ಅಕ್ರಮವಾಗಿ ಸಂಗ್ರಹಿಸಿದ್ದ ₹7.50 ಲಕ್ಷ ಮೌಲ್ಯದ 380 ಲೋಡ್‌ ಮರಳು ಜಪ್ತಿ

KannadaprabhaNewsNetwork | Published : Mar 25, 2024 12:51 AM

ಸಾರಾಂಶ

ಇದೇ ಮೊದಲ ಬಾರಿಗೆ ಕಲಬುರಗಿ ಪೊಲೀಸರು ಭೀಮಾ ತೀರದಲ್ಲಿನ ಅಕ್ರಮ ಮರಳು ದಧೆಕೋರರ ಮೇಲೆ ಮುಗಿಬಿದ್ದಿದ್ದಾರೆ. ಇದರ ಪರಿಣಾಮ ಭೀಮಾ ತೀರದಲ್ಲಿ ಹಲವು ಸ್ಥಳಗಳಲ್ಲಿ, ಹೊಲಗದ್ದೆಗಳಲ್ಲಿ ಸಂಗ್ರಹಿಸಿಟ್ಟಂತಹ ನೂರಾರು ಲೋಡ್‌ ಮರಳು ಸಂಗ್ರಹ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈಚೆಗಿನ ಕೆಲ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಲಬುರಗಿ ಪೊಲೀಸರು ಭೀಮಾ ತೀರದಲ್ಲಿನ ಅಕ್ರಮ ಮರಳು ದಧೆಕೋರರ ಮೇಲೆ ಮುಗಿಬಿದ್ದಿದ್ದಾರೆ. ಇದರ ಪರಿಣಾಮ ಭೀಮಾ ತೀರದಲ್ಲಿ ಹಲವು ಸ್ಥಳಗಳಲ್ಲಿ, ಹೊಲಗದ್ದೆಗಳಲ್ಲಿ ಸಂಗ್ರಹಿಸಿಟ್ಟಂತಹ ನೂರಾರು ಲೋಡ್‌ ಮರಳು ಸಂಗ್ರಹ ಪತ್ತೆಯಾಗಿದೆ.

ಭೀಮಾ ನದಿ ತೀರದ ದೇಸಾಯಿ ಕಲ್ಲೂರ್‌, ಗುಡ್ಡೇವಾಡಿ ಹಾಗೂ ಘತ್ತರಗಾ ಗ್ರಾಮಗಳ ಅಕ್ರಮ ಮರಳು ಅಡ್ಡೆಗಳ ಮೇಲೆ ಶನಿವಾರ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿರೋದು ಗೊತ್ತಾಗಿದ್ದು, ಸದರಿ ದಾಳಿಯಲ್ಲಿ ಮೂರು ಊರುಗಳ ಹೊಲಗದ್ದೆಗಳಲ್ಲಿ ಸಂಗ್ರಹಿಸಲಾಗಿದ್ದ ₹7.50 ಲಕ್ಷ ಮೌಲ್ಯದ 380 ಲೋಡ್‌ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಈ ಅಕ್ರಮ ಮರಳು ಸಂಗ್ರಹಕ್ಕೆ ಅವಕಾಶ ನೀಡಿದ್ದ ಹೊಲಗಳ 7 ಮಾಲೀಕರ ವಿರುದ್ಧ 5 ಪ್ರಕರಣಗಳನ್ನೂ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಅಕ್ಷಯ ಹಾಕೆ ಹೇಳಿದ್ದಾರೆ.

ಅಫಜಲ್ಪುರ ಶಾಸಕ ಎಂವೈ ಪಾಟೀಲರ ತವರು ಊರು ದೇಸಾಯಿ ಕಲ್ಲೂರ ದಾಳಿಯಲ್ಲಿ ಸರ್ವೇ ನಂಬರ್‌ 44, 45-1 ರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ₹2.70 ಲಕ್ಷ ಅಂದಾಜಿನ 135 ಟ್ರ್ಯಾಕ್ಟರ್‌ ಮರಳು ಪತ್ತೆ ಹಚ್ಚಲಾಗಿದೆ.

ಇದರಂತೆಯೇ ಗುಡ್ಡೇವಾಡಿ ಸ. ನಂ- 22- 4 ರಲ್ಲಿನ 35 ಟ್ರ್ಯಾಕ್ಟರ್‌ ಲೋಡ್‌, ಸರ್ವೇ ನಂಬರ್‌ 61- 4 ರಲ್ಲಿ 35 ಟ್ರ್ಯಾಕ್ಟರ್‌, ಸನಂ- 50- 1 ರಲ್ಲಿ ಸಂಗ್ರಹಿಸಲಾಗಿದ್ದ 35 ಟ್ರ್ಯಾಕ್ಟರ್‌ ಲೋಡ್‌, ಅಂದಾಜು ಮೊತ್ತ 4 ಲಕ್ಷ ರು ಮೌಲ್ಯದ ಮರಳು ಜಪ್ತಿ ಮಾಡಲಾಗಿದೆ.

