ಒಂದೇ ಮಳೆಗೆ 46 ಮನೆ ಹಾನಿ, 400ಕ್ಕೂ ಹೆಚ್ಚು ಕರೆಂಟ್‌ ಕಂಬ ಧರೆಗೆ

KannadaprabhaNewsNetwork | Published : Apr 18, 2025 12:35 AM

ಸಾರಾಂಶ

ಮಂಗಳವಾರ ಸಂಜೆ‌ ಬೀಸಿದ ಭಾರಿ ಗಾಳಿ ಮಳೆಗೆ ನೂರಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸುರಿದ ಒಂದೇ ಮಳೆ ಸಾಕಷ್ಟು ಅನಾಹುತ ಹಾಗೂ ನಷ್ಟ ಉಂಟುಮಾಡಿದೆ. ಭಾರಿ ಗಾಳಿ ಮಳೆಗೆ 46 ಮನೆಗಳಿಗೆ ಹಾನಿಯಾಗಿದ್ದು, 464 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರೆ, ಸುಮಾರು ೧೦೩ ಹೆಕ್ಟೇರ್ ಕೃಷಿ ಬೆಳೆ ಹಾನಿ‌ ಸಂಭವಿಸಿದೆ.

ಮಂಗಳವಾರ ಸಂಜೆ‌ ಬೀಸಿದ ಭಾರಿ ಗಾಳಿ ಮಳೆಗೆ ನೂರಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಅಲ್ಲದೇ ಜಿಲ್ಲೆಯ ಅಲ್ಲಲ್ಲಿ ತಗಡಿನ ಮೇಲ್ಛಾವಣಿಗಳು ಗಾಳಿಯ ರಭಸಕ್ಕೆ ಹಾರಿ ಬಿದ್ದು ಅಪಾರ ಹಾನಿಯನ್ನುಂಟು ಮಾಡಿದೆ.

ಇನ್ನು ಹಾವೇರಿ ನಗರ ಸೇರಿದಂತೆ ಹಾವೇರಿ, ಹಾನಗಲ್ಲ, ಹಿರೇಕೆರೂರ ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಗಾಳಿ ಮಳೆಯ ತೀವ್ರತೆ ಹೆಚ್ಚಿತ್ತು ಇದರ ಪರಿಣಾಮವಾಗಿ ಹಾವೇರಿ ನಗರದಲ್ಲಿ ೨೭, ಹಾವೇರಿ ಗ್ರಾಮೀಣ ಭಾಗದಲ್ಲಿ ೪೧, ಹಿರೇಕೆರೂರ ತಾಲೂಕಿನಲ್ಲಿ ೪೮ ಮತ್ತು ಹಾನಗಲ್ಲ ತಾಲೂಕಿನಲ್ಲಿ ೪೧ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ. ನಗರದ ಬಹುತೇಕ ಪ್ರದೇಶ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೂ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಸಮಸ್ಯೆ ಎದುರಿಸುವಂತಾಯಿತು.

ವಿದ್ಯುತ್ ಸಂಪರ್ಕ ಕಡಿತದ ಪರಿಣಾಮ ದಿನನಿತ್ಯದ ಬಳಕೆಗೆ ನೀರು, ಮೊಬೈಲ್ ಚಾರ್ಜ್‌ಗಾಗಿ ಬಹುತೇಕರು ಪರದಾಡಿದ್ದರು. ಹಾವೇರಿ ಬಸ್‌ ನಿಲ್ದಾಣದ ಶೌಚಾಲಯ ನೀರಿಲ್ಲದೇ ಕೀಲಿ ಹಾಕಿ ಬಂದ್ ಮಾಡಿದ ಪರಿಣಾಮ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು. ನಗರದಲ್ಲಿ ಬುಧವಾರ ರಾತ್ರಿವರೆಗೂ ಕೆಲವು ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ಸಾಧ್ಯವಾಗಲಿಲ್ಲ. ಎರಡು ರಾತ್ರಿಗಳನ್ನು ಕತ್ತಲೆಯಲ್ಲೇ ಅನೇಕ ಕುಟುಂಬಗಳು ಕಳೆದವು. ವಿದ್ಯುತ್‌ ಸಮಸ್ಯೆಯಿಂದ ನೀರಿಲ್ಲದೇ ಅನೇಕ ಕುಟುಂಬಗಳು ಪರದಾಡಿದರೆ, ಅಡುಗೆ ಮಾಡಲೂ ಆಗದೇ ತೊಂದರೆ ಅನುಭವಿಸುವಂತಾಯಿತು.

