ಇಂದಿನಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಆನ್‌ಲೈನ್‌ ಕಾರ್ಯ ಬಂದ್!

KannadaprabhaNewsNetwork |  
Published : Jul 20, 2026, 12:45 AM IST
ರಾಜ್ಯದ ಹಲವು ಜಿಲ್ಲೆಗಳಿಂದ ಶಿಕ್ಷಕರು ಅಂಚೆ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಮನವಿ ಪತ್ರ. | Kannada Prabha

ಸಾರಾಂಶ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ವೈಯಕ್ತಿಕ ಮೊಬೈಲ್, ಇಂಟರ್‌ನೆಟ್ ವೆಚ್ಚ ಹಾಗೂ ಮಧ್ಯಾಹ್ನದ ಉಪಾಹಾರ ಯೋಜನೆ ಸೇರಿದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನ್‌ಲೈನ್‌ ಕಾರ್ಯಭಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ವೈಯಕ್ತಿಕ ಮೊಬೈಲ್, ಇಂಟರ್‌ನೆಟ್ ವೆಚ್ಚ ಹಾಗೂ ಮಧ್ಯಾಹ್ನದ ಉಪಾಹಾರ ಯೋಜನೆ ಸೇರಿದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನ್‌ಲೈನ್‌ ಕಾರ್ಯಭಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಈ ಸಮಸ್ಯೆ ಪರಿಹರಿಸದಿದ್ದರೆ ಜು. 20ರಿಂದ ಇಲಾಖೆಯ ಆನ್‌ಲೈನ್ ಕಾರ್ಯಗಳಿಗೆ ತಮ್ಮ ವೈಯಕ್ತಿಕ ಮೊಬೈಲ್ ಬಳಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಿಂದ ಸಾವಿರಾರು ಶಿಕ್ಷಕರು ಅಂಚೆ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದ್ದಾರೆ.

ಕರ್ನಾಟಕ ಅಡ್ವಾನ್ಸಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (KAAMS) ವ್ಯವಸ್ಥೆಯ ಅನುಷ್ಠಾನಕ್ಕೆ ತಮ್ಮ ವಿರೋಧವಿಲ್ಲ. ಕಳೆದ 2 ತಿಂಗಳಿಂದ ಶಾಲಾ ಸಮಯದ ನಂತರವೂ ಸಂಜೆ 5ರಿಂದ ರಾತ್ರಿ 9ರ ವರೆಗೂ ತರಬೇತಿ ಹಾಗೂ ಆನ್‌ಲೈನ್ ಸಭೆಗಳನ್ನು ನಡೆಸುತ್ತಿರುವುದರಿಂದ ಕುಟುಂಬ ಹಾಗೂ ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ವೈಯಕ್ತಿಕ ಮೊಬೈಲ್ ಬಳಕೆ

ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ ವಿತರಣೆ ಮಾಹಿತಿ, ಬಿಸಿಯೂಟ ಯೋಜನೆ ವರದಿ, SATS ದಾಖಲಾತಿ, ಬಿಎಲ್‌ಒ ಚುನಾವಣಾ ಕಾರ್ಯ, ಅಂಗವಿಕಲ ಮಕ್ಕಳ ಮಾಹಿತಿ, ಇನ್‌ಸ್ಪೈರ್ ಅವಾರ್ಡ್ ಮಾನಕ್ ಸೇರಿದಂತೆ ಹಲವು ಇಲಾಖೆ ಕಾರ್ಯಗಳಿಗೆ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಹಾಗೂ ಇಂಟರ್‌ನೆಟ್ ಬಳಸುತ್ತಿದ್ದಾರೆ. ಇದರಿಂದ ವೈಯಕ್ತಿಕ ಜೀವನಕ್ಕೂ ತೊಂದರೆಯಾಗುತ್ತಿದೆ.

ಇಲಾಖೆ ಕೆಲಸ ಬಂದ್!

