೪೨ ಎಕರೆ ಆಸ್ಪತ್ರೆ ಜಾಗ ಸ್ಯಾಟಲೈಟ್ ಸರ್ವೇಯಲ್ಲಿ ಗುರುತು

KannadaprabhaNewsNetwork |  
Published : Dec 29, 2025, 01:30 AM IST
೨೮ಕೆಎಂಎನ್‌ಡಿ-೧ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ. | Kannada Prabha

ಸಾರಾಂಶ

ಹಲವು ದಶಕಗಳಿಂದ ವಿವಾದ ಸ್ವರೂಪ ಪಡೆದುಕೊಂಡಿರುವ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿದ ೪೨ ಎಕರೆ ಜಾಗವನ್ನು ಸ್ಯಾಟಲೈಟ್ ಸರ್ವೇ ಮೂಲಕ ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯೊಂದರ ಮೂಲಕ ಈ ಸರ್ವೇ ನಡೆಸಲಾಗಿದೆ. ಮಿಮ್ಸ್ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ಪಾವತಿಸಬೇಕಿದೆ. ಹಣ ಪಾವತಿಸದ ಹಿನ್ನೆಲೆಯಲ್ಲಿ ವರದಿ ಕೈ ಸೇರುವುದು ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಹಲವು ದಶಕಗಳಿಂದ ವಿವಾದ ಸ್ವರೂಪ ಪಡೆದುಕೊಂಡಿರುವ ಜಿಲ್ಲಾ ಆಸ್ಪತ್ರೆಗೆ ಸೇರಿದ ೪೨ ಎಕರೆ ಜಾಗವನ್ನು ಸ್ಯಾಟಲೈಟ್ ಸರ್ವೇ ಮೂಲಕ ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯೊಂದರ ಮೂಲಕ ಈ ಸರ್ವೇ ನಡೆಸಲಾಗಿದೆ. ಮಿಮ್ಸ್ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ಪಾವತಿಸಬೇಕಿದೆ. ಹಣ ಪಾವತಿಸದ ಹಿನ್ನೆಲೆಯಲ್ಲಿ ವರದಿ ಕೈ ಸೇರುವುದು ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮೂಲಗಳ ಪ್ರಕಾರ ಆಸ್ಪತ್ರೆ ಜಾಗದಲ್ಲಿ ತಮಿಳು ಕಾಲೋನಿ ಸೇರಿದಂತೆ ಕೆಲವು ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳಿಗೆ ನೀಡಿರುವ ಕಟ್ಟಡ ಹಾಗೂ ಕೆಲವೊಂದು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳು ಆಸ್ಪತ್ರೆ ಜಾಗದೊಳಗೆ ಗುರುತಿಸಲ್ಪಟ್ಟಿವೆ. ಈ ಸರ್ವೇ ಪ್ರಕಾರ ಅವುಗಳಿಗೆ ಈಗ ಕಂಟಕ ಎದುರಾಗಿದೆ.

ಮಂಡ್ಯ ನಗರದ ಸರ್ವೇ ನಂಬರ್ ೫, ೬ ರಿಂದ ೮೫೫/೧, ೮೫೫/೨, ೮೫೫/೩, ೮೬೦ರವರೆಗಿನ ಒಟ್ಟು ೨೨ ಎಕರೆ ೬.೫ ಗುಂಟೆ ಪ್ರದೇಶದ ಜಮೀನನ್ನು ೨ ನವೆಂಬರ್ ೧೯೪೧ರ ಅಧಿಸೂಚನೆಯಡಿ ಜಿಲ್ಲಾಸ್ಪತ್ರೆ ನಿರ್ಮಿಸುವ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರ್ವೇ ನಂ. ೧೬, ೧೮ ರಿಂದ ೨೧ ಮತ್ತು ೮೨೪ ರಿಂದ ೮೨೯ರವರೆಗೆ ೧೭ ಎಕರೆ ೨೬.೫ ಗುಂಟೆ ಪ್ರದೇಶದ ಜಮೀನನ್ನು ೩ ಸೆಪ್ಟೆಂಬರ್ ೧೯೪೮ರಡಿಯಲ್ಲಿ ಆಸ್ಪತ್ರೆಯ ವಿಸ್ತರಣೆಗೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ೨೬ ಎಕರೆ ೬ ಗುಂಟೆ ಪ್ರದೇಶದಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಸ್ತಿತ್ವದಲ್ಲಿದೆ. ಸರ್ಕಾರಿ ಕರಾಬು ಜಮೀನು ಸೇರಿದಂತೆ ಸುಮಾರು ೧೫ ಎಕರೆ ಜಾಗ ಒತ್ತುವರಿಯಾಗಿರುವುದಾಗಿ ತಿಳಿದುಬಂದಿದೆ.

