ಇದೀಗ ಮಲಪ್ರಭಾ ತೀರದ ಪ್ರದೇಶದ ಜನರು ಕುಡಿಯುವ ನೀರಿಗಾಗಿ ನಡೆಸುತ್ತಿರುವ ನಿರಂತರ ಹೋರಾಟ 2 ವರ್ಷ ಪೂರೈಸಿ, 3ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಈ ವೇಳೆ ಹಿಂದಿನ ಬಂಡಾಯ ನೆನೆಯದೇ ಇರಲಾಗದು. ಆ ರೈತ ಚಳವಳಿಯು ಸರ್ಕಾರವನ್ನೇ ಉರುಳಿಸಿತು ಎಂಬುದು ಈಗ ಇತಿಹಾಸ.
ಫಕೃದ್ದೀನ್ ಎಂ.ಎನ್.
ನವಲಗುಂದ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ಕಾರದ ವಿರುದ್ಧ ರೈತರು ನಡೆಸಿದ ರೈತ ಬಂಡಾಯಕ್ಕೆ ಜು. 21ಕ್ಕೆ 46 ವರ್ಷಗಳು ತುಂಬಲಿವೆ. ಇದೀಗ ಮಲಪ್ರಭಾ ತೀರದ ಪ್ರದೇಶದ ಜನರು ಕುಡಿಯುವ ನೀರಿಗಾಗಿ ನಡೆಸುತ್ತಿರುವ ನಿರಂತರ ಹೋರಾಟ 2 ವರ್ಷ ಪೂರೈಸಿ, 3ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಈ ವೇಳೆ ಹಿಂದಿನ ಬಂಡಾಯ ನೆನೆಯದೇ ಇರಲಾಗದು. ಆ ರೈತ ಚಳವಳಿಯು ಸರ್ಕಾರವನ್ನೇ ಉರುಳಿಸಿತು ಎಂಬುದು ಈಗ ಇತಿಹಾಸ.
1980 ಜುಲೈ 21 ಬೆಟರ್‌ಮೆಂಟ್ ಲೇವಿಯ ಅನಗತ್ಯ ಭಾರಕ್ಕೆ ತತ್ತರಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶಗೊಂಡು ಸರ್ಕಾರದ ವಿರುದ್ಧ ಸಿಡಿದೆದ್ದರು. ಆ ವೇಳೆ ಪೊಲೀಸರ ಗುಂಡೇಟಿಗೆ ಇಬ್ಬರು ರೈತರು ಬಲಿಯಾದರು. ರೈತರಿಗೆ ಅದು ಕರಾಳ ದಿನ.
ರೈತರು ತಮಗಾದ ಅನ್ಯಾಯಕ್ಕೆ ಆಕ್ರೋಶಗೊಂಡು ಉಗ್ರರೂಪದ ಪ್ರತಿಭಟನೆ ನಡೆಸಿದರು. ಆಗ ರೈತರ ಗಟ್ಟಿ ದನಿಗೆ ಗುಂಡೂರಾಯರ ಕಾಂಗ್ರೆಸ್ ಸರ್ಕಾರ ಪತನಗೊಂಡು ರೈತ ವಿರೋಧಿ ರಾಜಕಾರಣಕ್ಕೂ ಪಾಠವಾಯಿತೇನೋ ನಿಜ. ಆದರೆ, ಇಂದಿಗೂ ರೈತರ ಜ್ವಲಂತ ಸಮಸ್ಯೆಗಳು ಜೀವಂತವಾಗಿಯೇ ಇದೆ.
ಈಗ ಕಳಸಾ, ಬಂಡೂರಿ ನಾಲಾ ಯೋಜನೆ ಕುರಿತಾಗಿ ಹೋರಾಟ ಮತ್ತೆ ರೈತಶಕ್ತಿಯ ಬಲ ಪ್ರದರ್ಶನಕ್ಕೆ ನಾಂದಿ ಹಾಡಿದೆ. ಈಗ ನಡೆಯುತ್ತಿರುವ ಹೋರಾಟದಲ್ಲೂ ಹಲವಾರು ರೈತಪರ ಸಂಘಟನೆಗಳು ಹುಟ್ಟಿಕೊಂಡಿವೆಯಾದರೂ ಎಲ್ಲ ಸಂಘಟನೆಗಳ ಹೋರಾಟದ ಗುರಿ ಕಳಸಾ, ಬಂಡೂರಿ ನಾಲಾ ಯೋಜನೆಗೆ ಮಾತ್ರ ಸೀಮಿತವಾಗಿದೆ.
