ಲೋಕಸಭೆಯಲ್ಲಿದ್ದವರು ಶೇ.೪೦ರಷ್ಟು ಕ್ರಿಮಿನಲ್‌ಗಳೇ: ಎಸ್.ಆರ್.ಹಿರೇಮಠ್

KannadaprabhaNewsNetwork |  
Published : Aug 10, 2025, 01:30 AM IST
೯ಕೆಎಂಎನ್‌ಡಿ-೧ಮಂಡ್ಯದ ಗಾಂಧಿ ಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ದಿಕ್ಸೂಚಿ ಭಾಷಣ ಮಾಡಿದರು. | Kannada Prabha

ಸಾರಾಂಶ

ಹಣ- ಹೆಂಡಕ್ಕೆ ನಮ್ಮತನವನ್ನು ಮಾರಿಕೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಳಿಸಲು ಯುವಶಕ್ತಿ ಸಂಘಟಿತ ಹೋರಾಟದ ಮೂಲಕ ಯಶಸ್ಸು ಸಾಧಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭೆಯಲ್ಲಿ ಶೇ.೨೦ರಷ್ಟಿದ್ದ ಕ್ರಿಮಿನಲ್‌ಗಳ ಸಂಖ್ಯೆ ಈಗ ಶೇ.೪೦ಕ್ಕೆ ಏರಿಕೆಯಾಗಿದೆ. ಪ್ರಜಾಪ್ರಭುತ್ವದ ಮಾಲೀಕರಾದ ಮತದಾರರು ಕುಂಭಕರ್ಣ ನಿದ್ರೆಗೆ ಜಾರಿದಾಗ ರಾಜಕಾರಣಿಗಳು ಇದರ ಲಾಭ ಪಡೆದು ಮಾಡಬಾರದ್ದನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಜನರು ಜಾಗೃತರಾಗಿ, ಸೃಜನಶೀಲರಾಗಿ ಮುಂದುವರಿಯಬೇಕು. ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮರು ಸ್ಥಾಪನೆಯಾಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಎಚ್ಚರಿಸಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆರನೇ ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಚುನಾವಣಾ ಸುಧಾರಣೆಗಳ ಕುರಿತು ದಿಕ್ಸೂಚಿ ಭಾಷಣ ಮಾಡಿದರು.

ಹಣ- ಹೆಂಡಕ್ಕೆ ನಮ್ಮತನವನ್ನು ಮಾರಿಕೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಳಿಸಲು ಯುವಶಕ್ತಿ ಸಂಘಟಿತ ಹೋರಾಟದ ಮೂಲಕ ಯಶಸ್ಸು ಸಾಧಿಸಬೇಕಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಈ ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿಕೊಂಡಿದೆ. ಈ ಭ್ರಷ್ಟಾಚಾರದ ಮೂಲವೇ ಚುನಾವಣೆಯಲ್ಲಿನ ಅಕ್ರಮಗಳು. ಈ ಮೂಲವನ್ನು ಕಿತ್ತೆಸೆದು ದೇಶದ ಪ್ರಜಾಪ್ರಭುತ್ವವನ್ನು ಸ್ವಚ್ಛಗೊಳಿಸಬೇಕಾದರೆ ಮೊದಲು ಜನ ಜಾಗೃತರಾಗಬೇಕು ಎಂದು ನುಡಿದರು.

ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಅವಕಾಶಗಳನ್ನು ಸಂವಿಧಾನ ಕೊಟ್ಟಿದೆ. ನಮ್ಮ ಸಂವಿಧಾನ ಜನಸಾಮಾನ್ಯರನ್ನು ಮಾಲೀಕರನ್ನಾಗಿ ಮಾಡಿದೆ. ಸರ್ಕಾರಿ ನೌಕರರನ್ನು ನಮ್ಮ ಸೇವಕರನ್ನಾಗಿಸಿ ಅಧಿಕಾರ ಕೊಟ್ಟಿದೆ. ಆದರೆ, ನಮ್ಮ ನ್ಯಾಯಾಂಗ ವ್ಯವಸ್ಥೆ ಏನಾಗಿದೆ ಎಂದರೆ ತಪ್ಪು ಮಾಡಿದ ಜನಾರ್ದನ ರೆಡ್ಡಿ ಜೈಲಿಗೆ ಹೋದರು. ನಂತರ ಜಾಮೀನಿನ ಮೇಲೆ ಹೊರಬಂದು ಮತ್ತೆ ಶಾಸಕತ್ವವನ್ನು ಉಳಿಸಿಕೊಂಡರು. ಇತ್ತೀಚೆಗೆ ಪ್ರಜ್ವಲ್ ರೇವಣ್ಣನ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸಿತು. ದೇವೇಗೌಡರು ಆತನನ್ನು ಎಂಪಿ ಮಾಡಿದರು. ರೇವಣ್ಣ ತಮ್ಮ ಮಗ ಪ್ರಜ್ವಲ್ ರೇವಣ್ಣನದು ಅದೆಲ್ಲವೂ ಹಳೆ ಕಥೆ ಎನ್ನುತ್ತಾರೆ. ಆದರೆ ನ್ಯಾಯಾಲಯ ಇಷ್ಟು ಕಡಿಮೆ ಅವಧಿಯಲ್ಲಿ ಶಿಕ್ಷೆ ಪ್ರಕಟಿಸಿರುವುದು ಸಮಾಧಾನಕರ ಸಂಗತಿ ಎಂದರು.

ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಹೋರಾಟದಲ್ಲಿ ಹಿರೇಮಠ ಅವರಂತಹ ನೂರಾರು ಮಂದಿ ತಲೆ ಎತ್ತಿದರೆ ಕನಿಷ್ಠ ಪಕ್ಷ ಭ್ರಷ್ಟಾಚಾರದ ವಿಜೃಂಭಣೆಯನ್ನು ತಗ್ಗಿಸಬಹುದು. ಇವತ್ತಿನ ಚುನಾವಣೆ ವ್ಯವಸ್ಥೆ ಸರಿಪಡಿಸಿದರೆ ಪ್ರಜಾಪ್ರಭುತ್ವ ಮತ್ತೆ ಸರಿದಾರಿಗೆ ಬರಲು ಸಾಧ್ಯವಿದೆ. ನಾನು ೧೯೮೪ರಲ್ಲಿ ಮಳವಳ್ಳಿಯಲ್ಲಿ ಚುನಾವಣೆಗೆ ನಿಂತಾಗ ಜನ ನಮ್ಮೂರಿಗೆ ಕುಡಿಯಲು ನೀರು ಕೊಡಿ, ರಸ್ತೆ ಮಾಡಿಕೊಡಿ ಎಂದು ಕೇಳುತ್ತಿದ್ದರು. ಆಗ ನಾನು ಅವರ ಅಗತ್ಯತೆಗೆ ಸ್ಪಂದಿಸಿದ ಪರಿಣಾಮ ಮತ್ತೆ ನನ್ನನ್ನು ೩- ೪ ಬಾರಿ ಗೆಲ್ಲಿಸಿದರು ಎಂದು ಸ್ಮರಿಸಿದರು.