ಆಸ್ಪತ್ರೆಗೆ ಮಂಜೂರಾಗಿದ್ದ ಜಮೀನಿನ ಪೈಕಿ ೫ ಎಕರೆ ೨೫ ಗುಂಟೆ ಪ್ರದೇಶದಲ್ಲಿ ತಮಿಳು ಕಾಲೋನಿ ಪ್ರದೇಶವಿದ್ದು, ಅದನ್ನು ೧೧ ಮೇ ೧೯೭೯ರಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲಾಗಿತ್ತು. ಆದರೆ, ಜಿಲ್ಲಾಸ್ಪತ್ರೆಯ ಮೇಲೆ ರೋಗಿಗಳ ಒತ್ತಡ, ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಬೇಕಾಗಿದ್ದರಿಂದ ೧೯ ಅಕ್ಟೋಬರ್ ೨೦೧೦ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಕೊಳಚೆ ಪ್ರದೇಶವಾಗಿ ಘೋಷಣೆಯಾಗಿದ್ದ ೫ ಎಕರೆ ೨೫ ಗುಂಟೆ ಜಮೀನನ್ನು ಜಿಲ್ಲಾಸ್ಪತ್ರೆಗೆ ಉಳಿಸಿಕೊಟ್ಟಿತು. ಈ ಜಾಗದಲ್ಲಿರುವ ನಿವಾಸಿಗಳಿಗೆ ಬೇರೆ ಸ್ಥಳದಲ್ಲಿ ಜಮೀನು ನೀಡಲು ಮತ್ತು ಮನೆಗಳನ್ನು ನಿರ್ಮಿಸಿಕೊಡಲು ಸೂಚಿಸಲಾಗಿತ್ತು. ಅದರಂತೆ ಕೆರೆಯಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರೂ ಅಲ್ಲಿಗೆ ತೆರಳದೆ ಆಸ್ಪತ್ರೆ ಜಾಗದಲ್ಲೇ ಉಳಿದಿದ್ದಾರೆ.

ರಾಜ್ಯ ಹೈಕೋರ್ಟ್ ಸೂಚನೆಯಂತೆ ಆಸ್ಪತ್ರೆ ಜಾಗದಿಂದ ತಮಿಳು ನಿವಾಸಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮೂರ್ನಾಲ್ಕು ಬಾರಿ ಅವರ ಮನವೊಲಿಸಲು ನಡೆಸಿದ ಯತ್ನ ಫಲ ಕೊಡಲಿಲ್ಲ. ಸರ್ವೇ ಕಾರ್ಯ ನಡೆಸುವುದಕ್ಕೂ ಅಡ್ಡಿಪಡಿಸಿದರು. ಇದರಿಂದ ಜಿಲ್ಲಾಡಳಿತ ಬೇಸತ್ತು ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸ್ಯಾಟಲೈಟ್ ಮೂಲಕವೇ ಸರ್ವೇ ನಡೆಸಲಾಗಿದೆ. ಅದರಲ್ಲಿ ೪೨ ಎಕರೆ ಆಸ್ಪತ್ರೆ ಜಾಗವನ್ನು ಗುರುತಿಸಿರುವುದಾಗಿ ತಿಳಿದುಬಂದಿದೆ.

ಹಾಲಿ ಗುರುತಿಸಿರುವ ಜಾಗದಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು ನಿರ್ಮಿಸಿರುವ ಕಟ್ಟಡಗಳು, ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳಿರುವುದು ಕಂಡುಬಂದಿದೆ. ಈ ಜಾಗದಲ್ಲಿರುವವರನ್ನು ತೆರವುಗೊಳಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಸ್ಪತ್ರೆ ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಫೆ.೩ರಂದು ವಿಚಾರಣೆಗೆ ಬರುತ್ತಿದ್ದು, ಅಷ್ಟರೊಳಗೆ ಸ್ಯಾಟಲೈಟ್ ಸರ್ವೆ ನಡೆಸಿರುವ ಸಂಸ್ಥೆಗೆ ಹಣ ಪಾವತಿಸಿ ವರದಿಯನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಜಾಗದ ವಿಚಾರವಾಗಿ ತಮಿಳು ಕಾಲೋನಿ ನಿವಾಸಿಗಳು ಹೈಕೋರ್ಟ್‌ನಿಂದ ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಆ ಜಾಗವೂ ಸೇರಿದಂತೆ ಒತ್ತುವರಿ ಜಾಗವನ್ನು ಸೇರಿಸಿಕೊಂಡು ಟ್ರಾಮಾಕೇರ್ ಸೆಂಟರ್ ಹಾಗೂ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.ಖಾಸಗಿ ವ್ಯಕ್ತಿಗಳಿಂದ ರಾಜಕೀಯ ಒತ್ತಡ

