ಕನ್ನಡಪ್ರಭ ವಾರ್ತೆ ರಾಮದುರ್ಗ
ಎಸ್‌ಎಸ್‌ಎಲ್‌ಸಿ 2024-25ನೇ ಸಾಲಿನ ಮುಖ್ಯ ಪರೀಕ್ಷೆ ಮಾ.20ರಿಂದ ಪ್ರಾರಂಭವಾಗುತ್ತಿದೆ. ರಾಮದುರ್ಗ ವಲಯದಲ್ಲಿ 14 ಪರೀಕ್ಷಾ ಕೇಂದ್ರಗಳಲ್ಲಿ 2205 ಬಾಲಕರು ಹಾಗೂ 2122 ಬಾಲಕಿಯರು ಸೇರಿ ಒಟ್ಟು 4327 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿ ಕೊಂಡಿದ್ದು, ಶಿಕ್ಷಣ ಇಲಾಖೆ ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.ಮಾ.20 ರಿಂದ ಆರಂಭವಾಗುವ ಪರೀಕ್ಷೆ ಏಪ್ರಿಲ್ 4 ರವರೆಗೆ ನಡೆಯಲಿವೆ. ಈ ಪರೀಕ್ಷೆಯಲ್ಲಿ 4151 ಶಾಲಾ ಅಭ್ಯರ್ಥಿಗಳು, 168 ಪುನರಾವರ್ತಿತ ಮತ್ತು 268 ಖಾಸಗಿ ವಿದ್ಯಾರ್ಥಿಗಳು ಸೇರಿ 4157 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷೆ ಸುಗಮವಾಗಿ ಅಡತಡೆ ಇಲ್ಲದೆ ನಡೆಯಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಮುಖ್ಯಅಧೀಕ್ಷಕರು, ಓರ್ವ ಉಪಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಮಾರ್ಗ ಅಧಿಕಾರಿಗಳು, ಮೊಬೈಲ್ ಸ್ವಾಧಿನಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರು ಹಾಗೂ ಜಾಗೃತ ದಳದ ಅಧಿಕಾರಿಗಳು ಸೇರಿ 385ಕ್ಕೂ ಅಧಿಕ ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಲಿದ್ದಾರೆ. ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಎರಡು ಹಂತದ ತರಬೇತಿ ನೀಡಲಾಗಿದ್ದು, ಪರೀಕ್ಷೆಯ ನೋಡಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ಎ.ಆರ್. ಜೋಶಿ ಪರೀಕ್ಷೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ: ಹೊಳೆಪ್ಪಗೋಳರಾಮದುರ್ಗ:
ವಿದ್ಯಾರ್ಥಿಗಳ ಮುಂದಿನ ವ್ಯಾಸಂಗದ ಪ್ರಮುಖ ಪರೀಕ್ಷೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಾಗಿದ್ದು ಪಾರದರ್ಶಕ ಮತ್ತು ಪರೀಕ್ಷಾ ಪಾವಿತ್ರ್ಯತೆ ಕಾಯ್ದುಕೊಂಡು ಪರೀಕ್ಷೆ ನಡೆಸಲು ತಾಲೂಕಿನ ಎಲ್ಲ ಅಧಿಕಾರಿಗಳು ಶ್ರಮಿಸಬೇಕೆಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದರು.ತಾಪಂ ಸಭಾಭವನದಲ್ಲಿ ಮಾ.21ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಪರೀಕ್ಷಾ ಕಾರ್ಯದಲ್ಲಿ ಕೇಂದ್ರಗಳ ಮುಖ್ಯಧೀಕ್ಷಕರ, ಉಪಮುಖ್ಯಧೀಕ್ಷಕರು ಮತ್ತು ಪ್ರಶ್ನೆ ಪತ್ರಿಕೆ ಅಭಿರಕ್ಷಕರ ಕಾರ್ಯ ಮುಖ್ಯವಾಗಿದ್ದು ಪರೀಕ್ಷೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ತಿಳಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಮಾತನಾಡಿ, ಬೇಸಿಗೆಕಾಲವಾಗಿದ್ದು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯಿಂದ ನಿಯಮಾನುಸಾರ ಪರೀಕ್ಷೆ ನಡೆಸಲು ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯವೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ರಾಮದುರ್ಗ ತಾಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ 2205 ಬಾಲಕರು ಮತ್ತು 2122 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದು 380ಕ್ಕೂ ಅಧಿಕ ಸಿಬ್ಬಂದಿ ಪರೀಕ್ಷಾ ಕೆಲಸದಲ್ಲಿ ತೊಡಗಿಕೊಳ್ಳಲ್ಲಿದ್ದಾರೆ. ಪರೀಕ್ಷೆಯನ್ನು ಸರ್ಕಾರದ ನಿರ್ದೇಶನದಂತೆ ವೆಬ್‌ಕಾಸ್ಟಿಂಗ್ ಮಾಡಲಾಗುತ್ತಿದೆ ಸಗಮ ಮತ್ತು ವ್ಯವಸ್ಥಿತವಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕೆಂದರು. ಸಭೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಜರಣ ಸಣ್ಣಕ್ಕಿ, ಹೆಸ್ಕಾಂ ಎಇಇ ಕರಡಿ, ಪಿಎಸ್‌ಐ ಸವಿತಾ ಮುನ್ಯಾಳ, ಪರೀಕ್ಷಾ ನೋಡಲ್ ಅಧಿಕಾರಿ ಎ. ಆರ್. ಜೋಶಿ ಸೇರಿದಂತೆ ಹಲವರು ಇದ್ದರು.ರಾಮದುರ್ಗ ವಲಯದ 14 ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು ವೆಬ್‌ಕಾಸ್ಟಿಂಗ್ ಮಾಡಲಾಗುತ್ತಿದೆ ಮತ್ತು ಕೃತಕ ಬುದ್ಧಿ ಮತ್ತೆ ತಾಂತ್ರಿಕತೆಯನ್ನು ಪ್ರಥಮ ಬಾರಿಗೆ ಬಳಸಲಾಗುತ್ತಿದೆ. ವಿದ್ಯಾರ್ಥಿಗಳು ಭಯವಿಲ್ಲದೆ ಭರವಸೆಯಿಂದ ಅಚ್ಚುಕಟ್ಟಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಅಡತಡೆ ಇಲ್ಲದೆ ಪರೀಕ್ಷೆ ಸುಗಮವಾಗಿ ನಡೆಯುತ್ತಿವೆ.- ಆರ್.ಟಿ.ಬಳಿಗಾರ,
ಬಿಇಒ ರಾಮದುರ್ಗ.ರಾಮದುರ್ಗ ತಾಲೂಕಿನಲ್ಲಿ ಪರೀಕ್ಷೆ ಸುಗಮವಾಗಿ ನಡೆಯಲು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ನೇತೃತ್ವದಲ್ಲಿ ಮೂರು ಸಂಚಾರಿ ವೀಚಕ್ಷದಳವನ್ನು ಜಿಲ್ಲಾಧಿಕಾರಿಗಳು ರಚಿಸಿದ್ದಾರೆ.- ಎ.ಆರ್.ಜೋಶಿ, ಪರೀಕ್ಷಾ ನೋಡಲ್ ಅಧಿಕಾರಿ, ರಾಮದುರ್ಗ