ಸಾವಯವ ಭತ್ತಕ್ಕೆ ಕ್ವಿಂ.ಗೆ 4000 ರು. : ಸುಭಿಕ್ಷಾ ಅಧ್ಯಕ್ಷರ ಭರವಸೆ

KannadaprabhaNewsNetwork |  
Published : Oct 09, 2026, 02:45 AM IST
ಭಾಕಿಸಂ ಸಭೆಯಲ್ಲಿ ಆ. ಶ್ರೀ ಆನಂದ ಮಾಾತನಾಡಿದರು | Kannada Prabha

ಸಾರಾಂಶ

ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಸುಭಿಕ್ಷಾ ಸಾವಯವ ರೈತರ ಬಹುರಾಜ್ಯ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಆ. ಶ್ರೀ. ಆನಂದ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಸುಭಿಕ್ಷಾ ಸಾವಯವ ರೈತರ ಬಹುರಾಜ್ಯ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಆ. ಶ್ರೀ. ಆನಂದ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಅವರು ಶುದ್ಧ ಸಾವಯವ ಆಹಾರ ಉತ್ಪನ್ನಗಳಿಗೆ ಬಹು ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಸುಭಿಕ್ಷಾ ಸಂಸ್ಥೆ ಹಾಗೂ ಭಾ.ಕಿ.ಸಂ.ನ ಮೂಲಕ ಸಂಸ್ಥೆಯ ಸದಸ್ಯ ರೈತರುಗಳು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆಸಿದ ಭತ್ತವನ್ನು ಪ್ರತೀ ಕ್ವಿಂಟಾಲ್‌ಗೆ 4000 ರು. ದರ ನೀಡಿ ಖರೀದಿಸಿ ಮಾರುಕಟ್ಟೆ ಮಾಡಲು ಸಿದ್ಧರಿರುವುದಾಗಿ ಭರವಸೆ ನೀಡಿದರು.ಹಾಗೆಯೇ ಸುಭಿಕ್ಷಾದ ಷೇರುದಾರರು ಮತ್ತು ಭಾ.ಕಿ.ಸಂ. ಸದಸ್ಯರುಗಳಿಗಾಗಿ ಕಡಿಮೆ ದರದಲ್ಲಿ ಗುಣಮಟ್ಟದ ಸಾವಯವ ಗೂಬ್ಬರಗಳನ್ನು ಪೂರೈಸಲಾಗುತ್ತಿದ್ದು ಹೆಚ್ಚಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.ಭಾ.ಕಿ.ಸಂ. ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌ರವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿ ಮಾಸಿಕ ಸಭೆಯಲ್ಲಿ ಬಹು ಮುಖ್ಯವಾಗಿ ಭತ್ತದ ದರದ ಬಗ್ಗೆ ಚರ್ಚಿಸಲಾಯಿತು.ಬೆಂಬಲ ಬೆಲೆಗೆ ಆಗ್ರಹ

ಈ ಬಾರಿ ತೀವ್ರ ಬರ, ಹವಾಮಾನ ವೈಪರಿತ್ಯದಿಂದಾಗಿ ಅಕ್ಕಿ ಬೆಲೆ ಗಣನೀಯ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಭತ್ತದ ಇಳ‍ುವರಿ ಅರ್ಧಾಂಶದಷ್ಟು ಕಡಿಮೆಯಾಗುವ ಲಕ್ಷಣಗಳಿವೆ. ಅಕ್ಕಿ ದರ ಹೆಚ್ಚಿದಂತೆ ಭತ್ತದ ದರ ಕೂಡ ಏರಿಕೆಯಾಗಬೇಕಾಗಿದೆ. ಆದರೆ ಅಕ್ಕಿ ಗಿರಣಿ ಮಾಲೀಕರು ಮತ್ತು ವ್ಯಾಪಾರಸ್ಥರು ಭತ್ತದ ಖರೀದಿ ದರವನ್ನು ಏರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ರೈತ ಸಂಘಟನೆಗಳ, ಗಿರಣಿ ಮಾಲೀಕರ ತುರ್ತು ಸಭೆ ಕರೆದು, ಭತ್ತಕ್ಕೆ ನ್ಯಾಯಯುತ ಬೆಲೆ ನಿಗದಿಗೊಳಿಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.ರೈತರೇ, ತರಾತುರಿ ಬೇಡ

ಗಿರಣಿ ಮಾಲೀಕರು, ವ್ಯಾಪಾರಸ್ಥರು ಭತ್ತಕ್ಕೆ ಕ್ವಿಂಟಾಲ್‌ಗೆ ಕನಿಷ್ಟ 4,000 ರು. ದರದಲ್ಲಿ ಖರೀದಿಸುವಂತೆ ವಿನಂತಿಸಲು ತೀರ್ಮಾನಿಸಲಾಯಿತು. ರೈತರು ಕೂಡ ತರಾತುರಿಯಲ್ಲಿ ಭತ್ತವನ್ನು ಮಿಲ್‌ಗಳಿಗೆ ಹಾಕದೆ ಸರಿಯಾಗಿ ಒಣಗಿಸಿ, ಸಂಸ್ಕರಿಸಿ, ದಾಸ್ತಾನು ಇರಿಸಿ ಸೂಕ್ತ ಬೆಲೆ ಮಾರಲು ರೈತರಿಗೆ ಸೂಚಿಸಲಾಯಿತು. ಅಲ್ಲದೇ ಕಟಾವು ಯಂತ್ರಗಳ ಬಾಡಿಗೆಯನ್ನು ಮನಬಂದಂತೆ ನೀಡದೇ, ಕರ್ತಾರ್ ಯಂತ್ರಕ್ಕೆ ಪ್ರತೀಗಂಟೆಗೆ 2500 ರು. ಮತ್ತು ಸಣ್ಣ ಯಂತ್ರಗಳಿಗೆ 2,300 ರು. ಕ್ಕಿಂತ ಹೆಚ್ಚಿನ ಬಾಡಿಗೆ ದರ ನೀಡದಂತೆ ರೈತರಿಗೆ ಕರೆ ನೀಡಲಾಯಿತು.ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಭಟ್ ಇರ್ವತ್ತೂರು, ಜಿಲ್ಲಾ ಪದಾಧಿಕಾರಿಗಳಾದ ಸೀತಾರಾಮ ಗಾಣಿಗ, ಸಂತೋಷ್ ಶೆಟ್ಟಿ, ಮೋಹನ್ ದಾಸ್ ಅಡ್ಯಂತಾಯ, ನಿರ್ಮಲ, ರೇವತಿ ಕಡ್ತಲ ಹಾಗೂ ಕುಂದಾಪುರ ಮತ್ತು ಕಾರ್ಕಳ ತಾಲೂಕು ಪ್ರಮುಖರು, ಸುಭಿಕ್ಷಾ ಶೇರುದಾರರು ಹಾಗೂ ವಿವಿಧ ಗ್ರಾಮ ಸಮಿತಿ ಪ್ರಮುಖರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರ್ವಹಿಸಿ, ಚಂದ್ರಹಾಸ ಶೆಟ್ಟಿ ಇನ್ನಾ ಧನ್ಯವಾದ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿ ನಿವ್ವಳ ಲಾಭದಲ್ಲಿ ಶೇ.35ರಷ್ಟು ಏರಿಕೆ
10ರಂದು ಮಾ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’