ಹಲವಾರು ದಶಕಗಳಿಂದ ಆಸ್ಪತ್ರೆ ಜಾಗದಲ್ಲಿ ತಳವೂರಿರುವ ಪ್ರಭಾವಿ ಖಾಸಗಿ ವ್ಯಕ್ತಿಗಳು ತಮಿಳು ಕಾಲೋನಿ ನಿವಾಸಿಗಳನ್ನು ಮುಂದಿಟ್ಟುಕೊಂಡು ಒತ್ತುವರಿ ಮಾಡಿಕೊಂಡಿರುವ ಆಸ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಶತಪ್ರಯತ್ನ ನಡೆಸುತ್ತಿದ್ದಾರೆ. ಸಾಕಷ್ಟು ರಾಜಕೀಯ ಪ್ರಭಾವವನ್ನು ಬಳಸಿ ಅಲ್ಲೇ ಭದ್ರವಾಗಿ ನೆಲೆಯೂರುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ನಗರದ ಹೃದಯಭಾಗದಲ್ಲಿರುವ ಆಸ್ತಿಯಿಂದ ತೆರವುಗೊಳ್ಳುವುದಕ್ಕೆ ತಮಿಳು ಕಾಲೋನಿ ನಿವಾಸಿಗಳು ಸಿದ್ಧರಿದ್ದರೂ ಖಾಸಗಿ ವ್ಯಕ್ತಿಗಳು ಮಾತ್ರ ಸಿದ್ಧರಿಲ್ಲ. ಅದಕ್ಕಾಗಿ ತಮಿಳು ಕಾಲೋನಿ ನಿವಾಸಿಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ತೆರವಿಗೆ ಹೋರಾಟಗಾರರ ಬಿಗಿಪಟ್ಟು

ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ನಿವಾಸಿಗಳು ಹಾಗೂ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಅಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂದು ಹೋರಾಟಗಾರರು ಬಿಗಿಪಟ್ಟು ಹಿಡಿದಿದ್ದಾರೆ. ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಟಿ. ರವೀಂದ್ರಕುಮಾರ್, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್.ಡಿ.ಜಯರಾಂ ಅವರು ಕಾನೂನು ಹೋರಾಟ, ಪ್ರತಿಭಟನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಹೋರಾಟ ಅಂತಿಮ ಹಂತ ತಲುಪಿರುವಂತೆ ಕಂಡುಬರುತ್ತಿದ್ದು, ಫೆ.೩ರಂದು ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವಾದಲ್ಲಿ ತೆರವು ಕಾರ್ಯ ಸುಗಮವಾಗಬಹುದೆಂದು ನಂಬಲಾಗಿದೆ.ಆಸ್ಪತ್ರೆ ಜಾಗ ಗುರುತಿಸಿದ್ದೇವೆ

ಮೈಸೂರು ಮಹಾರಾಜರು ಆಸ್ಪತ್ರೆಗೆ ನೀಡಿರುವ ಜಾಗವನ್ನು ಗುರುತಿಸಿಕೊಟ್ಟಿದ್ದೇವೆ. ಖಾಸಗಿ ಸಂಸ್ಥೆ ನಡೆಸಿರುವ ಸ್ಯಾಟಲೈಟ್ ಸರ್ವೇಯಲ್ಲಿ ೪೨ ಎಕರೆ ಜಮೀನನ್ನು ಗುರುತಿಸಿದೆ. ಅದರಲ್ಲಿ ೧೫ ಎಕರೆಯಷ್ಟು ಒತ್ತುವರಿಯಾಗಿದೆ. ಮಿಮ್ಸ್‌ನವರು ಹಣ ಕಟ್ಟಿ ವರದಿ ಪಡೆದು ಒತ್ತುವರಿ ತೆರವುಗೊಳಿಸಿಕೊಳ್ಳುವುದಕ್ಕೆ ಕ್ರಮ ವಹಿಸಬೇಕಿದೆ.

- ಎಂ.ಶಿವಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿಹಣ ಕಟ್ಟಿದ್ದೇವೆ

ಸ್ಯಾಟಲೈಟ್ ಸರ್ವೇ ವರದಿ ಪಡೆಯಲು ಖಾಸಗಿ ಸಂಸ್ಥೆಗೆ ಒಂದು ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿದ್ದೇವೆ. ವರದಿಯನ್ನು ಇನ್ನು ಕೆಲವೇ ದಿನಗಳಲ್ಲಿ ಕೊಡುವುದಾಗಿ ಹೇಳಿದ್ದಾರೆ. ವರದಿ ಕೈಸೇರಿದ ಬಳಿಕ ಮುಂದಿನ ಕಾನೂನಾತ್ಮಕ ನಡೆ ಅನುಸರಿಸಲಾಗುವುದು. ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆ ತೆರವಿಗೆ ವಕೀಲರೊಂದಿಗೆ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ.

- ಡಾ.ಪಿ.ನರಸಿಂಹಮೂರ್ತಿ, ನಿರ್ದೇಶಕರು, ಮಿಮ್ಸ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