384 ಗೆಜೆಟೆಡ್‌ ಪ್ರೊಬೆಷನರ್‌ ನೇಮಕ ಕೆಪಿಎಸ್ಸಿ ಅಧಿಸೂಚನೆ ಕೆಎಟಿಯಿಂದ ರದ್ದು

KannadaprabhaNewsNetwork |  
Published : Jun 05, 2025, 01:07 AM ISTUpdated : Jun 05, 2025, 09:42 AM IST
KPSC New 01

ಸಾರಾಂಶ

384 ಗೆಜೆಟೆಡ್‌ ಪ್ರೊಬೆಷನರ್‌ ನೇಮಕಕ್ಕೆ ಕೆಪಿಎಸ್ಸಿ ಅಧಿಸೂಚನೆಗೆ ಕೆಎಟಿಯಿಂದ ರದ್ದು ಆದೇಶ.

  ಬೆಂಗಳೂರು :  ರಾಜ್ಯ ಸರ್ಕಾರ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇಕಡ 50ರಿಂದ ಶೇ.56ಕ್ಕೆ ಹೆಚ್ಚಿಸಿರುವುದನ್ನು ಆಧರಿಸಿ 384 ಗೆಜೆಟೆಡ್‌ ಪ್ರೊಬೆಷನರ್‌ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2024ರ ಫೆ.26ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ.

ಕೆಎಎಸ್‌ ಹುದ್ದೆಗಳ ಭರ್ತಿಗೆ ಸರ್ಕಾರ ಮೀಸಲು ಹೆಚ್ಚಳ ಮಾಡಿ 2022ರ ಡಿ.12ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನೂ ಇದೇ ವೇಳೆ ರದ್ದುಪಡಿಸಿರುವ ಕೆಎಟಿ, ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಕೆಪಿಎಸ್‌ಸಿ ಸ್ವತಂತ್ರವಿದೆ ಎಂದು ಸ್ಪಷ್ಟಪಡಿಸಿದೆ.

ಕೆಎಎಸ್‌ ಅಧಿಕಾರಿಗಳ ನೇಮಕಕ್ಕೆ ಮುಖ್ಯ ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾಗಬೇಕಾದ ಈ ಹಂತದಲ್ಲಿ ಕೆಎಎಟಿ ಆದೇಶ ಅಭ್ಯರ್ಥಿಗಳಿಗೆ ಸಂಕಷ್ಟ ತಂದಿದೆ. ಸರ್ಕಾರದ ಕೈಗೊಳ್ಳುವ ಮುಂದಿನ ನಿರ್ಧಾರದ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿಂತಿದೆ. ಸರ್ಕಾರ ಇದೀಗ ನೇಮಕ ಪ್ರಕ್ರಿಯೆಯನ್ನು ಕಾನೂನುಬದ್ಧ ಮಾಡಬೇಕಾದರೆ ಕೆಎಟಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಿದೆ.

ಕೆಪಿಎಸ್‌ಸಿ ಅಧಿಸೂಚನೆ ಪ್ರಶ್ನಿಸಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿ.ಎನ್‌.ಮಧು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಕೆಎಟಿ ಅಧ್ಯಕ್ಷ ನ್ಯಾ.ಆರ್‌.ಬಿ.ಬೂದಿಹಾಳ್‌ ಹಾಗೂ ಆಡಳಿತ ಸದಸ್ಯ ರಾಘವೇಂದ್ರ ಔರಾದ್ಕರ್‌ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

 ಪ್ರಕರಣದ ವಿವರ:

ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ, 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ.18 ರಿಂದ 24ರವರೆಗೆ ಹೆಚ್ಚಿಸಿತ್ತು. ಅದರ ಆಧಾರದ ಮೇಲೆ 384 ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಕೆಎಟಿ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೆಎಟಿ, 2022ರ ಅ.23ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರಿವಾಜ್ಞೆ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿದೆ. ಅದನ್ನು ಆಧರಿಸಿ 2022ರ ಡಿ.28ರಂದು ಸರ್ಕಾರಿ ಅಧಿಸೂಚನೆ ಪ್ರಕಟಿಸಿ ರೋಸ್ಟರ್‌ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿಲ್ಲ. ಹಾಗಾಗಿ ಅದರ ಆಧಾರದ ಮೇಲೆ ರಚಿಸಲಾದ 2023ರ ನಿಯಮಾವಳಿ ರಚನೆ ಊರ್ಜಿತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಒಟ್ಟು ಮೀಸಲು ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲವೆಂದು ಸುಪ್ರೀಂ ಕೋರ್ಟ್‌ ಮಿತಿ ಹೇರಿದೆ. ಆದರೂ ಕೆಲ ರಾಜ್ಯಗಳು ಮಾಡಿವೆ ಎಂಬುದನ್ನು ಮುಂದಿಟ್ಟುಕೊಂಡು ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ ಎಂದು ಕೆಎಟಿ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸುಪ್ರಿಂ ಕೋರ್ಟ್‌ ಆದೇಶದ ವಿರುದ್ಧ ರಾಜಕೀಯ ಕಾರಣಕ್ಕಾಗಿ ಸರ್ಕಾರ ಮೀಸಲು ಪ್ರಮಾಣ ಶೇ.56ಕ್ಕೆ ಹೆಚ್ಚಿಸಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಶೇ.44ರಷ್ಟು ಮಾತ್ರ ಅವಕಾಶ ಸಿಗಲಿದೆ. ಅವರಿಗೆ ಲಭಿಸಬೇಕಿರುವ ಅವಕಾಶ ಕಸಿದುಕೊಳ್ಳಲಾಗಿದೆ. ಇದು ಸಂವಿಧಾನ ಹಾಗೂ ಸುಪ್ರಿಂಕೋರ್ಟ್‌ ತೀರ್ಪಿನ ಉಲ್ಲಂಘನೆ ಎಂದು ಆಕ್ಷೇಪಿಸಿದ್ದರು.

ಅರ್ಜಿದಾರರ ವಾದ ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಕರ್ನಾಟಕ ಶಾಸನಸಭೆ ರೂಪಿಸಿದ ಕಾಯ್ದೆ ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿದೆ. ಅದಕ್ಕೆ ಮಾನ್ಯತೆ ಇಲ್ಲ. ಸಾಮಾಜಿಕ ಮತ್ತು ಶೈಕ್ಷ ಣಿಕ ಹಿಂದುಳಿದಿರುವಿಕೆ ಖಚಿತಪಡಿಸಿಕೊಂಡು ನ್ಯಾ.ಎಚ್‌.ಎನ್‌.ನಾಗಮೋಹನ್‌ ದಾಸ್‌ ಆಯೋಗದ ಶಿಫಾರಸಿನಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಆಯೋಗವು ವೈಜ್ಞಾನಿಕ ವರದಿ ನೀಡಿದೆ. ಈಗಾಗಲೇ ಹಲವು ರಾಜ್ಯಗಳು ಜಾರಿಗೊಳಿಸಿದ ಮಾದರಿಯಲ್ಲಿ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ವಿಸ್ತರಿಸಲಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್