ಮುಖ್ಯಾಂಶಗಳು- ನಗರದ 163 ಕಡೆ ಚಾನಲ್‍ಗಳಿಗೆ ಅತಿಯಾದ ಮಲೀನ ನೀರು ಸೇರುತ್ತಿರುವುದು ಪತ್ತೆ
- ಇಡೀ ಶಿವಮೊಗ್ಗ ನಗರ ನಾಲ್ಕು ಭಾಗಗಳಾಗಿ ವಿಂಗಡಿಸಿ, ಕ್ರಿಯಾಯೋಜನೆಗೆ ಕ್ರಮ- ಪಾಲಿಕೆಯಿಂದ ಮಲೀನ ನೀರು ಸಂಗ್ರಹಕ್ಕೆ ಪಾಯಿಂಟ್‍ಗಳ ಗುರುತಿಸಿ ಶುದ್ಧೀಕರಿಸಿ ಹರಿಸಲು ಯೋಜನೆ
- ಅಡುಗೆ ಮನೆ, ಬಚ್ಚಲು, ಯುಜಿಡಿ ನೀರು ಇನ್ನಿತರ ಮಲಿನ ನೀರು ಸರಾಗವಾಗಿ ಯುಜಿಡಿಗೆ ಹರಿಸಲು ಕ್ರಮ - ಹೊಸ ಯುಜಿಡಿ ಕಾಮಗಾರಿ ನಡೆಸಲಾಗಿದ್ದರೂ, ಇನ್ನೂ ಶೇ.20ರಷ್ಟು ಯುಜಿಡಿ ಸಂಪರ್ಕ ಬಾಕಿ - ಮಲಿನ ನೀರು ಹರಿಸದಂತೆ ಫಲಕಗಳನ್ನು ಅಳವಡಿಸಿ ಜನಜಾಗೃತಿ ಮೂಡಿಸಲು ಆದ್ಯತೆ - ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕ ನಿರ್ವಹಣೆಗೆ ₹2.68 ಕೋಟಿ ಅನುದಾನ ಬಿಡುಗಡೆ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಸರ್ಕಾರವು ಮಲಿನಗೊಂಡಿರುವ ತುಂಗಾನದಿ ನೀರು ಶುದ್ಧೀಕರಣಕ್ಕೆ ತಾತ್ಕಾಲಿಕವಾಗಿ ₹40 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇಡೀ ನಗರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಮಲಿನ ನೀರು ತುಂಗಾನದಿಗೆ ಸೇರದಂತೆ ಮಾರ್ಚ್ 31 ರೊಳಗೆ ಅಂತಿಮ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ನಗರದ ಶಾಸಕರ ಕರ್ತವ್ಯ ಭವನದಲ್ಲಿ ಶುದ್ಧ ತುಂಗಾನದಿ ಕ್ರಿಯಾ ಯೋಜನೆ ಸಂಬಂಧ ಮಂಗಳವಾರ ಸಾರ್ವಜನಿಕರು, ಪರಿಸರವಾದಿಗಳು ಮತ್ತು ಕರ್ನಾಟಕ ನೀರು ಸರಬರಾಜು ಮಂಡಳಿ, ಒಳಚರಂಡಿ ಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶುದ್ಧ ತುಂಗಾ ನದಿಯ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಮುಂದಿನ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಮತ್ತು ಪರಿಸರ ತಜ್ಞರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ನಗರದ 163 ಕಡೆ ಚಾನಲ್‍ಗಳಿಗೆ ಮಲೀನ ನೀರು ಸೇರುತ್ತಿದೆ ಎಂದು ಗುರುತಿಸಿದ್ದೇವೆ. ಮೂರು ನೀರು ಶುದ್ಧೀಕರಣ ಘಟಕಗಳು ಮತ್ತು ಹತ್ತು ವೆಟ್‍ವೆಲ್‍ಗಳ ಮೂಲಕ ಯುಜಿಡಿ ನೀರಿನ್ನು ಸಂಗ್ರಹಿಸಿ ಶುದ್ದೀಕರಿಸುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಮಹಾನಗರ ಪಾಲಿಕೆಯಿಂದ ಮಲೀನ ನೀರು ಸಂಗ್ರಹಕ್ಕೆ ಪಾಯಿಂಟ್‍ಗಳನ್ನು ಗುರುತಿಸಿ ಶುದ್ಧೀಕರಿಸಿ ಬಿಡುವ ಯೋಜನೆಯನ್ನು ತಯಾರಿಸಿದ್ದೇವೆ ಎಂದರು. ತುಂಗೆಗೆ ಮಲೀನ ನೀರು ಸೇರುತ್ತಿದ್ದು, ತುಂಗಾ ನದಿ ನೀರಿನಲ್ಲಿ ಕುಡಿಯಲು ಯೋಗ್ಯವಲ್ಲದ ಅಲ್ಯೂಮಿನಿಯಂ ಅಂಶವಿದೆ ಎಂಬ ವರದಿ ಬಂದಿದೆ. ಹಿನ್ನಲೆಯಲ್ಲಿ ವಿಧಾನಸಭೆಯಲೂ ಕೂಡ ಕುಲಂಕುಷವಾಗಿ ಶುದ್ಧ ತುಂಗೆ ಮಲೀನವಾಗುತ್ತಿರುವ ಬಗ್ಗೆ ಸದನದ ಗಮನ ಸೆಳೆಯಲಾಗಿತ್ತು.