ಶಿವಾನಂದ ಗೊಂಬಿ
ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಸಿ ಕ್ಯಾಮೆರಾವುಳ್ಳ 425 ಬಸ್‌ಗಳು ಸೇರ್ಪಡೆಯಾಗಿವೆ. ಇದರಿಂದ ಚಾಲಕರ ಅಟೋಟಾಪಕ್ಕೆ ಕಡಿವಾಣ, ಸಾರಿಗೆ ಸಂಸ್ಥೆಯ ಮೇಲೆ ಅಪಘಾತ ಪರಿಹಾರಕ್ಕಾಗಿ ದಾಖಲಾಗುವ ಸುಳ್ಳು ಮೊಕದ್ದಮೆ ತಡೆಯುವ ಮಹೋದ್ದೇಶದಿಂದ ಈ ಬಸ್‌ಗಳನ್ನು ಪರಿಚಯಿಸಲಾಗಿದೆ.
ಆರು ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುವುದು ಮಾಮೂಲಿ. ಆದರೆ ಪ್ರತಿಸಲ ಅಪಘಾತಗಳಾದಾಗಲೂ ಪರಿಹಾರ ಕೊಡುವುದು ಮಾತ್ರ ಸಾರಿಗೆ ಸಂಸ್ಥೆಯೇ. ಕೆಲ ಸಮಯ ಸಂಸ್ಥೆಯ ಚಾಲಕರ ತಪ್ಪು ಇಲ್ಲದಿದ್ದರೂ ಸಂಸ್ಥೆಯ ಮೇಲೆಯೇ ಕೇಸ್ ದಾಖಲಾಗುತ್ತಿರುತ್ತದೆ. ಸಂಸ್ಥೆಯ ಚಾಲಕರ ತಪ್ಪಿಲ್ಲ ಎಂದೂ ಸಾಬೀತುಪಡಿಸಲು ಸಾಧ್ಯವಾಗಲ್ಲ. ಸಾಕ್ಷ್ಯಗಳ ಕೊರತೆಯಿಂದ ಅನಿವಾರ್ಯವಾಗಿ ಪರಿಹಾರ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸದ್ಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಡಿ ₹ 66 ಕೋಟಿ ಪರಿಹಾರ ನೀಡುವುದು ಬಾಕಿಯಿದೆ ಎಂದು ಮೂಲಗಳು ತಿಳಿಸುತ್ತವೆ. ಇನ್ನು ಚಾಲಕರು ಕೂಡ ನಿರ್ಲಕ್ಷಿತ ಚಾಲನೆ, ಎಲ್ಲಿ ಬೇಕೋ ಅಲ್ಲಿ ನಿಲ್ಲಿಸುವುದು. ಕೆಲವೊಂದು ಬಸ್ ನಿಲ್ದಾಣಗಳನ್ನು ಮರೆಮಾಚಿ ತೆರಳುವುದು, ಸ್ಪೀಡ್ ಲಿಮಿಟ್ ಮೀರಿ ಓವರ್ ಸ್ಪೀಡ್‌ನಲ್ಲೇ ವಾಹನ ಚಲಾಯಿಸುವುದು ಇವೆಲ್ಲವೂ ಮಾಮೂಲಿ. ಈ ಬಗ್ಗೆ ಪ್ರಯಾಣಿಕರಿಂದ, ಸಾರ್ವಜನಿಕರಿಂದ ದೂರುಗಳು ನಿತ್ಯ ನಿರಂತರ ಎಂಬಂತೆ ಬರುತ್ತಲೇ ಇರುತ್ತವೆ.ಪರಿಹಾರವೇನು?:
ಇವೆಲ್ಲಕ್ಕೂ ಪರಿಹಾರವೆಂದರೆ ಸಿಸಿ ಕ್ಯಾಮೆರಾ ಅಳವಡಿಸುವುದು. ಅಂತಹ ಬಸ್‌ಗಳನ್ನೀಗ ಸರ್ಕಾರವೇ ಸಂಸ್ಥೆಗೆ ನೀಡಿದೆ. ಅದು ಕೂಡ ಬರೋಬ್ಬರಿ 425 ಬಸ್‌ಗಳು ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾಗಿವೆ. ಈ ಬಸ್‌ಗಳಿಗೆ ಹಿಂದೊಂದು, ಮುಂದೊಂದು ಸಿಸಿ ಕ್ಯಾಮೆರಾಗಳಿವೆ. ಬಸ್‌ನಲ್ಲೇ ಕ್ಯಾಮೆರಾ ಫುಟೇಜ್ ಸಂಗ್ರಹಿಸುವ ವ್ಯವಸ್ಥೆಯಿದೆ. ಬರೋಬ್ಬರಿ 1 ಟಿಬಿಯಷ್ಟು ಫುಟೇಜ್ ಸಂಗ್ರಹಿಸಬಹುದಾಗಿದೆ. 