ನಾಲೆಗಳಿಗೆ ನೀರು ಬಿಡುಗಡೆ, ಟನ್ ಕಬ್ಬಿಗೆ 4500 ರು. ನಿಗಧಿಸಿಗೊಳಿಸಿ: ರೈತರ ಪ್ರತಿಭಟನೆ

KannadaprabhaNewsNetwork |  
Published : Jun 30, 2024, 12:52 AM IST
29ಕೆಎಂಎನ್ ಡಿ13 | Kannada Prabha

ಸಾರಾಂಶ

ಕಳೆದ ಹಲವು ವರ್ಷಗಳಿಂದ ರೇಷ್ಮೆ ಬೆಳೆಗೆ ವೈಜ್ಞಾನಿಕ ಬೆಲೆ ದೊರಕದೆ ರೇಷ್ಮೆ ಸಾಕಾಣಿಕೆದಾರರು ಸಂಕಷ್ಟದಲ್ಲಿದ್ದಾರೆ. ರೇಷ್ಮೆ ಗೂಡಿನ ದರವನ್ನು 600-700 ಗಳ ಸ್ಥಿರ ಧಾರಣೆಗೆ ಕ್ರಮ ವಹಿಸುವುದು, ರೇಷ್ಮೆ ಬೆಳೆಗಾರರಿಗೆ ಸೂಕ್ತ ವೈಜ್ಞಾನಿಕ ಬೆಲೆ ಮತ್ತು ಪ್ರೋತ್ಸಾಹಧನ ವಿತರಣೆ, ಭೀಮ ಯೋಜನೆಯಡಿ ರಾಗಿ ಬೆಳೆಗೆ ವಿಮಾ ಹಣ ಪಾವತಿ ಇತರ ಬೆಳೆಗಳಾದ ಕಬ್ಬು, ಭತ್ತ, ಜೋಳ, ತರಕಾರಿ ಬೆಳೆಗೂ ಸಹ ವಿಮೆಯನ್ನು ವಿಸ್ತರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡುಗಡೆ, ಟನ್ ಕಬ್ಬಿಗೆ 4500 ರು. ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ ರೈತರು, ನಮ್ಮನ್ನಾಳುವ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡದೇ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಧಿಕ್ಕಾರದ ಘೋಷಣೆ ಕೂಗಿದರು.

ರೈತರು ಬೆಳೆದಿರುವ ಬೆಳೆಗಳ ರಕ್ಷಣೆ ಜೊತೆಗೆ ಮುಂಗಾರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು. ಅಣೆಕಟ್ಟೆ ವ್ಯಾಪ್ತಿಯ ಕೈಗಾಲುವೆಗಳ ಹೂಳು ತೆಗೆಸಿ, ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ, ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ಪ್ರತಿ ಟನ್ ಗೆ ನಿಗದಿ ಮಾಡಿರುವ 3150 ಎಫ್.ಆರ್.ಪಿ ದರವನ್ನು ಪರಿಷ್ಕರಿಸಿ 4500 ರು ಗೆ ಹೆಚ್ಚಿಸಬೇಕು. ರಾಜ್ಯ ಸರ್ಕಾರ ಕಬ್ಬಿನ ಪ್ರೋತ್ಸಾಹಧನ 500 ರು ಪಾವತಿ, ಉಚಿತವಾಗಿ ಕಬ್ಬು ಬಿತ್ತನೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕೊಬ್ಬರಿ ದರ ಇಳಿಕೆಯಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ. ಕ್ವಿಂಟಲ್ ಕೊಬ್ಬರಿಗೆ 18,000 ರು. ನಿಗಧಿ, ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿ ಶಾಶ್ವತ ಕೊಬ್ಬರಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ಕ್ವಿಂಟಲ್ ಗೆ ನಿಗದಿ ಮಾಡಿರುವ 1500 ರು. ಪ್ರೋತ್ಸಾಹ ಧನವನ್ನು ರೈತರಿಗೆ ಪಾವತಿಸಬೇಕು ಎಂದು ಆಗ್ರಹಿಸಿದರು.

