ಅಸಮರ್ಪಕ ಸಾರಿಗೆ ಅಕ್ಕಿ ನೋ ಸ್ಟಾಕ್‌ಗೆ ಕಾರಣ!

KannadaprabhaNewsNetwork | Published : Mar 19, 2025 12:45 AM

ಸಾರಾಂಶ

ಅಥಣಿ ಮತಕ್ಷೇತ್ರ ಒಳಗೊಂಡಂತೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಂಚಿಕೆ ಆಗಬೇಕಾಗಿದ್ದ ಅಕ್ಕಿ ಕೊರತೆಯಾಗಿದೆ. ಇದರಿಂದ ವಿತರಕರು ನ್ಯಾಯಬೆಲೆ ಅಂಗಡಿಗೆ ಬರುತ್ತಿರುವ ಗ್ರಾಹಕರಿಗೆ ಅಕ್ಕಿ ಬಂದಿಲ್ಲವೆಂದು ಹೇಳಿ ಕಳಿಸುತ್ತಿರುವ ದೃಶ್ಯ ಎಲ್ಲ ಕಡೆ ಕಂಡು ಬಂದಿದೆ. ಶೇ.55 ಫಲಾನುಭಾವಿಗಳು ಇನ್ನೂ ಅಕ್ಕಿಯನ್ನು ಪಡೆಯಬೇಕಾಗಿದೆ. ಪ್ರತಿ ಫಲಾನುಭವಿಗೆ ಈ ತಿಂಗಳು ಒಟ್ಟು 15 ಕೆಜಿ ಅಕ್ಕಿಯನ್ನು ಸರ್ಕಾರ ಪೂರೈಸಬೇಕಾಗಿದೆ. ಅದು ಸಾಧ್ಯವಾಗುತ್ತಿಲ್ಲ. ಆದರೆ, ಇದಕ್ಕೆ ಕಾರಣ ಅಕ್ಕಿ ಸ್ಟಾಕ್‌ ಇದ್ದರೂ, ಅದನ್ನು ಅದಿಷ್ಟನ್ನೂ ಪೂರೈಸಲು ಅಸಮರ್ಪಕ ಸಾರಿಗೆ ವ್ಯವಸ್ಥೆ ಕಾರಣ ಎನ್ನಲಾಗಿದೆ.

ಸಿ.ಎ.ಇಟ್ನಾಳಮಠ

ಕನ್ನಡಪ್ರಭ ವಾರ್ತೆ ಅಥಣಿ

ಅಥಣಿ ಮತಕ್ಷೇತ್ರ ಒಳಗೊಂಡಂತೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಂಚಿಕೆ ಆಗಬೇಕಾಗಿದ್ದ ಅಕ್ಕಿ ಕೊರತೆಯಾಗಿದೆ. ಇದರಿಂದ ವಿತರಕರು ನ್ಯಾಯಬೆಲೆ ಅಂಗಡಿಗೆ ಬರುತ್ತಿರುವ ಗ್ರಾಹಕರಿಗೆ ಅಕ್ಕಿ ಬಂದಿಲ್ಲವೆಂದು ಹೇಳಿ ಕಳಿಸುತ್ತಿರುವ ದೃಶ್ಯ ಎಲ್ಲ ಕಡೆ ಕಂಡು ಬಂದಿದೆ. ಶೇ.55 ಫಲಾನುಭಾವಿಗಳು ಇನ್ನೂ ಅಕ್ಕಿಯನ್ನು ಪಡೆಯಬೇಕಾಗಿದೆ. ಪ್ರತಿ ಫಲಾನುಭವಿಗೆ ಈ ತಿಂಗಳು ಒಟ್ಟು 15 ಕೆಜಿ ಅಕ್ಕಿಯನ್ನು ಸರ್ಕಾರ ಪೂರೈಸಬೇಕಾಗಿದೆ. ಅದು ಸಾಧ್ಯವಾಗುತ್ತಿಲ್ಲ. ಆದರೆ, ಇದಕ್ಕೆ ಕಾರಣ ಅಕ್ಕಿ ಸ್ಟಾಕ್‌ ಇದ್ದರೂ, ಅದನ್ನು ಅದಿಷ್ಟನ್ನೂ ಪೂರೈಸಲು ಅಸಮರ್ಪಕ ಸಾರಿಗೆ ವ್ಯವಸ್ಥೆ ಕಾರಣ ಎನ್ನಲಾಗಿದೆ.ಏಕೆ ಈ ಸಮಸ್ಯೆ?:

