ರಾಮನಗರ: ಬಿಡಿಸಿಸಿ ಬ್ಯಾಂಕ್ ವತಿಯಿಂದ ಆ.23ರಂದು ನಗರದ ಅಂಬೇಡ್ಕರ್ ಭವನದಲ್ಲಿ 40 ಕೋಟಿ ಕೆಸಿಸಿ ಬೆಳೆ ಸೇರಿ ವಿವಿಧ ಸಾಲ ವಿತರಣೆ ಹಾಗೂ ಗ್ರಾಹಕರ ದಿನಾಚರಣೆ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ನಿರ್ದೇಶಕ ಯರೇಹಳ್ಳಿ ಮಂಜು ತಿಳಿಸಿದರು.
ನಗರದ ಅರ್ಚಕರಹಳ್ಳಿ ವಿಎಸ್ ಎಸ್ ಎಸ್ ಎನ್ ಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ತಾಲೂಕಿನ 21 ಸೊಸೈಟಿಗಳಿಗೆ 16 ಕೋಟಿ ರು.ಕೆಸಿಸಿ ಬೆಳೆ ಸಾಲ, ಸ್ವ ಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣೆ ಹಾಗೂ ಸ್ವಯಂ ಉದ್ಯೋಗ ಸಾಲ ಸೇರಿ ಒಟ್ಟಾರೆ 40 ಕೋಟಿ ರು.ಗಳ ಸಾಲ ವಿತರಣೆ ಮಾಡಲಾಗುತ್ತಿದೆ ಎಂದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೈನುಗಾರಿಕೆ ಸಾಲ, ಶಾಸಕ ಬಾಲಕೃಷ್ಣ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಸಾಲ, ಶಾಸಕ ಇಕ್ಬಾಲ್ ಹುಸೇನ್ ಕೆಸಿಸಿ ಬೆಳೆ ಸಾಲ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಅತ್ಯುತ್ತಮ ಗ್ರಾಹಕರ ಪ್ರಶಸ್ತಿ, ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ ಸ್ವ ಸಹಾಯ ಸಂಘಗಳ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ಸಾಲ ವಿತರಣೆ:ನಬಾರ್ಡ್ ಸಹಯೋಗದಲ್ಲಿ ಬಿಡಿಸಿಸಿ ಬ್ಯಾಂಕ್ ಹೈನುಗಾರಿಕೆಗಾಗಿ ರೈತರಿಗೆ 1.20 ಲಕ್ಷ ರುಪಾಯಿ ಸಾಲ ನೀಡುತ್ತಿತ್ತು. ಈಗ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸೂಚನೆಯಂತೆ 1.20 ಲಕ್ಷ ರು.ಗಳಿದ್ದ ಹೈನುಗಾರಿಕೆ ಸಾಲವನ್ನು 1.80 ಲಕ್ಷ ರುಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಪಂಪ್ ಸೆಟ್ ಗಳಿಗೆ ಸಬ್ಸಿಡಿ ಸಾಲ ವಿತರಣೆ ಮಾಡುವ ಚಿಂತನೆ ನಡೆದಿದೆ ಎಂದರು.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆ ಸಾಲ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರ ತಲಾ ಶೇಕಡ 50ರಷ್ಟು ಭರಿಸುತ್ತಿತ್ತು. ಆದರೀಗ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹೊರೆಯಾಗುತ್ತದೆ ಎಂಬ ನೆಪವೊಡ್ಡಿ ಶೇಕಡ 50ರಷ್ಟು ಪಾಲನ್ನು ನೀಡಲು ನಿರಾಕರಿಸಿದೆ. ಆಯಾಯ ರಾಜ್ಯ ಸರ್ಕಾರಗಳೇ ನಬಾರ್ಡ್‌ನಿಂದ ಬಡ್ಡಿಗೆ ಸಾಲ ಪಡೆದು ನೀಡುವಂತೆ ಸೂಚಿಸಿದೆ. ಈ ರೀತಿ ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರದ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ಟೀಕಿಸಿದರು.ಈಗ ನಬಾರ್ಡ್‌ನಿಂದ ಬಡ್ಡಿಗೆ ಹಣ ಪಡೆದು ಬಿಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದೆ. ರಾಮನಗರ ತಾಲೂಕಿನ 21 ಸೊಸೈಟಿಗಳಿಗೆ 16 ಕೋಟಿ ರು.ಕೆಸಿಸಿ ಬೆಳೆ ಸಾಲ ವಿತರಿಸುತ್ತಿದ್ದು, ಆ ಮೂಲಕ ಬಿಡಿಸಿಸಿ ಬ್ಯಾಂಕ್ ರೈತ ಸ್ನೇಹಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ರಸಗೊಬ್ಬರ ಕೊರತೆ ಕಾಡುತ್ತಿದ್ದು, ಇದಕ್ಕೂ ಕೇಂದ್ರ ಸರ್ಕಾರ ಸಕಾಲದಲ್ಲಿ ಸ್ಪಂದಿಸುತ್ತಿಲ್ಲ. ಆದರೂ ರಾಜ್ಯ ಸರ್ಕಾರ ಮಾರ್ಕೆಟಿಂಗ್ ಫೆಡರೇಷನ್ ವತಿಯಿಂದ ಸೊಸೈಟಿಗಳಿಗೆ ರಸಗೊಬ್ಬರ ಸರಬರಾಜು ಮಾಡುತ್ತಿದೆ.ರಸಗೊಬ್ಬರ ದಾಸ್ತಾನಿಗಾಗಿ ವೇರ್ ಹೌಸ್ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗುತ್ತಿದ್ದು, ಇಲ್ಲಿ ವೇರ್ ಹೌಸ್ ನಿರ್ಮಾಣವಾದಲ್ಲಿ ರಸಗೊಬ್ಬರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಯರೇಹಳ್ಳಿ ಮಂಜು ತಿಳಿಸಿದರು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ನಿರ್ದೇಶಕರಾದ ಮಹದೇವಯ್ಯ, ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಎಸ್.ಪಿ.ಜಗದೀಶ್, ಮುಖಂಡರಾದ ಮೋಹನ್, ವಿನಯ್, ಕ್ಯಾಸಾಪುರ ಮಂಜುನಾಥ್, ಪಂಚಾಕ್ಷರಿ, ಮರಿಸ್ವಾಮಿ, ಆನಂದ್ ಮತ್ತಿತರರಿದ್ದರು.21ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಅರ್ಚಕರಹಳ್ಳಿ ವಿಎಸ್‌ಎಸ್‌ಎಸ್‌ಎನ್ ಕಚೇರಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.