ಹಾಲು ಉತ್ಪಾದಕರ ಸಂಘಗಳಿಗೆ ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 50 ರು. ದರ ನಿಗದಿ, ಕಳೆದ ಹತ್ತು ತಿಂಗಳಿಂದ ರೈತರಿಗೆ ಪಾವತಿಸದ ಹಾಲಿನ ಬಾಕಿ ಪ್ರೋತ್ಸಾಹ ಧನ 1150 ಕೋಟಿ ರು. ಬಿಡುಗಡೆಗೆ ಒತ್ತಾಯಿಸಿದರು.

ಕಳೆದ ಹಲವು ವರ್ಷಗಳಿಂದ ರೇಷ್ಮೆ ಬೆಳೆಗೆ ವೈಜ್ಞಾನಿಕ ಬೆಲೆ ದೊರಕದೆ ರೇಷ್ಮೆ ಸಾಕಾಣಿಕೆದಾರರು ಸಂಕಷ್ಟದಲ್ಲಿದ್ದಾರೆ. ರೇಷ್ಮೆ ಗೂಡಿನ ದರವನ್ನು 600-700 ಗಳ ಸ್ಥಿರ ಧಾರಣೆಗೆ ಕ್ರಮ ವಹಿಸುವುದು, ರೇಷ್ಮೆ ಬೆಳೆಗಾರರಿಗೆ ಸೂಕ್ತ ವೈಜ್ಞಾನಿಕ ಬೆಲೆ ಮತ್ತು ಪ್ರೋತ್ಸಾಹಧನ ವಿತರಣೆ, ಭೀಮ ಯೋಜನೆಯಡಿ ರಾಗಿ ಬೆಳೆಗೆ ವಿಮಾ ಹಣ ಪಾವತಿ ಇತರ ಬೆಳೆಗಳಾದ ಕಬ್ಬು, ಭತ್ತ, ಜೋಳ, ತರಕಾರಿ ಬೆಳೆಗೂ ಸಹ ವಿಮೆಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಕೆಆರ್ ಎಸ್ ನ 20 ಕಿ.ಮೀ. ವ್ಯಾಪ್ತಿಯಲ್ಲಿ ಕನ್ನಂಬಾಡಿ ಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನ್ಯಾಯಾಲಯ ಗಣಿಗಾರಿಕೆ ಮತ್ತು ಸ್ಫೋಟಕವನ್ನು ನಿಷೇಧಿಸಿದೆ. ಗಣಿ ಮಾಲೀಕರ ಲಾಭಿಗೆ ಮಣಿದಿರುವ ನೀರಾವರಿ ಇಲಾಖೆ ಅಧಿಕಾರಿಗಳು ತಜ್ಞರಿಂದ ಟ್ರಯಲ್ ಬ್ಲಾಸ್ಟಿಂಗ್‌ಗೆ ನ್ಯಾಯಾಲಯವನ್ನು ಕೋರಿದ್ದು, ಸರ್ಕಾರ ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳ ಮನವಿ ಹಿಂಪಡೆಯಲು ಮುಂದಾಗಬೇಕು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಇಂಡವಾಳು ಚಂದ್ರಶೇಖರ್, ಕೆ.ನಾಗೇಂದ್ರ ಸ್ವಾಮಿ, ಕೆ.ರಾಮಲಿಂಗೇಗೌಡ, ಎಸ್. ಮಂಜೇಶ್ ಗೌಡ, ಸೊಳ್ಳೆಪುರ ಪ್ರಕಾಶ್, ಎಚ್.ಜೆ.ಪ್ರಭುಲಿಂಗು, ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜ್, ಕೆ.ಪಿ.ಪುಟ್ಟಸ್ವಾಮಿ, ಕೆ.ಜೆ.ಮಹೇಶ್, ದೊಡ್ಡಘಟ್ಟ ಸುರೇಶ್, ದೇವಿಪುರ ಬಸವರಾಜ್ ಸೇರಿ ಹಲವರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