ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಲಿ: ಶ್ರೀಕೃಷ್ಣ ಹೆಗಡೆ

KannadaprabhaNewsNetwork |  
Published : Jul 20, 2026, 12:45 AM IST
ಹುಬ್ಬಳ್ಳಿ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಹವ್ಯಕ ಹಬ್ಬದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಎಸ್‌ಟಿ ಸಹಾಯಕ ಆಯುಕ್ತ ಶ್ರೀಕೃಷ್ಣ ಹೆಗಡೆ ಹೇಳಿದರು.

ಹುಬ್ಬಳ್ಳಿ: ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಎಸ್‌ಟಿ ಸಹಾಯಕ ಆಯುಕ್ತ ಶ್ರೀಕೃಷ್ಣ ಹೆಗಡೆ ಹೇಳಿದರು.

ನಗರದ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ''''ಹವ್ಯಕ ಹಬ್ಬ'''' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಯುವಜನತೆ ಹಣದ ಬೆನ್ನು ಹತ್ತಿದ್ದಾರೆ. ಜ್ಞಾನವು ಹಣ ಗಳಿಕೆಗೆ ಮಾತ್ರ ಸೀಮಿತವಾಗುತ್ತಿರುವುದು ಬೇಸರದ ಸಂಗತಿ. ಮಕ್ಕಳು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಬ್ರಾಹ್ಮಣ ಶ್ರೇಷ್ಠ ಕುಲ. ಇದನ್ನು ಪುರಾಣ, ಮಹಾಕಾವ್ಯಗಳಲ್ಲೂ ಉಲ್ಲೇಖಿಸಲಾಗಿದೆ. ದೇಶದಲ್ಲಿ ಹಿಂದುತ್ವ ಉಳಿದಿದ್ದರೆ ಅದಕ್ಕೆ ಬ್ರಾಹ್ಮಣರ ಕೊಡುಗೆ ಪ್ರಮುಖವಾಗಿದೆ. ಬ್ರಾಹ್ಮಣ ಸಮಾಜವನ್ನು ಟೀಕಿಸುವವರು ಹಲವರಿದ್ದರೂ, ಸಮಾಜದವರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಹಣ ಸಂಪಾದನೆಯೇ ಜೀವನದ ಏಕೈಕ ಗುರಿಯಾಗಬಾರದು. ಮಕ್ಕಳಿಗೆ ಸಂಸ್ಕಾರ, ಧರ್ಮ, ಆಚಾರ- ವಿಚಾರಗಳ ಮಹತ್ವವನ್ನು ತಿಳಿಸಬೇಕು. ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ವಿಪ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಹವ್ಯಕರು ಸಾಮರಸ್ಯಕ್ಕೆ ಹೆಸರಾಗಿದ್ದು, ಇತರ ಎಲ್ಲ ಸಮಾಜದವರೊಂದಿಗೆ ಬೆರೆತುಕೊಳ್ಳುವ ಗುಣ ಅವರಲ್ಲಿದೆ. ಹವ್ಯಕ ಸಮಾಜದ ಒಗ್ಗಟ್ಟು, ಶಿಸ್ತು, ಸಂಸ್ಕೃತಿ ಇತರ ಸಮುದಾಯಗಳಿಗೂ ಮಾದರಿಯಾಗಿದೆ. ನಗರದಲ್ಲಿ ಕಳೆದ 44 ವರ್ಷಗಳಿಂದ ಹವ್ಯಕ ಹಬ್ಬದ ಹೆಸರಿನಲ್ಲಿ ಸಮಾಜದ ಸಂಘಟನೆಯ ಜತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಸಾಧಕರಾದ ಧಾರವಾಡ ಕೆಇ ಬೋರ್ಡ್ ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್ಟ, ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕಾರ್ತಿಕ್ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ಅರುಣಕುಮಾರ ಹಬ್ಬು ಅವರು ರಚಿಸಿದ ''''ಗ್ಲಾನಿ'''' ಕಾದಂಬರಿಯನ್ನು ಹುಳಗೋಳ ನಾಗಪತಿ ಹೆಗಡೆ ಅವರು ಬಿಡುಗಡೆಗೊಳಿಸಿದರು. ಕಾದಂಬರಿ ಕುರಿತು ಮಾತನಾಡಿದ ಅವರು, ಒಂದೇ ಕುಟುಂಬದ ಎಲ್ಲರೂ ಸಾಹಿತಿಗಳೆಂಬ ದಾಖಲೆಯನ್ನು ಅರುಣಕುಮಾರ ಹಬ್ಬು ಕುಟುಂಬ ಪಡೆದಿದೆ. ಅವರ ಗ್ಲಾನಿ ಕಾದಂಬರಿ 200 ಪುಟಗಳನ್ನು ಒಳಗೊಂಡಿದ್ದು, ಕಾದಂಬರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಶ್ರೀಕಾಂತ ಹೆಗಡೆ, ವಸಂತ ಭಟ್ಟ, ಸುದರ್ಶನ ಹೇಮಾದ್ರಿ, ಶಿವರಾಮ ಹೆಗಡೆ, ವೀಣಾ ಹೆಗಡೆ ಇದ್ದರು. ಬೆಳಗ್ಗೆ 8ರಿಂದ ಮಧ್ಯಾಹ್ನ 11.30ರ ವರೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಶತ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಹವ್ಯಕರ ಅಡುಗೆ ಸ್ಪರ್ಧೆ, ಚಿತ್ರಕಲೆ, ಆಶು ಭಾಷಣ ಸೇರಿದಂತೆ ಹವ್ಯಕ ಸಂಪ್ರದಾಯ ಪ್ರತಿಬಿಂಬಿಸುವ ವಿವಿಧ ಸ್ಪರ್ಧೆಗಳು ಹಾಗೂ ಸಂಜೆ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ ಬಂಡಾಯಕ್ಕೀಗ 46 ವರ್ಷ!
ಇಂದಿನಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಆನ್‌ಲೈನ್‌ ಕಾರ್ಯ ಬಂದ್!