ಬೆಂಗಳೂರಿನ 41 ಶಾಲೆಗಳಿಗೆಇ-ಮೇಲ್ ಬಾಂಬ್‌ ಬೆದರಿಕೆ!

KannadaprabhaNewsNetwork |  
Published : Jul 19, 2025, 01:00 AM IST
Bishop Cotton 4 | Kannada Prabha

ಸಾರಾಂಶ

ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ನಗರದ ಸುಮಾರು 41ಕ್ಕೂ ಖಾಸಗಿ ಶಾಲೆಗಳಲ್ಲಿ ಶುಕ್ರವಾರ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ನಗರದ ಸುಮಾರು 41ಕ್ಕೂ ಖಾಸಗಿ ಶಾಲೆಗಳಲ್ಲಿ ಶುಕ್ರವಾರ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ನಡೆಯಿತು.

ಅಶೋಕ ನಗರ, ಚಾಮರಾಜಪೇಟೆ, ರಾಜರಾಜೇಶ್ವರಿ ನಗರ, ಶೇಷಾದ್ರಿಪುರ ಹಾಗೂ ಕೆಂಗೇರಿ ಸೇರಿ ಖಾಸಗಿ ಶಾಲೆಗಳಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಮಾಹಿತಿ ಪಡೆದ ಪೊಲೀಸರು, ಶಾಲೆಗಳಲ್ಲಿ ತಪಾಸಣೆ ನಡೆಸಿದ ಬಳಿಕ ಹುಸಿ ಬೆದರಿಕೆ ಇ-ಮೇಲ್ ಎಂಬುದು ಖಚಿತವಾದ ನಂತರ ಶಾಲಾ ಆವರಣದಲ್ಲಿ ಆತಂಕ ದೂರವಾಯಿತು.

ಶಾಲೆಗಳಿಗೆ Roadkill333atomic@mail.com ಹೆಸರಿನಿಂದ ಮೇಲ್ ಬಂದಿದೆ. ಮೇಲ್‌ನಲ್ಲಿ ಶಾಲಾ ತರಗತಿಗಳಲ್ಲಿ ಕಪ್ಪು ಬಣ್ಣದ ಬ್ಯಾಗ್‌ನಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿಟ್ಟಿದ್ದೇನೆ. ನಾನು ಜಗತ್ತಿನ ಪ್ರತಿಯೊಬ್ಬರನ್ನು ಅಳಿಸಿ ಹಾಕುವೆ. ಈ ಸ್ಫೋಟದ ಸುದ್ದಿ ಕಂಡು ನಾನು ಸಂತೋಷ ಪಡುತ್ತೇನೆ. ಸಾವಿರಾರು ಮಕ್ಕಳು ಅಂಗವಿಕಲರಾಗುವುದನ್ನು ಅವರ ಹೆತ್ತವರು ನೋಡಿ ಸಂಕಟ ಪಡಬೇಕು. ನೀವೆಲ್ಲರು ಕಷ್ಟ ಅನುಭವಿಸಲು ಅರ್ಹರಾಗಿದ್ದೀರಿ. ಈ ಸ್ಫೋಟದ ಸುದ್ದಿ ಖಚಿತವಾದ ಬಳಿಕ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿಡಿಕೇಡಿ ಬರೆದಿದ್ದಾನೆ.

ಇ-ಮೇಲ್ ಗಮನಿಸಿದ ಶಾಲಾ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಶಾಲೆಗಳಿಗೆ ತೆರಳಿ ತಪಾಸಣೆ ನಡೆಸಿದ ನಂತರ ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಗಿದೆ.

ಎರಡು ವರ್ಷಗಳಲ್ಲಿ ಪದೇ ಪದೇ ಖಾಸಗಿ ಶಾಲೆಗಳಿಗೆ ಸಾಮೂಹಿಕವಾಗಿ ಹುಸಿ ಬಾಂಬ್ ಬೆದರಿಕೆ ಇ.ಮೇಲ್‌ ಬರುವ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೆ ಬೆದರಿಕೆ ಸೃಷ್ಟಿಕರ್ತರು ಮಾತ್ರ ಪತ್ತೆಯಾಗಿಲ್ಲ. ಎಫ್‌ಐಆರ್ ದಾಖಲು:

ಹುಸಿ ಬಾಂಬ್ ಬೆದರಿಕೆ ಸಂಬಂಧ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಒಂದೇ ಎಫ್‌ಐಆರ್ ದಾಖಲಿಸಲಾಗಿದೆ. ಆ ಎಫ್‌ಐಆರ್‌ನಲ್ಲಿ ಎಲ್ಲ ಶಾಲೆಗಳ ಹೆಸರನ್ನು ಉಲ್ಲೇಖಿಸಲಾಗಿದ್ದು, ಆರೋಪಿ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಶ್ರೀಹರಿಬಾಬು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV

Recommended Stories

ಗೋಕರ್ಣ ಗುಹೆಯಲ್ಲಿ ಸಿಕ್ಕ ಕುಟುಂಬ ಗಡೀಪಾರಿಗೆ ಹೈಕೋರ್ಟ್‌ನಿಂದ ತಡೆ
ಯಮೆನ್‌ ನರ್ಸ್‌ ಗಲ್ಲು ತಪ್ಪಿಸಿದ್ದು ಕನ್ನಡಿಗ ಷರೀಫ್‌’