ಕನ್ನಡಪ್ರಭ ವಾರ್ತೆ ಸಂಕೇಶ್ವರ ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪವನ ಕಣಗಲಿ ಫೌಂಡೇಶನ್ ಹಬ್ಬದ ಸಂಭ್ರಮಕ್ಕೆಇನ್ನಷ್ಟು ಅರ್ಥತುಂಬಿ ಮಕ್ಕಳ ಕ್ರಿಯಾಶೀಲತೆಗೆ ಅವಕಾಶ ಒದಗಿಸಿದೆ ಎಂದು ಕೈಟ್ ಫೆಡರೇಷನ್‌ ಆಫ್‌ ಇಂಡಿಯಾ ಪ್ರತಿನಿಧಿ ಚಾರ್ಲಿ ಮ್ಯಾಥೀವ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪವನ ಕಣಗಲಿ ಫೌಂಡೇಶನ್ ಹಬ್ಬದ ಸಂಭ್ರಮಕ್ಕೆಇನ್ನಷ್ಟು ಅರ್ಥತುಂಬಿ ಮಕ್ಕಳ ಕ್ರಿಯಾಶೀಲತೆಗೆ ಅವಕಾಶ ಒದಗಿಸಿದೆ ಎಂದು ಕೈಟ್ ಫೆಡರೇಷನ್‌ ಆಫ್‌ ಇಂಡಿಯಾ ಪ್ರತಿನಿಧಿ ಚಾರ್ಲಿ ಮ್ಯಾಥೀವ್ ಹೇಳಿದರು.ಪಟ್ಟಣದ ಕೊಳಲಗುತ್ತಿ ಗುಡ್ಡದ ಪರಿಸರದಲ್ಲಿ ನಡೆದ 7ನೇ ವರ್ಷದ ಜಿಲ್ಲಾಮಟ್ಟದ ಪತಂಗೋತ್ಸವ-2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ-ವಿದೇಶದ ವಿವಿಧ ಭಾಗಗಳಲ್ಲಿ ನಡೆದ ಅನೇಕ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿರುವ ನಮಗೆ ಈ ಕಾರ್ಯಕ್ರಮ ಅಪೂರ್ವ ಅನುಭವ ನೀಡಿದೆ. ಕಾರ್ಯಕ್ರಮವು ತನ್ನ ವೈಶಿಷ್ಟ್ಯತೆಯಿಂದ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗಾಳಿಪಟ ತಯಾರಿಕೆ ಮತ್ತು ಹಾರಿಸುವ ಸ್ಪರ್ಧೆಗಳ ಜೊತೆಗೆ ದೇಸಿ ಆಟಗಳಿಗೆ ನೀಡಿರುವ ಪ್ರಾಮುಖ್ಯತೆ ವಿಶೇಷವಾಗಿದೆ ಎಂದು ಪ್ರಶಂಸಿಸಿದರು.ಕಾರ್ಯಕ್ರಮದ ಆಯೋಜಕ ಪವನ ಕಣಗಲಿ ಮಾತನಾಡಿ, ಸಂಕ್ರಾಂತಿಯ ನೆಪದಲ್ಲಿ ಶಾಲಾ ಮಕ್ಕಳನ್ನು ಪ್ರಕೃತಿಯ ಮಡಿಲಿನಲ್ಲಿ ಆಟವಾಡಿಸಲು ಪ್ರಾರಂಭಿಸಿದ ನಮ್ಮ ಸಣ್ಣ ಪ್ರಯತ್ನ ಇಂದು ಜಿಲ್ಲಾಮಟ್ಟದ ಉತ್ಸವವಾಗಿ ರೂಪುಗೊಂಡಿದೆ. ಇದು ನಮ್ಮಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದ್ದು, ಕೈಟ್ ಫೆಡರೇಷನ್ ಮತ್ತು ಒನ್‌ ಇಂಡಿಯಾ ಕೈಟ್‌ ಟೀಂನ ಸಹಯೋಗದಲ್ಲಿ ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಕಟ್ಟಿಕೊಡುವುದಾಗಿ ಮಕ್ಕಳಿಗೆ ಭರವಸೆ ನೀಡಿದರು.ಕೊಳಲಗುತ್ತಿ ಗುಡ್ಡದ ಪರಿಸರದಲ್ಲಿ ಶಾಲಾ ವಿದ್ಯಾರ್ಥಿಗಳು ತಯಾರಿಸಿ ಹಾರಿಸಿದ ವೈವಿಧ್ಯಮಯ ಗಾಳಿಪಟಗಳು ಆಕಾಶವನ್ನು ರಂಗೇರಿಸಿದವು. ಗಾಳಿಪಟಗಳ ಮೇಲೆ ಮಕ್ಕಳು ಚಿತ್ರಿಸಿದ್ದ ಸಂಕ್ರಾಂತಿ ವೈಭವ, ಹಳ್ಳಿಯ ಸೊಗಡು ಹಾಗೂ ಆಪರೇಷನ್‌ ಸಿಂಧೂರ’ ವಿಶೇಷಯಾಧಾರಿತ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದವು. ಗಾಳಿಪಟ ತಜ್ಞರು ಹಾರಿಸಿದ ಆಂಜನೇಯನ ಚಿತ್ರವಿರುವ ಬೃಹತ್‌ ಗಾತ್ರದ ಗಾಳಿಪಟ ಹಾಗೂ ಪ್ಯಾರಾಚೂಟ್ ಗಾಳಿಪಟಗಳು ಎಲ್ಲರನ್ನೂ ಆಕರ್ಷಿಸಿದವು.ಲಗೋರಿ, ಬುಗುರಿ, ಚಿನ್ನಿದಾಂಡು, ಚಿತ್ರಕಲಾ ಸ್ಪರ್ಧೆಗಳಲ್ಲಿ ಸ್ಪರ್ಧೆಗಳಲ್ಲಿ 450 ಶಾಲಾ ಮಕ್ಕಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಒಟ್ಟು ₹55,000 ಮೌಲ್ಯದ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕಗಳನ್ನು ಕೊಡಲಾಯಿತು.

