ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನೀರಾವರಿ ಕಾಲುವೆಗಳು ಸರಿಯಾಗಿ ನಿರ್ಮಾಣವಾಗಿಲ್ಲ. ಇನ್ನೂ ಅನೇಕ ಹಳ್ಳಿಗಳ ರೈತರು ನೀರಾವರಿ ಸೌಲಭ್ಯ ದೊರಕಿಲ್ಲ. ಬರದ ನಾಡಿನ ಭಗೀರಥರೆಂದು ಹೆಸರು ಮಾಡಿರುವ ಉಸ್ತುವಾರಿ ಸಚಿವರ ಎಂ.ಬಿ.ಪಾಟೀಲರ ಹೆಸರಿಗೆ ಇದು ಕಳಂಕ ತರುವ ಘಟನೆ. ಕೂಡಲೇ ಸಚಿವರು ಎಲ್ಲ ಹಳ್ಳಿಗೆ ನೀರಾವರಿ ಸೌಲಭ್ಯ ಒದಗಿಸಿ ತಾವೂ ತಾವು ಆಧುನಿಕ ಭಗೀರಥರೆಂದು ಸಾಬೀತಪಡಿಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನು ಆರಂಭಿಸಲು ಹಾಗೂ ರಸ್ತೆ ಕುಡಿಯುವ ನೀರು, ಶಾಲೆ ಕಾಲೇಜು ಆರಂಭಿಸುವುದು, ಕಬ್ಬಿನ ಬಿಲ್ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿಜಯಪುರ ಜಿಲ್ಲಾ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಾಯಿತು.ಪಟ್ಟಣದ ಶಾಂತವೀರ ಸ್ವಾಮೀಜಿ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಸುರೇಶ ಕಿರಸೂರ ಮಾತನಾಡಿ, ಬಬಲೇಶ್ವರ ತಾಲೂಕು ಘೋಷಣೆ ಮಾಡಿ ಹಲವು ವರ್ಷಗಳು ಕಳೆದರೂ ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸದೇ ಇರುವುದು ನೋವಿನ ಸಂಗತಿ. ಕಚೇರಿಗಳ ಪ್ರಾರಂಭಕ್ಕೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರು ಸರ್ಕಾರ ಮತ್ತು ಸ್ಥಳೀಯ ಸಚಿವ ಎಂ.ಬಿ.ಪಾಟೀಲರು ಕಚೇರಿಗಳನ್ನು ಆರಂಭಿಸಲು ವಿಳಂಬ ಮಾಡುತ್ತಿರುವುದು ಖಂಡನೀಯವಾಗಿದೆ. ಕೂಡಲೇ ಎಲ್ಲ ಕಚೇರಿಗಳನ್ನು ಆರಂಭಿಸಲು ಒತ್ತಾಯಿಸಿದರು.ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸರ್ಕಾರ ನಾಮ್ ಕೇ ವಾಸ್ತೇ ಹೊಸ ತಾಲೂಕುಗಳನ್ನು ಘೋಷಣೆ ಮಾಡಿ, ಯಾವುದೇ ಕಚೇರಿಗಳನ್ನು ಪ್ರಾರಂಭಿಸದೇ ಕೈ ತೊಳೆದುಕೊಂಡಿದೆ. ತಾಲೂಕಿನಲ್ಲಿ ಯಾವುದೇ ಕಚೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವಂತೆ ಮಾಡಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕೆಂದರು. ತಾಲೂಕು ಕೇಂದ್ರದಲ್ಲಿ ಎಲ್ಲ ಕಚೇರಿಗಳನ್ನು ಪ್ರಾರಂಭಿಸುವುದರೊಂದಿಗೆ ಪದವಿ ಪೂರ್ವ, ಪದವಿ ಮಹಾವಿದ್ಯಾಲಯ ಸೇರಿದಂತೆ ತಾಲೂಕು ಆಸ್ಪತ್ರೆ ಮೇಲ್ದರ್ಜೆರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಬಾಗಲಕೋಟೆ ಜಿಲ್ಲೆಯ ರೈತ ಮುಖಂಡ ಈರಪ್ಪ ಹಂಚನಾಳ ಮಾತನಾಡಿ, ತಾಲೂಕಿನಲ್ಲಿ ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸಿ ಹಲವಾರು ತಿಂಗಳುಗಳು ಗತಿಸಿದರು ಕಾರ್ಖಾನೆ ಮಾಲೀಕರು ಕಬ್ಬಿನ ಬಿಲ್ ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ರೈತರಿಗೆ ಕಬ್ಬಿನ ಬಿಲ್ ಪಾವತಿ ಮಾಡಿಸಬೇಕೆಂದರು.ವಾಲ್ಮಿಕಿ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿದರು. ಎಸ್.ಎಸ್.ಹಿರೇಮಠ, ರುದ್ರಪ್ಪ ಗೊಳಸಂಗಿ, ಸುರೇಶ ಬ್ಯಾಡಗಿ, ಸಿದ್ರಾಯ ಚೌರ, ಬಸವರಾಜ ಸುತಗುಂಡಿ, ಸಿದ್ಧರಾಮ ಹಳ್ಳೂರ, ಪುಟ್ಟು ಗಡದನ್ನವರ ಸೇರಿ ವಿವಿಧ ಸಂಘಟನೆಗಳ ನೂರಾರು ಜನ ಹೋರಾಟಗಾರರು ಇದ್ದರು.
ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನೀರಾವರಿ ಕಾಲುವೆಗಳು ಸರಿಯಾಗಿ ನಿರ್ಮಾಣವಾಗಿಲ್ಲ. ಇನ್ನೂ ಅನೇಕ ಹಳ್ಳಿಗಳ ರೈತರು ನೀರಾವರಿ ಸೌಲಭ್ಯ ದೊರಕಿಲ್ಲ. ಬರದ ನಾಡಿನ ಭಗೀರಥರೆಂದು ಹೆಸರು ಮಾಡಿರುವ ಉಸ್ತುವಾರಿ ಸಚಿವರ ಎಂ.ಬಿ.ಪಾಟೀಲರ ಹೆಸರಿಗೆ ಇದು ಕಳಂಕ ತರುವ ಘಟನೆ. ಕೂಡಲೇ ಸಚಿವರು ಎಲ್ಲ ಹಳ್ಳಿಗೆ ನೀರಾವರಿ ಸೌಲಭ್ಯ ಒದಗಿಸಿ ತಾವೂ ತಾವು ಆಧುನಿಕ ಭಗೀರಥರೆಂದು ಸಾಬೀತಪಡಿಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.