ಇನ್ನು ಘತ್ತರಗಾದಲ್ಲಿ ನಡೆದ ದಾಳಿಯಲ್ಲಿ ಸ. ನಂ 40 ರಲ್ಲಿ ಸಂಗ್ರಹಿಸಲಾಗಿದ್ದ 40 ಟ್ರ್ಯಾಕ್ಟರ್‌ಗಳಷ್ಟು ಅಕ್ರಮ ಮರಳು ದಾಸ್ತಾನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಮೇಲಿನ ಎಲ್ಲಾ ದಾಳಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿರುವ ಮರಳು ದಾಸ್ತನು ಮಾಡಲಾಗಿದ್ದ ಹೊಲಗದ್ದೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗದೆ. ಅಕ್ರಮ ಮರಲ ದಂಧೆಯಲ್ಲಿದ್ದವರನ್ನು ನಿಜವಾಗಿಯೂ ಪತ್ತೆ ಹಚ್ಚುವ ಸಲುವಾಗಿ ಈ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ಅಕ್ಷಯ್‌ ಹಾಕೆ ಹೇಳಿದ್ದಾರೆ.

ಮಣ್ಣೂರ ಸುತ್ತಮುತ್ತ ನಿಂತಿಲ್ಲ ಮರಳು ಅಕ್ರಮ: ಭೀಮಾ ನದಿ ಜಿಲ್ಲೆಗೆ ಪ್ರವೇಶ ಮಾಡುವ ಶೇಷಗಿರಿವಾಡಿ, ಮಣ್ಣೂರ, ಉಡಚಣ, ಶಿವೂರ್‌, ಕೋಡಗನೂರ್‌ , ಹಿರಿಯಾಳ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಭೀಮಾ ತೀರದ ಹಳ್ಳಿಗಳಲ್ಲಿ ಅಕ್ರಮ ಮರಳುಗಳ್ಳರ ಅಟ್ಟಹಾಸ ಹಾಗೇ ಮುಂದುವರಿದಿದೆ. ಈ ನದಿ ತೀರಗಳಲ್ಲಿಯೂ ಪೊಲೀಸರ ದಾಳಿ ಆಗಲೇಬೇಕು ಎಂಬುದು ಭೀಮಾ ತೀರದ ಜನರ ಆಗ್ರಹವಗಿದೆ. ಅದರಲ್ಲೂ ಮಣ್ಣೂರಲ್ಲಂತೂ ನಸುಕಿನ 2 ರಿಂದ 5 ಗಂಟೆಯೊಳಗೇ ಮರಳು ಕಳ್ಳರು ಅನದಿಯೊಡಲು ಬಗೆದು ಮರಳು ಕಳವು ಮಾಡಿ ಸಾಗಹಾಕುತ್ತ ತಮ್ಮ ಕೈಚಳಕ ತೋರುತ್ತಿದ್ದಾರೆ. ಜಿಲ್ಲಾ ಪೊಲೀಸರ ದಾಳಿ ಇನ್ನೂ ಮುಂದವರಿಯಬೇಕು, ಮಣ್ಣೂರು ಸೇರಿದಂತೆ ಸುತ್ತಲೆಲ್ಲಾ ಸಂಗ್ರಹಿಸಲಾಗಿರುವ ನೂರಾರು ಲೋಡ್‌ ಅಕ್ರಮ ಮರಳು ಜಪ್ತಿಯಾಗಬೇಕು, ಇಲ್ಲಿಯೂ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಆ ಭಾಗದ ಪರಿಸರವಾದಿಗಳು, ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಜಪ್ತಿಯಾದ ಅಕ್ರಮ ಮರಳಿನ ಮೊತ್ತ ₹1.71 ಕೋಟಿ: ಇದೀಗ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿರುವ 380 ಲೋಡ್‌ ಮರಳು ಬೆಲೆ ₹7.50 ಲಕ್ಷ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಈ ಮಾಫಿಯಾದವರು ಒದು ಲೋಡ್‌ಗೆ ₹40ರಿಂದ ₹45 ಸಾವಿರಕ್ಕೆ ಮಾರಾಟ ಮಾಡುತ್ತಿದ್ದು, ಈ ದಾಳಿಯಲ್ಲಿ ಪತ್ತೆಯಾದ 380 ಲೋಡ್‌ ಮರಳಿನ ಬೆಲೆ ₹1.71 ಕೋಟಿ ಆಗುತ್ತಿದೆ. ಈ ಪರಿ ಬೃಹತ್‌ ಮೊತ್ತದ ಅಕ್ರಮ ಮರಳು ಪತ್ತೆಯಾಗಿದೆಯಲ್ಲದೆ ಸರಕಾರದ ಖಜಾನೆಗೆ ತೆರಿಗೆ ಸಹ ಮೋಸವಾಗುತ್ತಿರೋದು ಈ ಪೊಲೀಸ್‌ ದಾಳಿಯಲ್ಲಿ ಹೊರಬಿದ್ದಿದೆ.

Share this article