ನೀರು ಪೋಲಾಗದಂತೆ ಎಚ್ಚರವಹಿಸಲು ಸಚಿವರ ಸೂಚನೆ

KannadaprabhaNewsNetwork | Published : Jun 25, 2024 12:32 AM

ಸಾರಾಂಶ

ನಗರದಲ್ಲಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದಲ್ಲಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ನಗರಸಭೆ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ನಗರ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ, ನಗರಸಭೆ ಆವರಣದ ಟೆಕ್ಸ್ ಟೈಲ್ಸ್ ಅಂಗಡಿ ತೆರವುಗೊಳಿಸುವುದು, ನಗರಸಭೆ ಹಳೆಯ ಕಟ್ಟಡದ ತೆರವು, ನಗರದಲ್ಲಿ ಪರ್ಯಾಯ ಜಾಗವನ್ನು ಗುರುತಿಸಿ ಶೀಘ್ರವೇ ಮಟನ್ ಮಾರ್ಕೆಟ್ ಸ್ಥಳಾಂತರಿಸುವುದು. ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ನೀರು ಪೋಲ್ ಆಗದಂತೆ ಎಚ್ಚರವಹಿಸಬೇಕು. ಲಕ್ಕವ್ವನಹಳ್ಳಿ ಬೈಪಾಸ್ ರಸ್ತೆ ನಿರ್ಮಾಣ ಬಗ್ಗೆ ಕ್ರಮ ವಹಿಸುತ್ತೇನೆ. ಯುಜಿಡಿ ಟೆಂಡರ್ ಹಂತದಲ್ಲಿದೆ. ಪೌರ ಕಾರ್ಮಿಕರ ಸಿಬ್ಬಂದಿ ಕೊರತೆ ನೀಗಿಸಲು ಅಗತ್ಯ ಕ್ರಮಕೈಗೊಳ್ಳುತ್ತೇನೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಪೌರಕಾರ್ಮಿಕರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕಡತ ಬಂದರೂ ಕೂಡಲೇ ಪರಿಶೀಲಿಸಿ ಅನುಮೋದನೆ ನೀಡುತ್ತೇನೆ. ಪ್ರತಿ ತಿಂಗಳು ಪೌರಾಯುಕ್ತರ ನೇತೃತ್ವದಲ್ಲಿ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ನನ್ನ ನೇತೃತ್ವದಲ್ಲಿ ಸಭೆ ಆಯೋಜಿಸುತ್ತೇವೆ ಎಂದರು.

ನಗರಸಭೆ ಸದಸ್ಯ ಅಜ್ಜಪ್ಪ ಮಾತನಾಡಿ, ಜನರು ಟ್ರಾಫಿಕ್ ಸಮಸ್ಯೆಗೆ ಶಾಪ ಹಾಕುತ್ತಿದ್ದಾರೆ. ಸರ್ಕಾರದ ಪರಿಹಾರ ಕೊಡಿಸಿ ಈ ಬಾರಿ ರಸ್ತೆ ಅಗಲೀಕರಣ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು. ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ನಗರಸಭೆ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಅನುದಾನ ಬಂದಿರುವ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿಯಿಲ್ಲ. ರಸ್ತೆ ಅಗಲೀಕರಣ, ರಾಜಕಾಲುವೆ ಅಗತ್ಯವಾಗಿದೆ. ಮೂಲಭೂತ ಸೌಕರ್ಯಗಳಿಗೆ ವಿಶೇಷ ಅನುದಾನದ ಅವಶ್ಯಕತೆಯಿದೆ. ಕೆರೆ ಅಭಿವೃದ್ಧಿಯಡಿ 4.5 ಕೋಟಿ ರು.ಅನುದಾನವಿದ್ದು ಅಭಿವೃದ್ಧಿಗೆ ಬಳಸುವ ಮೂಲಕ ನಗರದ ಅಭಿವೃದ್ದಿ ಮಾಡಬೇಕಿದೆ ಎಂದರು.

ಸದಸ್ಯೆ ಶಂಶುನ್ನೀಸಾ ಮಾತನಾಡಿ, ನಗರ ಪ್ರದೇಶ ವೇಗವಾಗಿ ಬೆಳೆಯುತ್ತಿದ್ದು, ಪೌರ ಕಾರ್ಮಿಕರ ಕೊರತೆ ಹೆಚ್ಚಿದೆ. ನಗರದ ಮಟನ್ ಮಾರ್ಕೆಟ್ ಕಿರಿದಾಗಿದ್ದು ನಗರದ ಆಸುಪಾಸು 2 ಎಕರೆ ಜಾಗವನ್ನು ಗುರುತಿಸಿ ಸ್ಥಳಾಂತರ ಮಾಡಬೇಕಿದೆ. ಮಟನ್ ಮಾರುಕಟ್ಟೆ ನಗರದಲ್ಲೇ ಇರುವುದರಿಂದ ನಾಯಿಗಳ ಹಾವಳಿ ಹೆಚ್ಚಿದೆ. ಟಿಟಿ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳಿಂದ 2 ಕೋಟಿ ರು. ಬಾಡಿಗೆ ಬರಬೇಕಿದ್ದು ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮವಹಿಸಬೇಕು ಎಂದರು.

ಸದಸ್ಯ ಗುಂಡೇಶ್ ಕುಮಾರ್ ಮಾತನಾಡಿ, ಒಂದು ವರ್ಷದಿಂದ ಸದಸ್ಯರ ಸಭೆಯೇ ಕರೆದಿಲ್ಲ. ಇದರಿಂದ ಜನಸಾಮಾನ್ಯರ ಸಮಸ್ಯೆಗಳೇ ತಿಳಿಯುತ್ತಿಲ್ಲ. ಪ್ರತಿ ತಿಂಗಳು ಸಭೆ ಆಯೋಜಿಸಬೇಕು. ಲೇಔಟ್ ಅನುಮೋದನೆ ನೀಡುವ ಸಮಯದಲ್ಲಿ ಕೂಲಂಕುಷವಾಗಿ ಪರೀಶಿಲನೆ ನಡೆಯಬೇಕು ಎಂದರು. ಸದಸ್ಯ ಚಿತ್ರಜಿತ್ ಯಾದವ್ ಮಾತನಾಡಿ, ಟಿ.ಬಿ.ಸರ್ಕಲ್ ಬಳಿಯ ಶೌಚಾಲಯ ಸಿದ್ದವಾಗಿದ್ದರೂ ಪ್ರಾರಂಭವಾಗಿಲ್ಲ. ಪ್ರತಿ ಬುಧವಾರ ವೇದಾವತಿ ನಗರದಲ್ಲಿ ಸಂತೆ ನಡೆಯುತ್ತಿದ್ದು ಶೌಚಾಲಯ ನಿರ್ಮಾಣವಾಗಬೇಕು ಎಂದರು.

ಸಭೆಯಲ್ಲಿ ತಹಸೀಲ್ದಾರ್ ರಾಜೇಶ್ ಕುಮಾರ್, ಪೌರಾಯುಕ್ತ ಎಚ್.ಮಹಂತೇಶ್, ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಹಾಗೂ ನಗರಸಭೆ ಸದಸ್ಯರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

--------------

ಚಿತ್ರ 1,2

ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ಹಾಗೂ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಸಚಿವ ಡಿ.ಸುಧಾಕರ್ ಮಾತನಾಡಿದರು.

Share this article