ವಾಡಿಕೆಯಂತೆ ೧.೯ಮೀಮೀ ಮಳೆಯ ಬದಲಾಗಿ ೪.೯ಮೀಮೀ ಮಳೆ ಸುರಿದಿದ್ದು, ಇದರಿಂದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಹಲವು ಮನೆಗಳಲ್ಲಿ ತ್ಯಾಜ್ಯ ನೀರು ತುಂಬಿಕೊಂಡ ಪರಿಣಾಮ ನಿವಾಸಿಗಳು ಸ್ಥಳೀಯ ನಗರಸಭೆಯ ವಿರುದ್ಧ ಹರಿಹಾಯ್ದ ಘಟನೆಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಸಾಕಷ್ಟು ಬೆಳಹಾನಿ ಸಂಭವಿಸಿದ್ದು, ಹಾವೇರಿ ತಾಲೂಕಿನಲ್ಲಿ ೬೫ ಹೆಕ್ಟೇರ್, ಹಾನಗಲ್ಲ ೨೯, ಹಿರೇಕೆರೂರ ೮.೦೪, ರಟ್ಟೀಹಳ್ಳಿ ೧.೨೧ಹೆ ಸೇರಿ ಒಟ್ಟು ೧೦೩.೩೨ ಹೆಕ್ಟೇರ್ ಕೃಷಿ ಬೆಳೆ ಹಾನಿ ಸಂಭವಿಸಿದ್ದು ₹೧೭.೫೫ ಲಕ್ಷ ಹಾನಿ ಅಂದಾಜಿಸಲಾಗಿದೆ. ಅದೇ ರೀತಿ ಹಾನಗಲ್ಲ ೨೧ಹೆ, ಹಾವೇರಿ ೧.೧೦, ರಾಣೆಬೆನ್ನೂರ ೪.೮೯, ಸವಣೂರ ೭.೩೦, ಹಿರೇಕೆರೂರ ೧.೮೦, ರಟ್ಟೀಹಳ್ಳಿ ೩.೦೭ಹೆಕ್ಟೇರ್ ಒಟ್ಟು ೩೯.೧೬ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಇದರಿಂದ ₹ ೬.೬೦ ಲಕ್ಷ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಒಟ್ಟಾರೆ ಒಂದೇ ದಿನಕ್ಕೆ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಇಷ್ಟೆಲ್ಲ ಸಮಸ್ಯೆಗಳು ಉಂಟಾಗಿದ್ದು, ಇದು ಇನ್ನೂ ಮುಂಗಾರು ಪೂರ್ವ ಮಳೆಯಾಗಿದೆ. ಇನ್ನು ಬಹುತೇಕ ಮುಂಗಾರು ಪೂರ್ವ ಮಳೆಗಳು ಕೊಂಚ ಬಿರುಸಿನಿಂದಲೇ ಕೂಡಿರುತ್ತವೆ. ಮುಂದಿನ ದಿನಗಳಲ್ಲಿ ಮುಂಗಾರು ಹಂಗಾಮು ಆರಂಭಗೊಳ್ಳಲಿದ್ದು, ಅದಕ್ಕೆ ಅಗತ್ಯ ಸಿದ್ಧತೆಗೆ ಸಂಬಂಧಿಸಿದ ಇಲಾಖೆಗಳು ಸನ್ನದ್ಧಗೊಳ್ಳಬೇಕಿದೆ.

೪೬ ಮನೆಗಳಿಗೆ ಹಾನಿ: ಮಂಗಳವಾರ ಸುರಿದ ಮಳೆಗೆ ಹಾನಗಲ್ಲ ತಾಲೂಕಿನಲ್ಲಿ ೧ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅದೇ ರೀತಿ ಹಾನಗಲ್ಲ ತಾಲೂಕಿನಲ್ಲಿ ೫, ಸವಣೂರ ೩೩, ಹಿರೇಕೆರೂರ ೬, ಶಿಗ್ಗಾವಿ ತಾಲೂಕಿನಲ್ಲಿ ೧ ಮನೆಗೆ ಭಾಗಶಃ ಹಾನಿಯಾಗಿದೆ. ಒಟ್ಟು ಜಿಲ್ಲೆಯಲ್ಲಿ ೪೬ ಮನೆಗಳಿಗೆ ಹಾನಿಯಾಗಿದೆ. ಅದೇ ರೀತಿ ಹಿರೇಕೆರೂರ ತಾಲೂಕು ಹೊಲಬಿಕೊಂಡ ಗ್ರಾಮದಲ್ಲಿ ಸಿಡಿಲಿಗೆ ೧೫ ಕುರಿ, ೬ ಆಡು ಮತ್ತು ೧ ಎಮ್ಮೆಕರು ಮೃತಪಟ್ಟಿವೆ.

ನಾಲ್ಕು ದಿನಗಳ ಹಿಂದಷ್ಟೇ ಲಕ್ಷಾಂತರ ರು ಖರ್ಚು ಮಾಡಿ ಮುಖ್ಯ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ನಗರಸಭೆಯಿಂದ ಕೈಗೊಳ್ಳಲಾಗಿತ್ತು. ಹಳೆ ಪಿಬಿ ರಸ್ತೆಯ ಎಸ್ಪಿ ಕಚೇರಿ ಎದುರು, ಕೋರ್ಟ್‌ ಎದುರು ಕಾಲುವೆ ಸ್ವಚ್ಛಗೊಳಿಸಲಾಗಿತ್ತು. ಇಷ್ಟೆಲ್ಲ ಮಾಡಿದರೂ ಮಳೆ ನೀರು ರಸ್ತೆಯ ಮೇಲೆಯೇ ಒಂದಡಿ ಎತ್ತರದವರೆಗೆ ಹರಿದಿದೆ. ಅಲ್ಲದೇ ಶಿವಾಜಿನಗರದ ಮನೆಗಳಿಗೂ ನೀರು ನುಗ್ಗಿದೆ. ಆರಂಭಿಕ ಮಳೆಯ ಅವಾಂತರಗಳನ್ನೇ ನಗರಸಭೆಯಿಂದ ತಡೆದುಕೊಳ್ಳಲಾಗುತ್ತಿಲ್ಲ. ಇನ್ನು ಇದೇ ರೀತಿ ಜೋರಾಗಿ ಮಳೆಯಾದರೆ ಪರಿಸ್ಥಿತಿ ಹೇಗಿರಬಹುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮಂಗಳವಾರ ಸಂಜೆ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಹಿರೇಕೆರೂರ ತಾಲೂಕಿನಲ್ಲಿ ೧೫ ಕುರಿ, ೬ ಆಡು ಮತ್ತು ೧ ಎಮ್ಮೆಕರು ಪ್ರಾಣ ಕಳೆದುಕೊಂಡಿವೆ. ಇದರ ಪರಿಹಾರ ಮೊತ್ತವಾಗಿ ₹೧.೦೪ ಲಕ್ಷ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

Share this article