ಕಳೆದ 30 ವರ್ಷಗಳಿಂದ ಕುಡಿಯುವ ನೀರಿಗೆ ಮತ್ತು ಯುಜಿಡಿಗಾಗಿ ಅನೇಕ ಯೋಜನೆಗಳನ್ನು ಮಾಡುತ್ತ ಬಂದಿದ್ದೇವೆ. ಈಗ ನಗರ ಸಾಕಷ್ಟು ಬೆಳೆದಿದೆ. ಈ ಹಿಂದೆ ಮಾಡಿದ ಯುಜಿಡಿಗಳು ಈಗ ಹಾಳಾಗಿವೆ. ಹೊಸ ಯುಜಿಡಿ ಕಾಮಗಾರಿ ನಡೆಸಲಾಗಿದ್ದರೂ, ಇನ್ನೂ ಶೇ.20ರಷ್ಟು ಯುಜಿಡಿ ಸಂಪರ್ಕ ಬಾಕಿಯಿದೆ ಎಂದು ತಿಳಿಸಿದರು.ನಾಗರೀಕರ ಸಹಕಾರ ಬಹಳ ಮುಖ್ಯ ನಮ್ಮ ಎಲ್ಲ ಇಲಾಖೆಗಳು ಮತ್ತು ಪಾಲಿಕೆಯೊಂದಿಗೆ ಪರ್ಯಾವರಣ ಟ್ರಸ್ಟ್ ಮತ್ತು ನಿರ್ಮಲ ತುಂಗಾ ಅಭಿಯಾನದ ಸದಸ್ಯರು ಕೈಜೋಡಿಸಿದ್ದಾರೆ. ಒಂದು ಟೈಮ್ ಬೌಂಡ್ ಹಾಕಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡುತ್ತೇವೆ. ಅದೇ ರೀತಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕ ನಿರ್ವಹಣೆಗೆ 2.68 ಕೋಟಿ ಅನುದಾನ ಬಂದಿದೆ. ಅಡುಗೆ ಮನೆಯ, ಬಚ್ಚಲಿನ ನೀರು ಮತ್ತು ಯುಜಿಡಿ ನೀರು ಎಲ್ಲವನ್ನು ಗುರುತಿಸಿ ಸರಾಗವಾಗಿ ಎಲ್ಲವೂ ಯುಜಿಡಿಗೆ ಬರುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ನಾಗರೀಕರ ಸಹಕಾರ ಬಹಳ ಮುಖ್ಯ ಎಂದರು.ಎಲ್ಲಿ ಬೇಕಲ್ಲಿ ಕಸ ಬಿಸಾಡುವುದು, ಆಸ್ಪತ್ರೆ ತ್ಯಾಜ್ಯಗಳು, ತ್ಯಾಜ್ಯಗಳನ್ನು ನದಿಗೆ ಬಿಸಾಡುವುದು ಎಲ್ಲವನ್ನು ಕೂಡ ಅಧಿಕಾರಿಗಳು ಗಮನಿಸಿದ್ದಾರೆ. ಅಲ್ಲಲ್ಲಿ ಫಲಕಗಳನ್ನು ಕೂಡ ಅಳವಡಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಲಾಗುವುದು. ಗುಂಡಪ್ಪಶೆಡ್ ಮತ್ತು ಆಟೋ ಕಾಂಪ್ಲೆಕ್ಸ್‌ನಿಂದ ನೀರು ಚಾನಲ್‍ಗೆ ಸೇರದಂತೆ ವೆಟ್‍ವೆಲ್ ನಿರ್ಮಿಸಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೋಟೆ ರಸ್ತೆ, ಸೀಗೆಹಟ್ಟಿಯ ಭಾಗದ, ಮಲೀನ ನೀರು ಶುದ್ಧೀಕರಣ ಘಟಕಕ್ಕೆ ಹೋಗುವಂತೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಕೆಲವೆಡೆ ಚಾನಲ್‍ಗೆ ಕೆರೆಗೆ ಮಲೀನ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದೆ ಎಂದರು.ಈ ಸಂದರ್ಭ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಾ ಅಭಿಯಾನದ ಪ್ರಮುಖರಾದ ಬಿ.ಎಂ. ಕುಮಾರಸ್ವಾಮಿ, ಬಾಲಕೃಷ್ಣ ನಾಯ್ಡು, ಎಂ.ಶಂಕರ್, ಕೆಯುಡಬ್ಲ್ಯೂಎಸ್ ಅಧಿಕಾರಿ ಸಿದ್ದಪ್ಪ, ಒಳಚರಂಡಿ ಎಡಬ್ಲ್ಯೂಇ ಮಿಥುನ್, ಎಸ್.ವಿ.ಅಶೋಕ್ ಕುಮಾರ್, ಕಾಂತೇಶ್ ಕದರಮಂಡಲಗಿ ಮತ್ತಿತರರು ಇದ್ದರು.
- - - -26ಎಸ್‌ಎಂಜಿಕೆಪಿ05: ಶಿವಮೊಗ್ಗ ನಗರದ ಶಾಸಕರ ಕರ್ತವ್ಯ ಭವನದಲ್ಲಿ ಶುದ್ಧ ತುಂಗಾ ನದಿಯ ಕ್ರಿಯಾಯೋಜನೆಗೆ ಸಂಬಂಧ ಮಂಗಳವಾರ ಸಭೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.