ಬಳ್ಳಾರಿ-ಹೊಸಪೇಟೆ ನಡುವೆ ಮೂರು ಮತ್ತು ನಾಲ್ಕನೇ ರೈಲ್ವೇ ಮಾರ್ಗ ನಿರ್ಮಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ನವದೆಹಲಿ:
ಬಳ್ಳಾರಿ-ಹೊಸಪೇಟೆ ನಡುವೆ ಮೂರು ಮತ್ತು ನಾಲ್ಕನೇ ರೈಲ್ವೇ ಮಾರ್ಗ ನಿರ್ಮಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಾಸರಾ-ಮನಮಾಡ್, ದಿಲ್ಲಿ-ಅಂಬಾಲಾ ಸೇರಿ ಒಟ್ಟು ಮೂರು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಬಳ್ಳಾರಿ-ಹೊಸಪೇಟೆ ಕೂಡ ಸೇರಿದೆ. ಈ ಮೂರೂ ಯೋಜನೆಗಳ ಒಟ್ಟು ಯೋಜನಾ ವೆಚ್ಚ ₹18,509 ಕೋಟಿ ಆಗಿದೆ.
ಬಳ್ಳಾರಿ-ಹೊಸಪೇಟೆ ನಡುವೆ ಈಗಿರುವ ಜೋಡಿ ಮಾರ್ಗವನ್ನು ಚತುಷ್ಪಥಕ್ಕೇರಿಸುವ ನಿರ್ಧಾರದಿಂದ ಈ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲು ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟಂತಾಗಲಿದೆ. ಈ ಯೋಜನೆಯಿಂದ ವಾರ್ಷಿಕವಾಗಿ ₹323 ಕೋಟಿ ಸರಕು ಸಾಗಣೆ ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
ಬಳ್ಳಾರಿ-ಹೊಸಪೇಟೆ 3ನೇ ಮತ್ತು 4ನೇ ರೈಲ್ವೆ ಮಾರ್ಗ ಯೋಜನೆಯು ವಾಸ್ಕೋ ಡ ಗಾಮಾ-ವಿಜಯವಾಡ ನಡುವಿನ ಎಚ್‌ಯುಎನ್ (ಹೈಲೀ ಯುಟಿಲೈಸ್ಡ್ ನೆಟ್‌ವರ್ಕ್) ರೈಲು ಮಾರ್ಗವನ್ನು ಜೋಡಿ ಮಾರ್ಗದಿಂದ ಚತುಷ್ಪಥ ಮಾಡುವ ಯೋಜನೆಯ ಭಾಗ. ಈಗಾಗಲೇ ಇಲ್ಲಿ ಡಬಲ್ ಲೈನ್ ಇದ್ದು, ನಾಲ್ಕು ಪಥಕ್ಕೇರಿಸಿದರೆ ಆಂಧ್ರವನ್ನು ಕರ್ನಾಟಕ, ಗೋವಾ ಕರಾವಳಿಯನ್ನು ಸಂಪರ್ಕಿಸುವುದು ಸುಲಭವಾಗಲಿದೆ.
ಅನುಕೂಲ ಏನು?:
-ಪ್ರವಾಸೋದ್ಯಮಕ್ಕೆ ಉತ್ತೇಜನ:
ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಧಾಮ, ತುಂಗಭದ್ರಾ ಡ್ಯಾಂ, ಕೆಂಚನಗುಡ್ಡ ಮತ್ತು ವಿಜಯ ವಿಠ್ಠಲ ದೇಗುಲ ಮತ್ತಿತರ ದೇಗುಲಗಳಂಥ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕ ಸುಲಭವಾಗಲಿದೆ.
-ಸರಕು ಸಾಗಣೆ:
ಈ ಭಾಗದಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್, ಸ್ಟೀಲ್, ಸಿಮೆಂಟ್, ಆಹಾರಧಾನ್ಯ, ಸಕ್ಕರೆ, ಗೊಬ್ಬರದಂಥ ವಸ್ತುಗಳ ಸಾಗಣೆ ಸುಲಭವಾಗಲಿದೆ.
ಯೋಜನೆಯ ವಿವರ:
ಒಟ್ಟು 65 ಕಿ.ಮೀ. ಉದ್ದದ ಈ ರೈಲು ಮಾರ್ಗದಲ್ಲಿ 34 ಪ್ರಮುಖ ಸೇತುವೆಗಳು, 220 ಸಣ್ಣ ಸೇತುವೆಗಳ ನಿರ್ಮಾಣ ಮಾಡಬೇಕಾಗುತ್ತದೆ. ಇದರ ಜತೆಗೆ 11 ರಸ್ತೆ ಓವರ್ ಬ್ರಿಡ್ಜ್‌ಗಳು, 14 ರಸ್ತೆ ಅಂಡರ್ ಬ್ರಿಡ್ಜ್‌ಗಳ ನಿರ್ಮಾಣದ ಉದ್ದೇಶವಿದೆ. ಒಟ್ಟು ರೈಲ್ವೆ ಹಳಿಯ ಉದ್ದ 149 ಕಿ.ಮೀ. ಆಗಿರಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.