ಹೊನ್ನಾವರ: ಬ್ರಹ್ಮರ್ಷಿ ನಾರಾಯಣ ಗುರುಗಳ ವಾಕ್ಯವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಾಮಧಾರಿ ಸಮಾಜ ಮತ್ತಷ್ಟು ಸಂಘಟಿತವಾಗುತ್ತದೆ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ ಜಿ. ತಿಳಿಸಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆ ವತಿಯಿಂದ ಬ್ರಹ್ಮರ್ಷಿ ನಾರಾಯಣ ಗುರುಗಳ ತತ್ವಗಳ ಬಗ್ಗೆ ಉಪನ್ಯಾಸ ಹಾಗೂ 2023- 24ನೇ ಸಾಲಿನಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಿಲ್ಲೆಯ ಎಲ್ಲೆಡೆ ಆಗಬೇಕು. ಸಂಘಟನೆ ಕೊರತೆಯಾದರೆ ಅಪಾಯ ತಪ್ಪಿದ್ದಲ್ಲ ಎಂದರು. ಹಿರಿಯ ಪತ್ರಕರ್ತ ದಿನೇಶ ಅಮಿನಮಟ್ಟು ಮಾತನಾಡಿ, ನಾರಾಯಣ ಗುರುಗಳು ಬಯಸಿದ ಶಿಕ್ಷಣವೆಂದರೆ ಬೌದ್ಧಿಕ ದಾಸ್ಯದಿಂದ ಮುಕ್ತರಾಗುವುದು. ನಾರಾಯಣ ಗುರುಗಳ ಚಿಂತನೆ ಕೇಳುವುದು ತುಂಬಾ ಸುಲಭ. ಅದನ್ನು ಜೀವನದಲ್ಲಿ ಅಳವಡಿಸೊಕೊಳ್ಳುವುದು ಕಷ್ಟ. ಅದನ್ನು ಅಳವಡಿಸಿಕೊಂಡರೆ ದುಶ್ಟಟ, ಮೌಢ್ಯದಿಂದ ದೂರವಿದ್ದು, ಸರಳ ಬದುಕು ಸಾಧಿಸಬೇಕಾಗುತ್ತದೆ ಎಂದರು.
ಶಾಲಾ ಶಿಕ್ಷಣ ಪದವಿಪೂರ್ವ ಇಲಾಖೆ, ಉತ್ತರ ಕನ್ನಡ ಪ್ರಭಾರ ಉಪನಿರ್ದೇಶಕ ಸತೀಶ್ ಬಿ. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ ಮತ್ತು ಪರಿಶ್ರಮ ಪಟ್ಟರೆ ಏನನ್ನಾದರೂ ಸಾಧಿಸಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಜ್ಞಾನ ಸಂಪಾದನೆ ಪಡೆದುಕೊಳ್ಳುವುದು ಅಗತ್ಯ. ವಿದ್ಯೆ ಸಂಪಾದನೆ ಜತೆಗೆ ವಿವೇಕವನ್ನು ಅಳವಡಿಸಿಕೊಳ್ಳಬೇಕು ಎಂದರು.ನಾಮಧಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ನ್ಯಾಯವಾದಿ ವಿಕ್ರಮ ನಾಯ್ಕ ಮಾತನಾಡಿ, ಸಮಾಜದವರು ಒಗ್ಗಟ್ಟಾದರೆ ಸಮಾಜ ಉನ್ನತಿ ಸಾಧ್ಯ. ನಮ್ಮ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಿದ್ದರೆ ಅಂಥವರಿಗೆ ನಮ್ಮ ಸಂಘಟನೆ ವತಿಯಿಂದ ಸಹಕಾರ ನೀಡುವುದರ ಜತೆಗೆ ಕಾನೂನು ಸಲಹೆ ನೀಡಲು ಬದ್ಧರಾಗಿದ್ದೇವೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿಯ ಜನರಲ್ ಮ್ಯಾನೇಜರ್ ಡಾ. ಎಚ್.ಆರ್. ನಾಯ್ಕ ಉಪಸ್ಥಿತರಿದ್ದರು. ಸಂಘಟನೆಯ ರಮೇಶ್ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಅನಂತ ನಾಯ್ಕ ಹೆಗ್ಗಾರ್ ಸ್ವಾಗತಿಸಿದರು. ಸುಧೀಶ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ನಾಮಧಾರಿ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸಮಾಜ ಮುಖಂಡರು ಭಾಗಿಯಾಗಿದ್ದರು.