ಆಹಾರ ಇಲಾಖೆಯ ಮೂಲಗಳ ಪ್ರಕಾರ ಪೂರ್ವ ನಿಯೋಜಿತ ಸಿದ್ಧತೆ ಕೊರತೆ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಸರ್ಕಾರ ತಾನು ಖರೀದಿಸಿದ ಅಕ್ಕಿಯನ್ನು ತಕ್ಷಣ ಸಾಗಾಣಿಕೆ ಮಾಡುವ ವ್ಯವಸ್ಥೆ ಮಾಡಿಕೊಂಡಿಲ್ಲ. ಬೇಡಿಕೆ ಇದ್ದಷ್ಟು ತಕ್ಷಣ ಪೂರೈಕೆ ಮಾಡುವುದು ಆಹಾರ ನಿಗಮ ಹರಸಾಹಸ ಪಡುತ್ತಿದೆ. ತಕ್ಷಣ ಪೂರೈಸುವುದು ಸುಲಭದ ಕೆಲಸವಲ್ಲ. ಆಹಾರ ನಿಗಮ ಪೂರೈಸಿದಷ್ಟು ಸಾಗಿಸುವ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಸರ್ಕಾರದ ಬಳಿಯೇ ಇಲ್ಲ. ಇದರಿಂದ ಕೆಳಹಂತದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈಗ ಹಂತ, ಹಂತವಾಗಿ ಬರುವ ಅಕ್ಕಿಯನ್ನು ವಿತರಕರಿಗೆ ಕಳಿಸುವುದಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆ ಬಲ್ಲ ಮೂಲಗಳ ಪ್ರಕಾರ ಇನ್ನೂ ಕೆಲವು ದಿನ ಇರಸಿದೆ ಎಂದು ಹೇಳುತ್ತಿದ್ದಾರೆ. ಆದರೆ, ನೈಜ ಸ್ಥಿತಿಯ ಗುಟ್ಟನ್ನು ಯಾವೊಬ್ಬ ಅಧಿಕಾರಿ ಬಿಟ್ಟುಕೊಡುತ್ತಿಲ್ಲ. ಇದಕ್ಕೆ ಹಿರಿಯ ಅಧಿಕಾರಿಗಳ ಒತ್ತಡವಿದೆ ಎನ್ನುವುದು ಗೊತ್ತಿರುವ ವಿಷಯ.

ಸಾರಿಗೆ ಸಮಸ್ಯೆ: ಅಕ್ಕಿ ವಿತರಣೆಯಲ್ಲಿ ಮತ್ತಷ್ಟು ವಿಳಂಬ

ಫೆಬ್ರವರಿ ತಿಂಗಳದ ಬಾಕಿ 5 ಕೆಜಿ ಸೇರಿದಂತೆ ಈ ತಿಂಗಳದ 10 ಸೇರಿ ಒಟ್ಟು 15 ಕೆಜಿ ಅಕ್ಕಿ ನೀಡಬೇಕಾಗಿದೆ. ತಾಲೂಕಿನಲ್ಲಿ 87 ಸಾವಿರ ಪಡಿತರ ಚೀಟಿಗಳಿದ್ದು, 45 ಸಾವಿರಕ್ಕೂ ಕ್ವಿಂಟಲ್‌ಗೂ ಅಧಿಕ ಅಕ್ಕಿ ಬೇಕಾಗಿದೆ. ಆದರೆ, ಸಾಗಾಣಿಕೆಗೆ ಕೇವಲ ಎರಡ್ಮೂರ ಲಾರಿಗಳಲ್ಲಿದ್ದು, ಹೆಚ್ಚುವರಿ ಅಕ್ಕಿಯನ್ನು ಸಾಗಿಸಬೇಕಾದರೇ ಇರುವ ವಾಹನದಲ್ಲಿ ಸಾಗಿಸಲು ಹೆಚ್ಚು ವೇಳೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಟ್ರಾನ್ಸಪೋರ್ಟ್‌ ಸಮಸ್ಯೆಯಿಂದ ವೇಳೆಗೆ ಸರಿಯಾಗಿ ಅಕ್ಕಿಯನ್ನು ವಿತರಿಸಲು ಆಗದೇ ಸಮಸ್ಯೆ ಹಾಗೆ ಮುಂದುವರೆಯುವುದು ಎನ್ನುವುದು ವಾಸ್ತವ ಸತ್ಯ.

ಇನ್ನೂ ಎರಡು ದಿನಗಳಲ್ಲಿ ಈ ಸಮಸ್ಯೆಯನ್ನು ನಾವು ಬಗೆ ಹರಿಸುತ್ತೇವೆ.

-ಪ್ರತಾಪ ರಾಯಕರ, ಆಹಾರ ಇಲಾಖೆ ಇನ್‌ಸ್ಟೆಕ್ಟರ್‌.

Share this article