ಸಿದ್ದಾಪುರ ಏತ ನೀರಾವರಿ ಯೋಜನೆಯ ಮೂಲ ಡಿಪಿಆರ್ ನಂತೆ ಅನುಷ್ಠಾನ ಮಾಡಬೇಕು ಎಂದು ರೈತ ಮುಖಂಡ, ಜಿ.ಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಯ ಮೂಲ ಡಿಪಿಆರ್ ನಂತೆ ಅನುಷ್ಠಾನ ಮಾಡಬೇಕು. ಇಲ್ಲವಾದಲ್ಲಿ ಪಕ್ಷಾತೀತ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡ, ಜಿ.ಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸತತ ಹೋರಾಟದ ಬಳಿಕ ಆರಂಭವಾಗಿರುವ ಏತ ನೀರಾವರಿ ಯೋಜನೆಗೆ ಈಗ ತಡೆ ಬರುತ್ತಿದೆ. 2018ರಲ್ಲಿ ಸೌಕೂರು ಸಿದ್ದಾಪುರ ಏತನೀರಾವರಿ ಯೋಜನೆಗೆ 50 ಕೋಟಿ ರೂಪಾಯಿ ಮಂಜೂರಾತಿ ಆಗಿದ್ದು, ಅದರಲ್ಲಿ ಕಾಣದ ಕೈಗಳ ಕಾರಣದಿಂದ ಸಿದ್ಧಾಪುರ ಬಿಟ್ಟು ಹೋಗಿತ್ತು. ಬಳಿಕ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಸಂಸದ ರಾಘವೇಂದ್ರ ಅವರಲ್ಲಿ ಮನವಿ ಮಾಡಿ 2019ರಲ್ಲಿ ಡಿಪಿಆರ್ ಆಗಿ 165 ಕೋಟಿ ರೂಪಾಯಿ ಮಂಜೂರಾತಿಯಾಯಿತು. 2023ರಲ್ಲಿ ಶಿವಮೊಗ್ಗದ ಕಂಪೆನಿಗೆ ಟೆಂಡರ್ ಆಗಿತ್ತು. ಆದರೆ ಅವರು ಕೆಲಸ ಮಾಡಲು ಮುಂದೆ ಬರಲಿಲ್ಲ. ಬಳಿಕ ರಾಜೇಶ ಕಾರಂತ ಅವರಿಗೆ ಮರು ಟೆಂಡರ್ ಆಗಿ ಕಳೆದ ಎರಡು ತಿಂಗಳ ಹಿಂದೆ ಸಿದ್ದಾಪುರದಿಂದ ಕಾಮಗಾರಿಯ ಪೈಪ್ ಲೈನ್ ಆರಂಭಿಸಿದ್ದರು. ಆಗ ನಾವು ಪಂಪ್ ಹೌಸ್ನಿಂದಲೇ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದೆವು. ಮೂಲ ಡಿಪಿಆರ್ನಲ್ಲಿರುವಂತೆ ಪಂಪ್ ಹೌಸ್ ಬಳಿ ಕಾಮಗಾರಿ ಆರಂಭಿಸಲು ತೆರಳಿದಾಗ ಅಲ್ಲಿನ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಅಧಿಕಾರಿಗಳನ್ನು ಸಂಪರ್ಕಿಸಿದಾಗ ನಮಗೆ ಸರ್ಕಾರದ ಪತ್ರವಿದೆ. ಇಲ್ಲಿ ಕಾಮಗಾರಿ ಮಾಡುವಂತಿಲ್ಲ ಎಂದರು. ನಾವು ನಿಗಮವನ್ನು ಸಂಪರ್ಕಿಸಿ ಮೂಲ ಯೋಜನೆಯಂತೆ ಕಾಮಗಾರಿ ನೆಡೆಸಲು ಮನವಿ ಕೊಟ್ಟೆವು. ಮೂಲಯೋಜನೆಯಂತೆ ಕಾಮಗಾರಿ ನಡೆಸಿದರೆ ಹೊಳೆಯಲ್ಲಿರುವ ಶಿವಲಿಂಗಕ್ಕೆ ಸಮಸ್ಯೆಯಾಗುತ್ತದೆ. ಜಲಚರಗಳಿಗೆ ತೊಂದರೆಯಾಗುತ್ತದೆ. ಕೆಳಭಾಗದಲ್ಲಿರುವ ರೈತರಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣವನ್ನಿಟ್ಟುಕೊಂಡು ಮೂಲಯೋಜನೆಯನ್ನು ತಡೆಯುವ ಕೆಲಸವಾಗುತ್ತಿದೆ ಎಂದರು.

