ಗದಗ ಜಿಲ್ಲೆಯಲ್ಲಿ 49,900 ಹೆ. ಕ್ಷೇತ್ರದಲ್ಲಿ ಬಿತ್ತನೆ

KannadaprabhaNewsNetwork | Published : Jun 4, 2024 12:31 AM

ಸಾರಾಂಶ

ಪೂರ್ವ ಮುಂಗಾರಿನಲ್ಲಿ ಗದಗ ಜಿಲ್ಲೆಯ ಎಲ್ಲೆಡೆ ವರುಣನ ಕೃಪೆಯಾಗಿದ್ದು, ಮಾ. 1ರಿಂದ ಮೇ 31ರ ವರೆಗೆ ಸರಾಸರಿ 104 ಮಿ.ಮೀ. ವಾಡಿಕೆ ಮಳೆಗೆ 101 ಮಿ.ಮೀ.ಯಷ್ಟು ಮಳೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇಲ್ಲ ಎಂದು ಹೇಳಿದೆ.

ಗದಗ: ಪೂರ್ವ ಮುಂಗಾರಿನಲ್ಲಿ ಗದಗ ಜಿಲ್ಲೆಯ ಎಲ್ಲೆಡೆ ವರುಣನ ಕೃಪೆಯಾಗಿದ್ದು, ಮಾ. 1ರಿಂದ ಮೇ 31ರ ವರೆಗೆ ಸರಾಸರಿ 104 ಮಿ.ಮೀ. ವಾಡಿಕೆ ಮಳೆಗೆ 101 ಮಿ.ಮೀ.ಯಷ್ಟು ಮಳೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆ, ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇಲ್ಲ ಎಂದು ಹೇಳಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 1 ಲಕ್ಷ ಹೆ. ಮೆಕ್ಕೆಜೋಳ, 1.25 ಲಕ್ಷ ಹೆ. ಹೆಸರು, 30 ಸಾವಿರ ಹೆ. ಶೇಂಗಾ, 12 ಸಾವಿರ ಹೆ. ಸೂರ್ಯಕಾಂತಿ ಹಾಗೂ 20 ಸಾವಿರ ಹೆ. ಹತ್ತಿ ಸೇರಿದಂತೆ ಒಟ್ಟು 3 ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಈಗಾಗಲೇ ಮೆಕ್ಕೆಜೋಳ 5440 ಹೆ., ಹೆಸರು 42385 ಹೆ. ಸೇರಿದಂತೆ ಒಟ್ಟು 49,900 ಹೆ. ಕ್ಷೇತ್ರದಲ್ಲಿ ಬಿತ್ತನೆಯಾಗಿದೆ.

ರೈತರಿಗೆ ಗುಣಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಲಭ್ಯತೆ ಖಚಿತಪಡಿಸಲು ಕೃಷಿ ಇಲಾಖೆ ಅಧಿಕಾರಿಗಳು “ಗುಣ ನಿಯಂತ್ರಣ” ಅಭಿಯಾನವನ್ನು ಕೈಗೊಂಡು, ಸಹಕಾರ ಸಂಘಗಳಲ್ಲಿ, ಉತ್ಪಾದಕರಲ್ಲಿ, ಖಾಸಗಿ ಮಾರಾಟಗಾರರಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾದರಿಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ.

ರೈತರು ಬಿತ್ತನೆ ಬೀಜಗಳನ್ನು ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದ, ರಸೀದಿ ಪಡೆದು ಖರೀದಿಸಿ, ಮಾರಾಟ ಪರವಾನಗಿ ಹೊಂದಿಲ್ಲದ, ಬಿಲ್ ನೀಡದಿರುವ ಯಾವುದೇ ಅನ್ಯ ವ್ಯಕ್ತಿಗಳಿಂದ ಬಿತ್ತನೆ ಬೀಜ ಖರೀದಿಸಬಾರದು. ಬಿಡಿ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಖರೀದಿ ಮಾಡಬಾರದು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಕಾಯ್ದಿಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬೆಳೆ ಹಾನಿ ಆದಾಗ ಮಾರಾಟಗಾರರು, ಉತ್ಪಾದಕರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದು.

ರೈತರು ಬಿತ್ತನೆ ಕೈಗೊಳ್ಳುವಾಗ ಬಿತ್ತನೆ ಬೀಜಗಳನ್ನು ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ ಇತ್ಯಾದಿಗಳಿಂದ ಬೀಜೋಪಚಾರ ಕೈಗೊಂಡು ಬಿತ್ತಬೇಕು. ಬೆಳೆಗಳಲ್ಲಿ ಕೀಟ ಮತ್ತು ರೋಗದ ಬಾಧೆ ಕಡಿಮೆಯಾಗಿ ಮುಂದೆ ಕೊಡಬಹುದಾದ ರಸಗೊಬ್ಬರಗಳ, ಕೀಟನಾಶಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ಮಣ್ಣು ಆರೋಗ್ಯ ಕಾಪಾಡಬಹುದು. ಅಲ್ಲದೇ, ರಸಗೊಬ್ಬರ ಹಾಗೂ ಕೀಟನಾಶಗಳ ಬಳಕೆಗಾಗಿ ಮಾಡುವ ವೆಚ್ಚ ಕಡಿಮೆ ಮಾಡಬಹುದಾಗಿದೆ. ಗುಣಮಟ್ಟದ ಉತ್ಪಾದಕತೆಯನ್ನು ಪಡೆಯಬಹುದಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.

Share this article