ಸಚಿವನಾದ ಬಳಿಕ ಇತಿಹಾಸದಲ್ಲೇ ಹೆಚ್ಚು ನಿವೇಶನವನ್ನು ಒಂದು ರು. ಖರ್ಚಿಲ್ಲದಂತೆ ಹಂಚಿಕೆ ಮಾಡಿದೆ. ಆದರೆ, ಇಂದು ಆ ಜನಗಳು ತಮ್ಮ ಅಗತ್ಯಗಳಿಗಾಗಿ ಐದಾರು ಲಕ್ಷ ರು.ಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಇಡೀ ಕ್ಷೇತ್ರಕ್ಕೆ ಕುಡಿಯುವ ನೀರು ಕಲ್ಪಿಸಿದ ಪರಿಣಾಮ ಜನ ನನ್ನ ಜಾತಿ, ಅಂತಸ್ತು ಯಾವುದನ್ನು ಪರಿಗಣಿಸದೆ ನನ್ನ ಕೈ ಹಿಡಿದಿದ್ದರು. ಶಿಕ್ಷಣ ಮಂತ್ರಿಯಾಗಿ, ಕಂದಾಯ ಮಂತ್ರಿಯಾಗಿ ದೇಶವೇ ಮಾದರಿಯಾಗಿ ಪರಿಗಣಿಸುವಂತಹ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದೆ. ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದು, ಕಂದಾಯ ಇಲಾಖೆಯಲ್ಲಿ ಡಿಜಿಟಲೈಸ್ ಮಾಡಿದ್ದು, ಸರ್ವೇ ವ್ಯವಸ್ಥೆಯನ್ನು ಆಧುನಿಕರಣಗೊಳಿಸಿದ್ದು ಇವೆಲ್ಲ ನನ್ನ ಸಾಧನೆ. ಇವತ್ತು ರಿಯಲ್ ಎಸ್ಟೇಟ್ ಕುಳಗಳು, ಲಿಕ್ಕರ್‌ ಬ್ಯಾರನ್‌ಗಳು ರಾಜ್ಯವಾಳುತ್ತಿವೆ. ೨೦,೦೦೦ ವೆಚ್ಚ ಮಾಡಿ ಶಾಸಕನಾಗಿದ್ದ ನಾನು ಇವತ್ತು ೧೦ ಕೋಟಿ ರು. ವೆಚ್ಚ ಮಾಡುತ್ತಿರುವ ಎಂಎಲ್‌ಎಗಳನ್ನು ಕಾಣುತ್ತಿದ್ದೇನೆ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಮಾತನಾಡಿ, ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಆಂತರಿಕ ಚುನಾವಣೆಯನ್ನು ಚುನಾವಣಾ ಆಯೋಗವೇ ನಡೆಸಬೇಕು. ಭ್ರಷ್ಟಾಚಾರ ನಡೆಯುತ್ತಿರುವುದನ್ನು ಕಂಡು ಸುಮ್ಮನಿರುವ ಮನಸ್ಸುಗಳು ಭವಿಷ್ಯದ ಕಂಠಕಗಳು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಕೆಆರ್‌ಎಸ್ ಪಕ್ಷದ ದೀಪಕ್, ಅರುಣ್‌ಕುಮಾರ್ ಉಪಸ್ಥಿತರಿದ್ದರು.

ಹೋರಾಟವಿಲ್ಲದಿದ್ದರೆ ಅಪಾಯ

ನೈತಿಕತೆಯಿಂದ ಮತ್ತು ಆತ್ಮಸ್ಥೈರ್ಯದಿಂದ ಹೋರಾಟ ಮಾಡಲು ನಿಂತವರಿಗೆ ಅಪಪ್ರಚಾರ ಮಾಡುವವರು, ನಿಂದನೆ ಮಾಡುವವರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಆದರೆ ನಾವು ಅದನ್ನು ಮೀರಿ ಬೆಳೆದು ನಿಂತಿದ್ದೇವೆ. ನಾವು ನೈತಿಕವಾಗಿ ಗಟ್ಟಿಯಾಗಿರುವುದರಿಂದ ಹೋರಾಟ ಸರಿದಾರಿಯಲ್ಲಿ ಸಾಗುತ್ತಿದೆ. ಕೋವಿಡ್, ಕೊರೋನಾಗಿಂತಲೂ ಭ್ರಷ್ಟಾಚಾರ ಕ್ಯಾನ್ಸರ್ ಗೆಡ್ಡೆಯಾಗಿ ಸಮಾಜವನ್ನು ಕಾಡುತ್ತಿದೆ. ಇದರ ಬಗ್ಗೆ ಸ್ವಚ್ಛ ಮನಸ್ಸಿನಿಂದ ಎಲ್ಲರೂ ಹೋರಾಟಕ್ಕೆ ನಿಲ್ಲದಿದ್ದರೆ ಮುಂದೆ ಸಾಮಾಜಿಕ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ.

- ಸುನಂದಾ ಜಯರಾಮ್, ರೈತ ಹೋರಾಟಗಾರ್ತಿ

ಪೊರಕೆ ಸೇವೆ ಮಾಡಿ

ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಕೋಳಿ, ಹೆಂಡ, ಹಣ ಹಂಚಲು ಬರುವವರಿಗೆ ಪ್ರತಿ ಕುಟುಂಬದ ಮಹಿಳೆಯರು ಪೊರಕೆ ಸೇವೆ ಮಾಡಿದ್ದರೆ ಇವತ್ತು ಭ್ರಷ್ಟಾಚಾರ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾಗಿ ಈಗಿನಿಂದಲೇ ಇಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು.

- ಇಂಡುವಾಳು ಚಂದ್ರಶೇಖರ್, ರೈತ ಮುಖಂಡ

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