15 ದಿನ ದೃಶ್ಯಾವಳಿಗಳೆಲ್ಲ ಬಸ್‌ನ ಸ್ಟೋರೇಜ್‌ನಲ್ಲಿ ಲಭ್ಯವಾಗಿರುತ್ತವೆ. ಅವುಗಳನ್ನು ಪೆನ್‌ಡ್ರೈವ್ ಮೂಲಕ ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.ಬಸ್ ಹಿಂದೆಯಾಗಲಿ, ಮುಂದಿನಿಂದಾಗಲಿ ಯಾವುದೇ ವಾಹನದೊಂದಿಗೆ ಅಪಘಾತವಾದರೂ ಆ ದೃಶ್ಯಗಳೆಲ್ಲ ರೆಕಾರ್ಡ್ ಆಗುತ್ತವೆ. ಜತೆಗೆ ವಾಹನ ಪಾರ್ಕ್ ಮಾಡಲು ಈ ಕ್ಯಾಮೆರಾ ನೆರವಾಗುತ್ತದೆ. ಯಾರೇ ಆಗಲಿ ಸಾರಿಗೆ ಸಂಸ್ಥೆಯ ಬಸ್ಸೇ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಮೊಕದ್ದಮೆ ದಾಖಲಿಸಲು ಸಾಧ್ಯವಾಗಲ್ಲ. ಜತೆಗೆ ಚಾಲಕ ಕೂಡ ಎಲ್ಲಿ, ಎಷ್ಟು ಗಂಟೆಗೆ ತೆರಳಿದ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದನೇ ಎಂಬಂತಹ ಮಾಹಿತಿ ಕೂಡ ಲಭ್ಯವಾಗುತ್ತದೆ. ಹೀಗಾಗಿ ಸಿಸಿ ಕ್ಯಾಮೆರಾದಿಂದ ಅನುಕೂಲವಾಗಲಿದೆ. ಇದರೊಂದಿಗೆ ಬಸ್‌ನಲ್ಲಿ ಜಿಪಿಎಸ್ ಕೂಡ ಅಳವಡಿಕೆ ಇರುವುದರಿಂದ ಯಾವ ಬಸ್ ಎಷ್ಟು ಗಂಟೆಗೆ ಎಲ್ಲಿತ್ತು ಎಂಬುದರ ಮಾಹಿತಿಯೂ ಸಮರ್ಪಕವಾಗಿ ಲಭ್ಯವಾಗುತ್ತದೆ.
ಒಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿರುವ ಬಸ್ ಬಂದಿರುವುದರಿಂದ ಬಸ್‌ನ ಚಲನ-ವಲನದ ಮೇಲೆ ಸಂಸ್ಥೆ ಸಮರ್ಪಕವಾಗಿ ನಿಗಾವಹಿಸಲು ಅನುಕೂಲವಾಗಲಿದೆ ಎಂಬುದು ಸಂಸ್ಥೆಯ ಅಧಿಕಾರಿ ವರ್ಗದ ಅಂಬೋಣ.ಸಿಸಿ ಕ್ಯಾಮೆರಾ ಅಳವಡಿಸಿರುವ ಹೊಸ ಬಸ್‌ಗಳು ಸಂಸ್ಥೆಗೆ ಸೇರ್ಪಡೆಯಾಗಲಿವೆ. ಇದರಿಂದ ಅಪಘಾತವಾದಾಗ ಸಮರ್ಪಕ ಸಾಕ್ಷ್ಯ ಲಭ್ಯವಾಗಲಿವೆ. ಸಂಸ್ಥೆಯ ತಪ್ಪಿಲ್ಲದಿದ್ದರೂ ಪರಿಹಾರ ಕೊಡುವ ಪ್ರಸಂಗ ಎದುರಾಗುವುದಿಲ್ಲ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.
ವಾಯವ್ಯ ಸಾರಿಗೆ ಸಂಸ್ಥೆಗೆ 425 ಬಸ್‌ಗಳು ಹೊಸದಾಗಿ ಬಂದಿವೆ. ಇವುಗಳಲ್ಲಿ ಸಿಸಿ ಕ್ಯಾಮೆರಾಗಳಿವೆ. 1 ಟಿಬಿಯಷ್ಟು ಸಂಗ್ರಹಿಸುವಷ್ಟು ಸಾಮರ್ಥ್ಯದ ವ್ಯವಸ್ಥೆ ಬಸ್‌ಗಳಲ್ಲೇ ಇದೆ. 15 ದಿನಗಳವರೆಗೆ ದೃಶ್ಯಾವಳಿಗಳು ಸಂಗ್ರಹವಾಗಿರುತ್ತವೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಮೆಕಾನಿಕಲ್ ಎಂಜಿನಿಯರ್ ಬಸವರಾಜ ಅಮ್ಮನ್ನವರ ತಿಳಿಸಿದ್ದಾರೆ.