ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 409 ಬಾಲ್ಯವಿವಾಹ ಪ್ರಕರಣ

KannadaprabhaNewsNetwork | Published : Dec 9, 2024 12:47 AM

ಸಾರಾಂಶ

ಬಾಲ್ಯ ವಿವಾಹ ಮತ್ತು ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ 2550 ಪ್ರಕರಣ ದಾಖಲಾಗಿದ್ದವು.

ಹೂವಿನಹಡಗಲಿ: ಬಾಲ್ಯ ವಿವಾಹ ಮತ್ತು ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ 2550 ಪ್ರಕರಣ ದಾಖಲಾಗಿದ್ದವು. ಇದರಲ್ಲಿ ವಿಜಯನಗರ ಮತ್ತು ಬಳ್ಳಾರಿ ಎರಡು ಜಿಲ್ಲೆಗಳಲ್ಲಿ 409 ಕೇಸ್‌ಗ‍ಳಿವೆ. ಇದು ಕಳವಳಕಾರಿ ಅಂಶವಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಂಗಳೂರು ಮಕ್ಕಳ ಹಕ್ಕುಗಳ ನಿರ್ದೇಶನಾಲಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕಾನೂನುಗಳ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಮಟ್ಟದಿಂದ ತಾಲೂಕು ಮಟ್ಟದ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಕ್ಕಳ ಹಕ್ಕುಗಳ ಸಮಿತಿಯು ಸಮರ್ಪಕ ರೀತಿಯಲ್ಲಿ ಸಭೆ ಮಾಡಿ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಅವಲೋಕನವಾದರೇ ಮಾತ್ರ ಈ ಅನಿಷ್ಟ ಪದ್ಧತಿಯನ್ನು ತಡೆಗಟ್ಟಲು ಸಾಧ್ಯವಿದೆ. ಕೇವಲ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿದರೆ ಅಸಾಧ್ಯ ಎಂದರು.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3 ಸಾವಿರ ಪ್ರಕರಣ ವಸತಿ ಶಾಲೆಗಳಿಗೆ ಸಂಬಂಧ ಪಟ್ಟಿವೆ. ಬಾಲ್ಯ ವಿವಾಹ, ಬಾಲಕಿಯರು ಗರ್ಭಿಣಿಯಾಗುತ್ತಿರುವುದು, ಮಕ್ಕಳ ಮಾರಾಟ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರ ಪ್ರಕರಣಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು.

ತಹಸೀಲ್ದಾರ್‌ ಜಿ. ಸಂತೋಷ ಕುಮಾರ್‌ ಮಾತನಾಡಿ, ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ವಿಚಾರಕ್ಕೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸೇರಿ, ಬಾಲ್ಯ ವಿವಾಹ ಮತ್ತು ಅನಿಷ್ಟ ಪದ್ಧತಿ ಮುಕ್ತ ಗ್ರಾಮವನ್ನಾಗಿ ನಿರ್ಮಾಣ ಮಾಡಲು ಪಣ ತೊಡಬೇಕಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಂದೀಪ್‌ಕುಮಾರ್‌ ಉಂಕಿ ಪ್ರಾಸ್ತವಿಕ ಮಾತನಾಡಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಎಚ್‌.ಸಿ. ರಾಘವೇಂದ್ರ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ತಾಪಂ ನರೇಗಾ ಎಡಿ ವೀರಣ್ಣ ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ. ರಾಮನಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this article