ಕನ್ನಡಪ್ರಭ ವಾರ್ತೆ ಹುಣಸೂರು
ಕಳೆದೊಂದು ವಾರ ಸುರಿದ ಸತತ ಮಳೆಗೆ ಹುಣಸೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 40ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿರುವುದಲ್ಲದೇ 70 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬಾಳೆ ಗಿಡಗಳು ನಾಶವಾಗಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.ನಗರಸಭಾ ಕಟ್ಟಡದಲ್ಲಿನ ತಮ್ಮ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಮಳೆ ವಿರಾಮ ನೀಡಿದೆ. ಹಾಗಾಗಿ ಹನಗೋಡು ಅಣೆಕಟ್ಟೆಯಲ್ಲಿ ಮತ್ತು ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ಇಳಿದಿದೆ. ಆದರೆ ಸತತ ಮಳೆಯಿಂದಾಗಿ ನಗರದಲ್ಲಿ 5 ಮನೆಗಳು ಸೇರಿದಂತೆ ತಾಲೂಕಿನವ ವಿವಿಧ ಗ್ರಾಮಗಳಲ್ಲಿ 35ಕ್ಕೂ ಹೆಚ್ಚು ಮನೆಗಳು ನಾಶವಾಗಿದೆ ಎಂದರು.
ನಗರದ ಮಂಜುನಾಥ ಬಡಾವಣೆಯಲ್ಲಿ ಮಳೆ ನೀರು ಪ್ರವಾಹೋಪಾದಿಯಲ್ಲಿ ಹರಿದು ಮನೆಯೊಳಗೆ ನುಗ್ಗಿದೆ. ಹನಗೋಡು ಹೋಬಳಿ ವ್ಯಾಪ್ತಿಯ ಕೋಣನಹೊಸಳ್ಳಿ, ಸಿಂಡೇನಹಳ್ಳಿ, ನಿಲುವಾಗಿಲು, ಹನಗೋಡು, ದಾಸನಪುರ, ಹಿಂಡುಗುಡ್ಲು, ಕಿರಂಗೂರು, ಹರಳಹಳ್ಳಿ, ಕಾಮಗೌಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಜಮೀನಿನಲ್ಲಿ ನೀರು ನಿಂತ ಪರಿಣಾಮ ಶುಂಠಿ, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳು ಕೊಳೆಯುತ್ತಿವೆ. ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯ ಕುರಿತು ತಾಲೂಕು ಆಡಳಿತ ವರದಿ ಸಲ್ಲಿಸಲಿದ್ದು ಪರಿಹಾರ ದೊರಕುವ ನಿರೀಕ್ಷೆಯಿದೆ ಎಂದರು.ಸಮಸ್ಯೆ ಪರಿಹಾರಕ್ಕೆ ಕ್ರಮ
ಮಂಜುನಾಥ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ 3.5 ಕೋಟಿ ರೂ.ಗಳ ವೆಚ್ಚದಡಿ ರಾಜಕಾಲುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೂ ಜೋರಾದ ಮಳೆಗೆ ಇಡೀ ಬಡಾವಣೆ ಅಸ್ತವ್ಯಸ್ತವಾಗುತ್ತಿದ್ದು, ರಾಜಕಾಲುವೆ ಕಾಮಗಾರಿ ಸಂಪೂರ್ಣಗೊಳ್ಳುವುದು ಅನಿವಾರ್ಯವಾಗಿದೆ. ಮಾತ್ರವಲ್ಲದೇ ರಾಜಕಾಲುವೆಗೆ ಹೆಚ್ಚಿನ ಒತ್ತಡ ಬೀಳದಿರುವಂತೆ ಕ್ರಮವಹಿಸಲು ನಗರದ ಎಪಿಎಂಸಿಯಿಂದ ಮಂಜುನಾಥ ದೇವಾಲಯದವರೆಗಿನ ಮುಖ್ಯರಸ್ತೆಯ ಬದಿಯಲ್ಲಿ ರಾಜಕಾಲುವೆಗೆ ಪರ್ಯಾಯವಾಗಿ ಮತ್ತೊಂದು ದೊಡ್ಡದಾದ ಚರಂಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ, ಸತೀಶ್ ಕುಮಾರ್, ಶ್ರೀನಾಥ್, ರಾಣಿ ಪೆರುಮಾಳ್, ದೇವರಾಜ್, ತಹಸೀಲ್ದಾರ್ ಮಂಜುನಾಥ್, ನಗರಸಭೆ ಪೌರಾಯುಕ್ತೆ ಕೆ. ಮಾನಸ, ಎಇಇ ಶರ್ಮಿಳಾ, ಪರಿಸರ ಎಂಜಿನಿಯರ್ ಎಲ್. ರೂಪಾ ಸೇರಿದಂತೆ ನಗರಸಭೆ ಸಿಬ್ಬಂದಿ ಇದ್ದರು.
ಸಭೆಯ ನಂತರ ಮಂಜುನಾಥ ಬಡಾವಣೆಯಲ್ಲಿ ನಡೆದಿರುವ ರಾಜಕಾಲುವೆ ಕಾಮಗಾರಿಯನ್ನು ಶಾಸಕ ಹರೀಶ್ ಗೌಡ ವೀಕ್ಷಿಸಿದರು.