ಕನ್ನಡಪ್ರಭ ವಾರ್ತೆ ಸವದತ್ತಿ ರಾಜ್ಯ ಸರ್ಕಾರ ಈಗಿರುವಂತ 42 ಇಲಾಖೆಗಳ ಜೊತೆಗೆ ಪ್ರಜಾಸೇವಾ ಎಂಬ ನೂತನ ಇಲಾಖೆಯನ್ನು ರಚಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ರಾಜ್ಯ ಸರ್ಕಾರ ಈಗಿರುವಂತ 42 ಇಲಾಖೆಗಳ ಜೊತೆಗೆ ಪ್ರಜಾಸೇವಾ ಎಂಬ ನೂತನ ಇಲಾಖೆಯನ್ನು ರಚಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ಪ್ರಜಾ ಸೇವಾ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಜಾ ಸೇವಾ ಯೋಜನೆಯು ಅತ್ಯಂತ ಶಿಸ್ತು ಬದ್ದವಾಗಿದ್ದು, ಪ್ರತಿಯೊಬ್ಬರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದರೊಂದಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿ ಶನಿವಾರ ತಾಲೂಕಿನ ವಿವಿಧ ಹೋಬಳಿ ಮಟ್ಟದಲ್ಲಿ ಈ ಕಾರ್ಯ ನಡೆಯಲಿದ್ದು, ಬರುವ ದಿನಗಳಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಈ ಯೋಜನೆ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಪ್ರಜಾಸೇವಾ ಯೋಜನೆ ಅತ್ಯಂತ ಸಹಕಾರಿಯಾಗುತ್ತಿದೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳು ನೇರವಾಗಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ತಲುಪಿ ಅವರು ಸಲ್ಲಿಸಿದ ಅರ್ಜಿಗೆ ಕೂಡಲೆ ನ್ಯಾಯ ದೊರಕಿಸುವ ಕಾರ್ಯವನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಈ ಯೋಜನೆಯು ಪಾರದರ್ಶಕತೆಯಿಂದ ಕೂಡಿದ್ದು, ಜನರ ಬೇಕು ಬೇಡಿಕೆಗಳಿಗೆ ಪ್ರತಿಯೊಂದು ಇಲಾಖೆಗಳು ಸ್ಪಂದನೆ ನೀಡಿ ತಕ್ಷಣ ಅವರಿಗೆ ನ್ಯಾಯ ಒದಗಿಸಲಾಗುತ್ತಿದೆ ಎಂದರು.ಸಭೆಯಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಎಮ್.ಎನ್.ಮಠದ, ತಾಪಂ ಇಒ ಬಸವರಾಜ ಅಯ್ಯನಗೌಡರ, ಎಪಿಎಮ್‍ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಸಿಪಿಐ ಸುರೇಶ ಬೆಂಡೆಗುಂಬಳ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕಂಬಿ ಸ್ವಾಗತಿಸಿ ವಂದಿಸಿದರು.