ಗದಗ: ರಾಜ್ಯ ಸರ್ಕಾರ ಅಕ್ರಮ ಬಡ್ಡಿ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ ದಿನವೇ ಗದಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಬಡ್ಡಿ ದಂಧೆ ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಅವರ ಮನೆ ಮೇಲೆ ದಾಳಿ ಮಾಡಿ ಒಟ್ಟು ₹ 4.9 ಕೋಟಿ ನಗದು ಹಾಗೂ ಸುಮಾರು 1 ಕೆಜಿ ಬಂಗಾರ, ಚೆಕ್ ಬುಕ್ ವಶ ಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಯಲ್ಲಪ್ಪ ಮಿಸ್ಕಿನ್, ವಿಕಾಸ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ ಬೂದಿಹಾಳ, ಮೋಹನ ಎನ್ನುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಳ್ಳಲಾಗಿದೆ. ಅಲ್ಲದೇ ದಾಳಿ ವೇಳೆ ಅನೇಕ ದಾಖಲೆಪತ್ರ, ವಾಹನ ಕೀಗಳು ಸಹ ಸಿಕ್ಕಿವೆ. ಆ ಎಲ್ಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ದಾಳಿಗೆ ಸಹಕಾರ ಸಂಘಗಳ ಅಧಿಕಾರಿಗಳು ನೆರವು ನೀಡಿದ್ದಾರೆ ಎಂದರು.
ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿಯೇ, ಆರೋಪಿಗಳ ಬಂಧನ ಕುರಿತ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಈಗಾಗಲೇ ಆದಾಯ ತೆರಿಗೆ ಇಲಾಖೆಗೂ ದಾಳಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರಪಡಿಸಲಾಗುವುದು. ಇನ್ನು ಆರೋಪಿಯ ಪತ್ನಿ ಸೇರಿದಂತೆ ಇನ್ನುಳಿದ ಸಂಬಂಧಿಕರ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಆರೋಪಿತನ ಬಳಿ ಇರುವ ಜಮೀನುಗಳ ಉತಾರಗಳು, ಸೈಟ್ ದಾಖಲೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ಪಿ ನೇಮಗೌಡ್ರ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಎಂ.ಬಿ. ಸಂಕದ, ಡಿಎಸ್ಪಿ ಮಹಾಂತೇಶ ಸಜ್ಜನ, ಜೆ.ಎಚ್.ಇನಾಮದಾರ, ಸಂಗಮೇಶ ಶಿವಯೋಗಿ, ಧೀರಜ್ ಶಿಂಧೆ, ಸಿದ್ರಾಮೇಶ್ವರ ಗಡಾದ, ಎಲ್.ಎಂ.ಆರಿ, ಆರ್.ಸಿ. ದೊಡ್ಡಮನಿ, ನಾಗರಾಜ ಗಡದ, ಚನ್ನಯ್ಯ ಬೇವೂರ, ಎಲ್.ಕೆ. ಜೂಲಕಟ್ಟಿ, ಮಾರುತಿ, ಜೊಂಗದಂಡಕರ, ಸೋಮನಗೌಡ ಗೌಡರ, ಶಂಕುಂತಲಾ ನಾಯಕ, ಐಶ್ವರ್ಯ ನಾಗರಾಳ, ಗಿರೀಶ ಎಂ ಇದ್ದರು.