ಇದು ಸಿದ್ದಾಪುರದ ಸಾರ್ವಜನಿಕರಿಗೆ ಸಂಬಂಧಪಟ್ಟ ವಿಚಾರ. ಡ್ಯಾಂನ್ನು ಕೆಳಭಾಗದಲ್ಲಿ ಮಾಡಿದರೆ ಚೆಕ್ ಡ್ಯಾಂ ಮಾಡಬೇಕಾಗುತ್ತದೆ. ಅರಣ್ಯ ಇಲಾಖೆಯ ನಿರಾಪೇಕ್ಷಣೆ ಬೇಕಾಗುತ್ತದೆ. ಹೆಚ್ಚಿನ ಅನುದಾನ ಬೇಕಾಗುತ್ತದೆ. ಇದೆಲ್ಲಾ ಆಗುವಾಗ ಇನ್ನಷ್ಟು ಸಮಯ ತಗೆದುಕೊಳ್ಳುತ್ತದೆ. ಈಗಾಗಲೇ ಸಿದ್ಧಾಪುರ ಏತ ನೀರಾವರಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ನಿರ್ಣಯ ಮಾಡಲಾಗಿದೆ ಎಂದರು.ಮೂಲ ಡಿಪಿಆರ್ ಇದ್ದಂತೆ ಯೋಜನೆ ಅನುಷ್ಠಾನವಾಗಬೇಕು, ಇಲ್ಲದಿದ್ದರೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು. ಬೈಂದೂರು ಶಾಸಕರು ಕೂಡಾ ನಮ್ಮೊಂದಿಗೆ ಇರುವುದಾಗಿ, ಅವಶ್ಯಕತೆ ಇದ್ದರೆ ಧರಣಿ ಕುಳಿತುಕೊಳ್ಳುವುದಾಗಿ ತಿಳಿಸಿದ್ದಾರೆ. ಹಾಗಾಗಿ ಸರ್ಕಾರ, ರೈತರು ಹಿತಾಸಕ್ತಿ ಗಮನಿಸಬೇಕು ಎಂದರು. ಹರ್ಷ, ಭೋಜರಾಜ ಶೆಟ್ಟಿ, ಕೃಷ್ಣ ಪೂಜಾರಿ, ಶೇಖರ ಕುಲಾಲ್, ಪ್ರಕಾಶ ಶೆಟ್ಟಿ, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಬಗ್ಗೆ ಗೌರವ ಇದೆ. ಹಿಂದೆಯೂ ಅವರ ವಿರುದ್ದ ನಾವು ಮಾತನಾಡಿಲ್ಲ. ಮುಂದೆಯೂ ಮಾತನಾಡುವುದಿಲ್ಲ. ಈ ಭಾಗದ ಜನರ ಸಮಸ್ಯೆಯನ್ನು ಅರಿತು ಅವರು ರೈತ ಹೋರಾಟಕ್ಕೆ ಬೆಂಬಲ ಕೊಟ್ಟರೆ ಜನರೇ ಅವರನ್ನು ಅಭಿನಂದಿಸುತ್ತಾರೆ. ಬಿಜೆಪಿಯ ಶಾಸಕರು, ಸಂಸದರು ಉದ್ದಿಮೆದಾರರ ಪರವಾಗಿ ಇಲ್ಲ. ಇಬ್ಬರೂ ರೈತರ ಪ್ರಾಮಾಣಿಕ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಯಾವ ಗೊಂದಲವೂ ಇಲ್ಲ ಎಂದು ರೋಹಿತ್ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.