ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 10, 14, 143 ಮಂದಿ ಮತದಾರರಿದ್ದು, 49,733 (ಶೇ 4.67) ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ನಂತರ ಕರಡುಪಟ್ಟಿಗೆ 17,334 ಮಂದಿ ಮತದಾರರು ತಮ್ಮ ಹೆಸರನ್ನು ಸೇರಿಸಿದ್ದರು, 3,736 ಮಂದಿ ಸ್ವಯಂ ತಮ್ಮ ಹೆಸರನ್ನು ತೆಗದುಹಾಕಿದ್ದರು. ಅಂತಿಮವಾಗಿ ಇದೀಗ 10,14,143 ಮಂದಿಮತದಾರರ ಹೆಸರು ಮತದಾರರ ಪಟ್ಟಿಯಲ್ಲಿದೆ.
ಕೈಬಿಟ್ಟಿರುವ 63,331 ಮತದಾರರಲ್ಲಿ 4,145 ಮಂದಿಯ ವಿವರಗಳು ಲಭ್ಯವಿಲ್ಲದೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಉಳಿದವರಲ್ಲಿ 29,361 ಬೇರೆ ಕಡೆ ವಲಸೆ ಹೋಗಿದ್ದಾರೆ. 21,262 ಮಂದಿ ಮೃತಪಟ್ಟಿದ್ದು, 8,374 ಮಂದಿ ನಕಲಿ ಅಥವಾ ಎರಡು ಕಡೆ ಮತದಾನದ ಹಕ್ಕನ್ನು ಹೊಂದಿದವರಾಗಿದ್ದರು, 189 ಮಂದಿ ಮಾಹಿತಿ - ದಾಖಲೆ ನೀಡಲೊಪ್ಪದವರು, ವಿದೇಶಿಯರು ಇನ್ನಿತರ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಅವರು ಜಿಲ್ಲೆಯ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಹಸ್ತಾಂತರಿಸಿದರು. ಕಾಂಗ್ರೆಸಿನ ಅಬ್ದುಲ್ ಅಝೀಝ್ ಹೆಜಮಾಡಿ ಹಾಗೂ ಬಿ. ವಿಜಯ ನಾಯರಿ, ಬಿ.ಜೆ.ಪಿ.ಯ ಚಂದ್ರಶೇಖರ ಪ್ರಭು ಮತ್ತು ಜೆ.ಡಿ.ಎಸ್.ನ ಜಯರಾಮ ಆಚಾರ್ಯ ಇದ್ದರು.ಏನ್ ಮಾಡ್ತಿರೋ ಮಾಡ್ಕೊಳ್ಳಿ ಎಂದರು... !ಜಿಲ್ಲೆಯಲ್ಲಿ 21 ಮಂದಿ ಮತದಾರರು ಎಸ್ಐಆರ್ ಸಿಬ್ಬಂದಿಗಳಿಗೆ ತಮ್ಮ ಯಾವುದೇ ಮಾಹಿತಿ - ದಾಖಲೆಗಳನ್ನು ಕೊಡುವುದಕ್ಕೆ ಒಪ್ಪಿಲ್ಲ, ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಅವರನ್ನು ಮೂರು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾಹಿತಿ ಕೊಡುವುದಿಲ್ಲ, ಅದೇನ್ ಮಾಡ್ಕೊಳ್ತಿರೋ ಮಾಡ್ಕೊಳ್ಳಿ ಎಂದೆಲ್ಲಾ ಮಾತನಾಡಿದ್ದಾರೆ. ಅಂತಿಮವಾಗಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಅವರು ಮುಂದೆ ಮತದಾನದಲ್ಲಿ ಭಾಗವಹಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ. ನೇಪಾಳಿಗರಿಗೂ ಇಲ್ಲಿ ಮತದಾನದ ಹಕ್ಕಿತ್ತು !