ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಂಡಿದ್ದು ಕನ್ನಡಿಯಷ್ಟೇ ಸ್ಪಷ್ಟವಿದ್ದರೂ ಕಾಂಗ್ರೆಸ್ಸಿನ ಕೆಲವರು ಕುಂದೂರಿನಲ್ಲಿ ರೈತರ ಸಭೆ ಹೆಸರಿನಲ್ಲಿ ಬಣ್ಣವನ್ನೇ ಹಚ್ಚಿಕೊಳ್ಳದೇ ಬಯಲಾಟ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಂದೂರಿನ ಸಭೆಯಲ್ಲಿ ಭದ್ರಾ ಬಲದಂಡೆ ನಾಲೆಯನ್ನೇ ಸೀಳಿಲ್ಲ, ಅಲ್ಲಿ ಯಾವುದೇ ಕಾಮಗಾರಿ ನಡೆಯಲು ಬಿಟ್ಟಿಲ್ಲ. ಕಾಮಗಾರಿ ಸಂಪೂರ್ಣ ನಿಂತಿದ್ದು, ಬಿಜೆಪಿಯವರು ರೈತರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆಂದು ಕಾಂಗ್ರೆಸ್ ಶಾಸಕ ಆರೋಪಿಸಿದ್ದು, ನಮ್ಮಲ್ಲಿ ವೀಡಿಯೋ, ಫೋಟೋ ಸೇರಿದಂತೆ ಅಧಿಕೃತ ದಾಖಲೆಗಳೇ ಇವೆ ಎಂದರು.
ಅಚ್ಚುಕಟ್ಟು ಕೊನೆಯ ಭಾಗಕ್ಕೆ ಇಂದಿಗೂ ನೀರು ತಲುಪುತ್ತಿಲ್ಲ. ಬಲದಂಡೆ ನಾಲೆ ಸೀಳಿದ್ದರಿಂದ ದಾವಣಗೆರೆ ಜಿಲ್ಲೆಗೆ ನೀರು ಬರುವುದೇ ಕಷ್ಟವಾಗಲಿದೆ. ರೈತರು ಕೃಷಿ ಮಾಡುವುದಿರಲಿ, ಮುಂದೆ ಕುಡಿಯುವ ನೀರಿಗೂ ಪರಿತಪಿಸಬೇಕಾಗುತ್ತದೆ. ನಾವು ಹಲವಾರು ಹೋರಾಟ ಮಾಡಿದ್ದು, ನಮ್ಮ ಹೋರಾಟದ ಬಗ್ಗೆ ರೈತರಿಗೆ ಕಾಂಗ್ರೆಸ್ಸಿನ ಶಾಸಕರು ತಪ್ಪು ಸಂದೇಶ ನೀಡುತ್ತಿದ್ದಾರೆ. ಶೀಘ್ರವೇ ನಾವೂ ಅದೇ ಕುಂದೂರಿನ, ಅದೇ ಸ್ಥಳದಲ್ಲಿ ಅಚ್ಚುಕಟ್ಟು ರೈತರ ಸಭೆ ಮಾಡಿ, ಸತ್ಯ ಸಂಗತಿ ಜನರ ಮುಂದಿಡುತ್ತೇವೆ ಎಂದು ಹೇಳಿದರು.ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ 3 ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಡ್ಯಾಂ ಹಿನ್ನೀರಿನಲ್ಲಿ ಪೈಪ್ ಲೈನ್ ಮಾಡಿ, ಒಯ್ಯಲಿ ಅಥವಾ ನದಿಯಿಂದ ಒಯ್ಯಲೆಂದು ಹೇಳುತ್ತಿದ್ದೇವೆ. ಆದರೆ, ರಾಜಕೀಯ ಕಾರಣಕ್ಕೆ ಶಾಸಕ ಶಾಂತನಗೌಡ ತಮ್ಮ ವಿರುದ್ಧ ವಿರುದ್ದ ಅನಗತ್ಯ ವಾಗ್ದಾಳಿ ಮಾಡುತ್ತಿದ್ದಾರೆ. ಸಿಡಿದೆದ್ದಿದ್ದ ಅಚ್ಚುಕಟ್ಟು ರೈತರ ಹೋರಾಟ ಮಣಿಸಲು ಪೊಲೀಸರ ಬಲವನ್ನು ಕಾಂಗ್ರೆಸ್ ಸರ್ಕಾರ ಬಳಸಿತ್ತು ಎಂದರು.
ರೈತ ಪರ ನಮ್ಮ ಹೋರಾಟವನ್ನು ಕಾಂಗ್ರೆಸ್ಸಿನ ಶಾಸಕರು ವ್ಯಂಗ್ಯ ಮಾಡಿದ್ದಾರೆ. ನಮ್ಮನ್ನು ನಿರುದ್ಯೋಗಿಗಳೆಂದಿದ್ದಾರೆ. ಶಾಸಕ ಶಾಂತನಗೌಡ ಹಿರಿಯರು. ಬಣ್ಣವನ್ನೇ ಹಚ್ಚದೇ, ನಾಟಕ ಮಾಡುವ ಮಹಾನ್ ಕಲಾವಿದರು. ಆದರೆ, ಅಧಿಕಾರ ಶಾಶ್ವತವಲ್ಲ. ಈಗಲೂ ಐಸಿಯುನಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಅಡ್ರೆಸ್ ಸಹ ಇಲ್ಲದಂತೆ ಸೋಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಂ.ಸತೀಶ ಕೊಳೇನಹಳ್ಳಿ. ಚಂದ್ರಶೇಖರ ಪೂಜಾರ, ಕುಂದೂರು ಅನಿಲಕುಮಾರ, ಕುಮಾರ, ಎನ್.ಎಚ್.ಹಾಲೇಶ ಇತರರು ಇದ್ದರು.
ಹೊನ್ನಾಳಿ ತಾ. ಕುಂದೂರಿನಲ್ಲಿ ಶನಿವಾರ ರೈತರ ಸಭೆ ಮಾಡಿ, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಶೀಘ್ರದಲ್ಲೇ ಅದೇ ಗ್ರಾಮದ ಅದೇ ಜಾಗದಲ್ಲೇ ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಭದ್ರಾ ಅಚ್ಚುಕಟ್ಟು ರೈತರ ಸಮಾವೇಶವನ್ನು ನಡೆಸಿ, ಪ್ರತ್ಯುತ್ತರ ನೀಡಲಾಗುವುದು.ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.
ಕಾಂಗ್ರೆಸ್ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೇ ಗುಂಪು ರಚಿಸುತ್ತಿದ್ದಾರೆ. ಹಾಗಾಗಿಯೇ ದಾವಣಗೆರೆಯಲ್ಲಿ ರೈತರ ಸಭೆ ಮಾಡದೇ, ಹೊನ್ನಾಳಿ ಕ್ಷೇತ್ರದ ಕುಂದೂರಿನಲ್ಲಿ ಸಭೆ ಮಾಡಿದ್ದಾರೆ. ಈ ಶಾಸಕರು ಸಚಿವರಾಗಲು ಹೀಗೆಲ್ಲಾ ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ.ಮಾಡಾಳ ಮಲ್ಲಿಕಾರ್ಜುನ, ಚನ್ನಗಿರಿ ಬಿಜೆಪಿ ಮುಖಂಡ.