ಬಾಲಕಿ ಸಾವಿನ ಪ್ರಕರಣ ಸಿಬಿಐಗೆ ವಹಿಸಿ: ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ

KannadaprabhaNewsNetwork |  
Published : Jun 05, 2025, 01:06 AM IST
೪ಕೆಎಂಎನ್‌ಡಿ-೪ಮಂಡ್ಯದ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು  ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಎಮ್ಮೆಯೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ದುರಸ್ಥಿಯಲ್ಲಿರುವ ಕ್ಯಾಮೆರಾಗಳನ್ನು ಸರಿಪಡಿಸಬೇಕು. ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಬಯೋಮೆಟ್ರಿಕ್ ಅಳವಡಿಸಬೇಕು. ಆಸ್ಪತ್ರೆ ವೈದ್ಯರಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಿ ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ ಬಾಲಕಿ ಸಾವನ್ನಪ್ಪಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ, ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಎಮ್ಮೆ ಕರುವಿನೊಂದಿಗೆ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಂಗಳೂರು- ಮೈಸೂರು ಹೆದ್ದಾರಿಯ ಮಿಮ್ಸ್ ಮುಖ್ಯದ್ವಾರದಿಂದ ವೈದ್ಯಕೀಯ ಅಧೀಕ್ಷಕರ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ವೈದ್ಯರು, ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು. ಮಿಮ್ಸ್ ವೈದ್ಯರು, ವೈದ್ಯಾಧಿಕಾರಿಗಳು ಎಮ್ಮೆ ಚರ್ಮದವರು ಎಂಬುದನ್ನು ಪ್ರತಿಬಿಂಬಿಸಲು ಎಮ್ಮೆಯನ್ನು ಪ್ರತಿಭಟನೆಗೆ ಕರೆತಂದಿದ್ದರು. ಬಳಿಕ ಮಿಮ್ಸ್ ವೈದ್ಯಕೀಯ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು- ರಂಜಿತಾ ದಂಪತಿ ಪುತ್ರಿ ಸಾನ್ವಿ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಬಾಲಕಿಯ ಅಂಗಾಂಗ ವೈಫಲ್ಯ ಹೇಗಾಯಿತು ಎನ್ನುವುದಕ್ಕೆ ನಿಖರ ಉತ್ತರವನ್ನು ಯಾರೂ ನೀಡುತ್ತಿಲ್ಲ. ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿದವರು ಯಾರು, ಚುಚ್ಚುಮದ್ದು ನೀಡಿದವರು ಯಾರು ಎಂಬುದನ್ನು ತನಿಖೆಗೆ ಒಳಪಡಿಸಬೇಕು. ಇದಕ್ಕೆ ಸಿಬಿಐ ತನಿಖೆ ಸೂಕ್ತವಾಗಿರುವುದರಿಂದ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.

ಬಾಲಕಿಯ ಸಾವಿಗೆ ಕಾರಣರಾದ ವೈದ್ಯರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸರ್ಕಾರದಿಂದ ಮಗುವಿನ ಕುಟುಂಬಕ್ಕೆ ೫೦ ಲಕ್ಷ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ದುರಸ್ಥಿಯಲ್ಲಿರುವ ಕ್ಯಾಮೆರಾಗಳನ್ನು ಸರಿಪಡಿಸಬೇಕು. ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಬಯೋಮೆಟ್ರಿಕ್ ಅಳವಡಿಸಬೇಕು. ಆಸ್ಪತ್ರೆ ವೈದ್ಯರಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಿ ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬಾಲಕಿಯ ಸಾವಿನ ಸತ್ಯಾಸತ್ಯತೆಯನ್ನು ತಿಳಿಯಲು ಜಿಲ್ಲಾಡಳಿತ ತಂಡ ರಚನೆ ಮಾಡಿರುವುದು ಕೇವಲ ಕಣ್ಣೊರೆಸುವ ತಂತ್ರವಷ್ಟೇ. ಆ ಸಮಿತಿ ನಿಷ್ಪಕ್ಷಪಾತವಾಗಿ ವರದಿ ನೀಡುವುದೆಂಬ ನಂಬಿಕೆ ಇಲ್ಲ. ಪ್ರಕರಣವನ್ನು ಪೊಲೀಸ್ ತನಿಖೆಗೆ ವಹಿಸುವುದರಿಂದಲೂ ಪ್ರಯೋಜನವಿಲ್ಲ. ಸಿಬಿಐ ತನಿಖೆಯಿಂದ ಮಾತ್ರ ನಿಜಾಂಶ ಹೊರಬರಲು ಸಾಧ್ಯ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಪಡಿಸಿದರು.

ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಶಂಕರ್‌ಬಾಬು, ಮುಖಂಡರಾದ ಕೆ.ಎಚ್.ಜಗದೀಶ್, ದೇವಮ್ಮ, ಆರ್.ಜಗದೀಶ್, ಸತ್ಯನಾರಾಯಣಮೂರ್ತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು