ದೇಶದಲ್ಲಿ ತುರ್ತು ಪರಿಸ್ಥಿತಿಗೆ 49 ವರ್ಷ: ಬಿಜೆಪಿಯಿಂದ ಕರಾಳ ದಿನಾಚರಣೆ

KannadaprabhaNewsNetwork | Published : Jun 25, 2024 12:32 AM

ಸಾರಾಂಶ

ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್‌ ಪಕ್ಷಕ್ಕೆ ನೈತಿಕತೆ ಇಲ್ಲ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ನಡೆ ಅತ್ಯಂತ ಖಂಡನೀಯ ಹಾಗೂ ಸಂವಿಧಾನ ವಿರೋಧಿಯಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ಹಾಗೂ ವರಿಷ್ಠ ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೋರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ವೇಳೆ ತುರ್ತು ಪರಿಸ್ಥಿತಿ ಏರಿಕೆ ಮಾಡಿದ್ದ ದಿನವನ್ನು ವಿರೋಧಿಸಿ ನಗರದಲ್ಲಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಸೇರಿದ ನೂರಾರು ಕಾರ್ಯಕರ್ತರು ಮತ್ತು ಮುಖಂಡರು, ಬಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿ ತುರ್ತು ಪರಿಸ್ಥಿತಿ ಏರಿಕೆ ದಿನವನ್ನು ಇಂದು ಕರಾಳ ದಿನವಾಗಿ ಆಚರಣೆ ಮಾಡಿದರು. ನಂತರ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾಂಗ್ರೆಸ್‌ ಕಚೇರಿವರೆಗೂ ಮೆರವಣಿಗೆ ನಡೆಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್‌ ಕಚೇರಿಗೆ ನುಗ್ಗಿ ಬಿತ್ತಿಪತ್ರ ಅಂಟಿಸಲು ಆಗಮಿಸುತ್ತಿದ್ದಂತೆ ಬ್ಯಾರಿಕೇಡ್ ಹಾಕಿ ಸರ್ಪಗಾವಲಿನಲ್ಲಿ ನಿಂತಿದ್ದ ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸ್ಥಳದಲ್ಲಿಯೇ ಬಂಧಿಸಿ ಪೊಲೀಸ್‌ ಕವಾಯತು ಮೈದಾನಕ್ಕೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್‌ ಪಕ್ಷಕ್ಕೆ ನೈತಿಕತೆ ಇಲ್ಲ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ನಡೆ ಅತ್ಯಂತ ಖಂಡನೀಯ ಹಾಗೂ ಸಂವಿಧಾನ ವಿರೋಧಿಯಾಗಿದೆ. ಇದಕ್ಕಾಗಿ ಕಾಂಗ್ರೆಸ್‌ ಹಾಗೂ ವರಿಷ್ಠ ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ ಈಗ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್‌ ನಾಯಕರಿಗೆ ನೈತಿಕತೆ ಎಲ್ಲಿದೆ. ಡಾ.ಬಿ.ಆರ್. ಅಂಬೇಡ್ಕರ್‌ ಅವರ ಸಂವಿಧಾನ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಕಾಂಗ್ರೆಸ್‌ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಬಿಜೆಪಿ ಪಕ್ಷದವರು ಸಂವಿಧಾನ ಬದಲಿಸುತ್ತಾರೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ, ಬಿಜೆಪಿಗರು ಬದಲಾವಣೆ ಮಾಡಿಲ್ಲ. ಮಾಡದೇ ಇದ್ದರೂ ಆರೋಪ ಮಾಡುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನಕ್ಕೆ ದ್ರೋಹ ಎಸಗಿದವರು ಮತ್ತು ಎಸಗುತ್ತಿರುವವರು ಕಾಂಗ್ರೆಸ್‌ ಪಕ್ಷದವರು ಎಂದು ಕಿಡಿಕಾರಿದರು.

ಕಾಂಗ್ರೆಸ್ ನಿಂದ ಸ್ವಾರ್ಥಕ್ಕಾಗಿ ಸಂವಿಧಾನ‌ ದುರ್ಬಳಕೆಯಾಗಿದೆ. ಸಂವಿಧಾನಕ್ಕೆ ಕಾಂಗ್ರೆಸ್ ಪಕ್ಷ ದ್ರೋಹ ಮಾಡಿದೆ. ಸಂವಿಧಾನದ ಬಗ್ಗೆ ಮಾತನಾಡಲು ಆ ಪಕ್ಷ ನಾಯಕರಿಗೆ ನೈತಿಕತೆ ಇಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್‌, ಶಿವಕುಮಾರ್ ಆರಾಧ್ಯ, ಭೀಮೇಶ್‌, ವಸಂತ್‌ ಕುಮಾರ್, ಶಂಕರ್‌, ಹೊಸಹಳ್ಳಿ ಶಿವು, ಮಹಾಂತಪ್ಪ, ಶಿವುಲಿಂಗು, ಕ್ರಾಂತಿ ಮಂಜು, ವಿವೇಕ್‌, ಚಂದ್ರು, ನಿತ್ಯಾನಂದ, ಧರಣಿ, ದೇವೀರಮ್ಮ, ಕೆ.ಆರ್‌.ಪೇಟೆ ನಾಗಣ್ಣ, ಇಂದ್ರೇಶ್‌ ಭಾಗವಹಿಸಿದ್ದರು.

Share this article