ತಮ್ಮ ಇತಿಮಿತಿಯಲ್ಲಿ ಹೋರಾಟದ ಕಿಚ್ಚು ಹೊರ ಹಾಕುತ್ತಿದ್ದಾರೆ, ಜತೆಗೆ ಬೆಳೆವಿಮೆ, ಬೆಂಬಲ ಬೆಲೆ, ನೀರಾವರಿ ಯೋಜನೆಗಳ ಅನುಷ್ಠಾನಗಳ ವಿಷಯಗಳನ್ನು ಈ ಸಂಘಟನೆಗಳು ಎತ್ತಿಕೊಂಡು ಹೋರಾಡುತ್ತಿವೆ. ಹೀಗಾಗಿ ಸಂಘಟನೆಗಳ ಹೆಸರು ಬೇರೆಯಾಗಿದ್ದರೂ ಉದ್ದೇಶ, ಸಾಧನೆಯ ಗುರಿ ಒಂದೇ ಆಗಿರುವುದರಿಂದ ಹೋರಾಟಕ್ಕೆ ಬಲ ಬಂದಿದೆ. ಆದರೆ, ಕಳಸಾ- ಬಂಡೂರಿ ಯೋಜನೆ ಅನುಷ್ಠಾನ ಕುರಿತು ಕೇಂದ್ರ ಸರ್ಕಾರದ ನಿಲುವು ರೈತರ ನಿದ್ದೆಗೆಡಿಸಿದೆ. ಗೋವಾ, ಮಹಾರಾಷ್ಟ್ರ ಸರ್ಕಾರಗಳ ಕ್ಯಾತೆ ಅನುಷ್ಠಾನಕ್ಕೆ ವಿಘ್ನವಾಗಿದ್ದು, ಇದರಿಂದಾಗಿ ರೈತ ಹೋರಾಟ ಗುರಿ ತಲುಪಲು ಸಾಧ್ಯವಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜು. 21ಕ್ಕೆ 46 ವರ್ಷ
ಈ ಬಂಡಾಯದ ಕಹಳೆಗೆ ಜು. 21ರಂದು 46 ವರ್ಷಗಳು ಪೂರ್ಣಗೊಂಡಿವೆ. ನರಗುಂದ ರೈತ ಬಂಡಾಯದ ಹೆಸರಿನಲ್ಲಿ ರಾಜ್ಯದಲ್ಲಿ ಹೊಸ ಹೊಸ ರಾಜಕೀಯ ಪಕ್ಷಗಳು ಉದಯವಾದವು. ಆ ಮೂಲಕ ಹಲವಾರು ಮುಖಂಡರು ರಾಜಕೀಯ ನೆಲೆ ಕಂಡುಕೊಂಡು ರಾಜ್ಯ ಹಾಗೂ ಕೇಂದ್ರ ನಾಯಕರಾದರು. ಈ ಪೈಕಿ ಇದೀಗ ನರಗುಂದ ಶಾಸಕರಾಗಿರುವ ಎನ್.ಎಚ್. ಕೋನರಡ್ಡಿ ಕೂಡ ಒಬ್ಬರಾಗಿದ್ದಾರೆ. ಆದರೂ ಈ ಭಾಗದ ರೈತರ ಕನಸು ನನಸಾಗುತ್ತಿಲ್ಲ. ಇಂದಿಗೂ ಹೋರಾಟ ಮುಂದುವರಿದಿದೆ.
ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರಗಲ್ಲು ಬಳಿ ಜು. 21ರಂದು ಹುತಾತ್ಮ ರೈತ ದಿನಾಚರಣೆಗಾಗಿ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳ ನೇತಾರರು ಆಗಮಿಸುತ್ತಾರೆ. ಆದರೆ, ರೈತರ ಬೇಡಿಕೆಗಳು ಹೋರಾಟಕ್ಕೆ ಸೀಮಿತವಾಗಿವೆ. ಮತ್ತೆ ಬಂಡಾಯ ನಡೆದೀತು ಎಂಬ ಕೂಗು ಪ್ರತಿವರ್ಷ ಪ್ರತಿಧ್ವನಿಸುತ್ತಲೇ ಇದೆ. ಆದರೆ, ಹಿಂದಿನ ಅಬ್ಬರ ಈಗ ಇಲ್ಲ.
ಹುತಾತ್ಮರಾದ ಪೊಲೀಸರು
ರೈತ ಬಂಡಾಯದ ಸಂದರ್ಭದಲ್ಲಿ ರೈತರ ಪ್ರತಿದಾಳಿಗೆ ಪ್ರಾಣ ಕಳೆದುಕೊಂಡು ಪೊಲೀಸರು ಹುತಾತ್ಮರಾದರು. ಇದರ ನೆನಪಿಗೋಸ್ಕರ ನವಲಗುಂದ ಪೊಲೀಸ್ ಠಾಣೆ ಆವರಣದಲ್ಲಿ ಸ್ಮಾರಕ ನಿರ್ಮಾಣಗೊಂಡಿವೆ. ಜು. 21ರಂದು ರೈತರಿಗೆ, ಪೊಲೀಸರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.