ಕನ್ನಡಪ್ರಭ ವಾರ್ತೆ ಮಂಡ್ಯ
ರೈತ ಸಭಾಭವನ ನವೀಕರಣಕ್ಕೆ 4 ಕೋಟಿ ರು. ಯೋಜನೆ ರೂಪಿಸಲಾಗಿದೆ. ಸಂಸದರು, ಶಾಸಕರ ಅನುದಾನದಲ್ಲಿ ಶೀಘ್ರ ನವೀಕರಣ ಕಾರ್‍ಯ ಕೈಗೆತ್ತಿಕೊಳ್ಳಲಾಗುವುದು ಎಂದು ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಯು.ಸಿ.ಶೇಖರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ರೈತ ಸಭಾ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ಯೋಜನೆ ರೂಪಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದ್ದಾರೆ. ಅದರಂತೆ 4 ಕೋಟಿ ರು. ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲೇ ಉತ್ತಮ ರೈತ ಭವನ ಎಂದು ರೈತ ಸಭಾಂಗಣ ಹೆಸರಾಗಿತ್ತು. ಸಭಾಂಗಣ ನವೀಕರಣಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದರು.ಸೆ.21ರಂದು ವಾರ್ಷಿಕ ಸಭೆ:
ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 53ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸೆ.21ರ ಶನಿವಾರ ಬೆಳಗ್ಗೆ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದರು.ಪ್ರತಿ ಬಾರಿಯೂ ನಡೆದ ಸಭೆಯಲ್ಲಿ ಸದಸ್ಯರು ಆಹ್ವಾನ ಪತ್ರಿಕೆ ತಲುಪಿಲ್ಲ ಎಂಬ ಆರೋಪ ಮಾಡುತ್ತಲೇ ಇರುತ್ತಾರೆ. ನಾವು ಎಲ್ಲರಿಗೂ ಕಳುಹಿಸಿದ್ದೇವೆ. ಎಲ್ಲ ಸದಸ್ಯರು ಅಂದು ನಡೆಯುವ ಸಭೆಗೆ ಹಾಜರಾಗುವಂತೆ ಅವರು ಮನವಿ ಮಾಡಿದರು.
ಇದೇ ವೇಳೆ 13 ಮಂದಿ ಪ್ರತಿಭಾನ್ವಿತ ಸದಸ್ಯರ ಮಕ್ಕಳಿಗೆ ವಿದ್ಯಾಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಜೆ.ಪಿ.ಮಹೇಶ, ಬೇಲೂರು ಸೋಮಶೇಖರ್, ಕೆ.ಸಿ. ರವೀಂದ್ರ, ಪುನೀತ್, ಯೋಗೇಶ್, ಉದಯ್, ಪಾಪಯ್ಯ, ಹಾಲಹಳ್ಳಿ ಅಶೋಕ್ ಸೇರಿದಂತೆ ಹಲವರು ಇದ್ದರು.ನಾಳೆ ಗ್ರಾಹಕ ಸಂಪರ್ಕ ಸಭೆಮಳವಳ್ಳಿ: ಸೆಸ್ಕ್ ನ ಮಳವಳ್ಳಿ ನಗರ ಮತ್ತು ಗ್ರಾಮೀಣದ ಉಪವಿಭಾಗದ ಕಚೇರಿಯಲ್ಲಿ ಸೆ.21ರಂದು ಬೆಳಗ್ಗೆ 11ಗಂಟೆಗೆ ಗ್ರಾಹಕ ಸಂಪರ್ಕ ಸಭೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗ್ರಾಹಕರು ತಮ್ಮ ದೂರುಗಳನ್ನು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.