ಕೆಎಫ್‌ಐನ ಗಾಳಿಪಟ ತಜ್ಞ ಮುಹಮ್ಮದ್‌ಇದ್ರೀಸ್, ಫಾತಿಮಾಹನ್ನಾ, ಪ್ರಜೀಶಾ ಗಾಳಿಪಟ ಪ್ರದರ್ಶನ ನೀಡಿದರು. ಎ.ಸಿ.ಬಿಜಾಪುರೆ, ಸಂಗಮೇಶ ಕಂಗಳ, ಎಂ.ಬಿ.ಸನದಿ, ಎ.ಎಸ್.ಅಣ್ಣಿಗೇರಿ, ವೀರೇಶ ಮಾಸ್ತಮರಡಿ, ಸಂತೋಷ ರೋಡಗಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಸಿಪಿಐ ಶಿವಶರಣ ಅವಜಿ, ಎಸ್.ಡಿ.ನಾಯಿಕ, ಆನಂದ ಸಂಸುದ್ದಿ, ಇರ್ಷಾದ್‌ ಮುಲ್ಲಾ, ಮಾರ್ತಾಂಡ ಗೋಟೂರಿ, ವಿಜಯ ಹಂದಿಗೂಡಮಠ, ಸುಮಲತಾ ಕಣಗಲಿ, ಶಾಮಲಿಂಗ್ ಹಾಲಟ್ಟಿ, ನಸೀಮಾ ಢಾಂಗೆ ಸೇರಿದಂತೆ ಇತರರು ಇದ್ದರು.

ಕೋಟ್....

ಪತಂಗೋತ್ಸವದಂತಹ ಕಾರ್ಯಕ್ರಮಗಳು ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಹಬ್ಬಗಳ ಹಿನ್ನೆಲೆಯನ್ನು ಹೊಸ ತಲೆಮಾರಿಗೆ ಪರಿಚಯಿಸಿ, ಸಂಕ್ರಾಂತಿಯ ಸಾಂಸ್ಕೃತಿಕ ಮಹತ್ವಕ್ಕೆಇನ್ನಷ್ಟು ಅರ್ಥ ಮತ್ತು ಗೌರವವನ್ನುತುಂಬುವ ಕಾರ್ಯ ಮಾಡುತ್ತಿವೆ. ಆದ್ದರಿಂದ ಇಂತಹ ಉತ್ಸವಗಳ ಆಯೋಜನೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ಫೌಂಡೇಶನ್ ಮಹತ್ವದ ಕಾರ್ಯ ಮಾಡುತ್ತಿದೆ.-ಪ್ರಭಾವತಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ, ಹುಕ್ಕೇರಿ.