ್ಳಿಗಳಿಗೆ ಕಳುಸಿ ಮಕ್ಕಳನ್ನು ಕರೆತರುತ್ತಿವೆ. ಇದು ಸರ್ಕಾರಿ ಶಾಲೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರಿ ಶಾಲೆಗಳ ಹಲವು ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಬಳಕೆಗೆ ಯೋಗ್ಯವಲ್ಲದ ಕೊಠಡಿಗಳ ಮಾಹಿತಿ ಪಡೆಯಲಾಗಿದೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಸಣ್ಣಪುಟ್ಟ ದುರಸ್ತಿ, ಮರುನಿರ್ಮಾಣ ಮಾಡಬೇಕಾದ ಕೊಠಡಿಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅನೇಕ ಕೊಠಡಿ ನಿರ್ಮಾಣ ಕಾಮಗಾರಿ ನಡೆದಿದೆ ಎಂದು ಜಿಪಂ ಸಿಇಒ ದಲ್ಜೀತ್ ಕುಮಾರ ಹೇಳಿದರು.