ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯ ತಾಪಂಗಳ ಮೇಲಿದೆ ಎಂದರು.
ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯ ಜೊತೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರೆ ಪಂಚಾಯತ್ ರಾಜ್ ಕನಸು ನನಸಾಗಬಲ್ಲದು. ವಿವಿಧ ಇಲಾಖೆಗಳು ತಾಲೂಕು ಪಂಚಾಯಿತಿ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಅವುಗಳಿಗೆ ಬರುವ ಅನುದಾನಗಳು ಸರ್ಕಾರಕ್ಕೆ ಹಿಂತಿರುಗಿ ಹೋಗದಂತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.ಸರ್ಕಾರದಿಂದ ಎಷ್ಟು ಅನುದಾನ ಬರುತ್ತದೋ ಅಷ್ಟನ್ನೂ ಲ್ಯಾಪ್ಸ್ ಆಗದಂತೆ ಸದ್ಬಳಕೆ ಮಾಡಿಕೊಳ್ಳಬೇಕು. ನರೇಗಾ ಯೋಜನೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಪಿಡಿಒ ಮತ್ತು ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು. ಗ್ರಾಪಂ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳು ಕಾಟಾಚಾರದ ಸಭೆಗಳಾಗದಂತೆ ನೋಡಿಕೊಳ್ಳಬೇಕು. ಹೆಚ್ಚಾಗಿ ವಾರ್ಡ್ ಸಭೆ, ಗ್ರಾಮ ಸಭೆಗಳನ್ನು ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಬಗೆಹರಿಸುವ ಕಾರ್ಯವನ್ನು ನಡೆಸುವಂತೆ ಶಾಸಕರು ತಾಕೀತು ಮಾಡಿದರು.
ಇದೇ ವೇಳೆ ವಿವಿಧ ಇಲಾಖೆಗಳ ಅನುದಾನದ ಬಳಕೆಗೆ ಅನುಮೋದನೆ ನೀಡಲಾಯಿತು. ತಾಪಂ ಇಒ ಕೆ.ಸುಷ್ಮ , ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಲೆಕ್ಕಾಧಿಕಾರಿ ಶಂಕರ್, ಸಹಾಯಕ ನಿರ್ದೇಶಕ ಡಾ.ಟಿ.ನರಸಿಂಹರಾಜು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.