ಶಿಕ್ಷಕರ ಸಮಸ್ಯೆ ಪರಿಹರಿಸದಿದ್ದರೆ ಜುಲೈ 20ರಿಂದ KAAMS, NIRANTARA ಸೇರಿದಂತೆ ಯಾವುದೇ ಆನ್‌ಲೈನ್ ಇಲಾಖಾ ಕೆಲಸಗಳಿಗೆ ವೈಯಕ್ತಿಕ ಮೊಬೈಲ್ ಬಳಸುವುದಿಲ್ಲ ಎಂದು ಶಿಕ್ಷಕರು ಎಚ್ಚರಿಕೆ ನೀಡಿದ್ದಾರೆ. ಜತೆಗೆ, ಹೆಚ್ಚುವರಿ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆಯ ಹೊಣೆಯನ್ನೂ ತಾವು ಹೊರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಇಲಾಖೆ ಕೆಲಸಗಳಿಗೆ ವ್ಯತ್ಯಯವಾಗುವ ಸಾಧ್ಯತೆಯಿದೆ.

ಅಂಚೆ ಮೂಲಕ ಅರ್ಜಿ ಸಲ್ಲಿಕೆ

ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಶಿಕ್ಷಕರು ಕಳೆದ ಒಂದು ವಾರದಿಂದ ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಕೊಪ್ಪಳ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಿಂದ ಮುಖ್ಯಮಂತ್ರಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು, ಅಪರ ಆಯುಕ್ತರು, ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಗಳಿಗೆ ಅಂಚೆ ಮೂಲಕ ತಮ್ಮ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಸ್ಪಂದಿಸದಿದ್ದರೆ ಜು. 20ರಿಂದ ಇಲಾಖೆ ಕೆಲಸಗಳಿಗೆ ತಮ್ಮ ಮೊಬೈಲ್‌ ಬಳಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ರಾಜ್ಯದಲ್ಲಿವೆ 40 ಸಾವಿರಕ್ಕೂ ಅಧಿಕ ಶಾಲೆಗಳು

ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ 1.65 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಶಾಲೆಗೆ ಕನಿಷ್ಠ ಒಂದು ಕಂಪ್ಯೂಟರ್ ಹಾಗೂ ಶಾಶ್ವತ ಇಂಟರ್‌ನೆಟ್‌ ಸಂಪರ್ಕ ಒದಗಿಸಬೇಕು ಅಥವಾ ಶಿಕ್ಷಕರಿಗೆ ಉಚಿತ ಟ್ಯಾಬ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ ಶಾಲೆಗೊಬ್ಬ ಕಂಪ್ಯೂಟರ್ ಆಪರೇಟರ್ ನೇಮಕ ಮಾಡುವುದು ಅಥವಾ ಆನ್‌ಲೈನ್ ಡೇಟಾ ನಿರ್ವಹಣೆಗೆ ಪ್ರತ್ಯೇಕ ತಾಂತ್ರಿಕ ಸಹಾಯ ವ್ಯವಸ್ಥೆ ರೂಪಿಸಬೇಕಿದೆ. ಈ ಕುರಿತು ಕಳೆದ 4-5 ವರ್ಷಗಳಿಂದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯಿಂದ ಶಿಕ್ಷಣ ಸಚಿವರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದಾರೆ. ಆದರೆ, ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಇಲ್ಲದಿರುವುದರಿಂದ ಶಿಕ್ಷಕರು ಇಲಾಖೆ ಕೆಲಸಗಳನ್ನು ತಮ್ಮ ಮೊಬೈಲ್‌ನಲ್ಲಿ ಮಾಡುತ್ತಿದ್ದಾರೆ. ಈ ಕುರಿತು ಸಂಘಟನೆಯಿಂದ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈ ವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರು ನುಗ್ಲಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ ಬಂಡಾಯಕ್ಕೀಗ 46 ವರ್ಷ!
ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಲಿ: ಶ್ರೀಕೃಷ್ಣ ಹೆಗಡೆ