ಕೆಜಿಎಫ್:ಶಿವರಾತ್ರಿ ಪ್ರಯುಕ್ತ ಕೋಟಿಲಿಂಗೇಶ್ವರ ದೇವಾಲಯಕ್ಕೆ ದಕ್ಷಿಣ ರಾಜ್ಯಗಳ ಭಕ್ತಸಾಗರವೇ ಹರಿದು ಬರಲಿರುವ ಹಿನ್ನೆಲೆಯಲ್ಲಿ ಭಕ್ತರ ಸ್ವಾಗತಕ್ಕೆ ದೇವಾಲಯದ ಆಡಳಿತ ಮಂಡಳಿ ಸಕಲ ರೀತಿಯಲ್ಲಿ ದೇವಾಲಯವನ್ನು ಸಜ್ಜುಗೊಳ್ಳಿಸಿದೆ. ಇದು ಶಿವನ ದೇವಸ್ಥಾನವಾಗಿದ್ದು, ಕಮ್ಮಸಂದ್ರ ಗ್ರಾಮವನ್ನು ಹಿಂದೆ ಧರ್ಮಸ್ಥಳ ಎಂದು ಕರೆಯಲಾಗುತ್ತಿತ್ತು. ಈ ದೇವಸ್ಥಾನವು ಏಷ್ಯಾದ ಅತಿದೊಡ್ಡ ಮತ್ತು ಎತ್ತರದ ಶಿವಲಿಂಗಗಳಲ್ಲಿ ಒಂದನ್ನು ಹೊಂದಿದೆ.ಕೋಟಿಲಿಂಗೇಶ್ವರ ದೇವಾಲಯದ ದಂತಕಥೆಸ್ಥಳೀಯ ದಂತಕಥೆಯ ಪ್ರಕಾರ, ದೇವತೆಗಳ ರಾಜ ಇಂದ್ರನು ಒಮ್ಮೆ ಗೌತಮ ಋಷಿಯನ್ನು ಶಪಿಸಿದ್ದನು. ಆ ಋಷಿಯು ತನ್ನ ಶಾಪದಿಂದ ಮುಕ್ತಿ ಪಡೆಯಲು ಬಯಸಿದನು, ಮತ್ತು ಅವನು ಶಿವಲಿಂಗವನ್ನು ಸ್ಥಾಪಿಸಿ ದೇವರನ್ನು ಪ್ರಾರ್ಥಿಸಿದನು. ಅವನು ಹತ್ತು ಲಕ್ಷ ನದಿಗಳ ನೀರಿನಿಂದ ಶಿವಲಿಂಗವನ್ನು ಅಭಿಷೇಕಿಸಿದನು. ಇಂದಿಗೂ ಸಹ ಶಿವಲಿಂಗವನ್ನು ದೇವಾಲಯದ ಆವರಣದಲ್ಲಿ ಕಾಣಬಹುದು.ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ ಇರುವುದಾಗಿ ಆಢಳಿತಾಧಿಕಾರಿ ಕೆ.ವಿ.ಕುಮಾರಿ ತಿಳಿಸಿದರು.