ತುರ್ತು ಪರಿಸ್ಥಿತಿ ಹೇರಿ 50 ವರ್ಷ: ಬಿಜೆಪಿ ಧರಣಿ

KannadaprabhaNewsNetwork | Published : Jun 25, 2024 12:32 AM

ಸಾರಾಂಶ

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿರುವ ಹಳೆ ಸೆಂಟ್ರಲ್‌ ಜೈಲಿನಲ್ಲಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿರುವ ಹಳೆ ಸೆಂಟ್ರಲ್‌ ಜೈಲಿನಲ್ಲಿ ಪ್ರತಿಭಟನೆ ನಡೆಸಿತು.

ಸೋಮವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಶಾಸಕರಾದ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಮುನಿರಾಜು, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇತರರು ಜೈಲಿನ ಬ್ಯಾರಕ್‌ ಕಂಬಿಗಳ ಹಿಂದೆ ನಿಂತು ಪ್ರತಿಭಟನೆ ನಡೆಸಿ, ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಪೋಸ್ಟರ್‌ ಅಭಿಯಾನ ಸಹ ನಡೆಸಲಾಯಿತು. ತುರ್ತು ಪರಿಸ್ಥಿತಿ ವೇಳೆ ಜೈಲುವಾಸವನ್ನು ಅದೇ ಜಾಗದಲ್ಲಿ ನಿಂತು ಮೆಲುಕು ಹಾಕಿದ ನಾಯಕರು, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು. ತುರ್ತು ಪರಿಸ್ಥಿತಿ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿರುವ ಕಾರಣ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಈ ನಡುವೆ ಪ್ರತಿಭಟನೆ ಮುಗಿಸಿದ ಬಳಿಕ ನೇರವಾಗಿ ಕಾಂಗ್ರೆಸ್​ ಕಚೇರಿಗೆ ಪೋಸ್ಟರ್​​​ ಅಂಟಿಸಲು ಮುಂದಾದರು. ಇದಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು, ಪ್ರೀಡಂ ಪಾರ್ಕ್​ ಬಳಿಯೇ ತಡೆದರು. ಕಾಂಗ್ರೆಸ್ ಕಚೇರಿಗೆ ತೆರಳುವ ಪ್ರಯತ್ನ ಕೈಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಎಸಗಿರುವ ಕಾಂಗ್ರೆಸ್‌ ಪಕ್ಷವು ದೇಶದ ಜನತೆಯ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕು. ‘ತುರ್ತು ಪರಿಸ್ಥಿತಿ ಸಂಬಂಧ ದೇಶಕ್ಕೆ ದ್ರೋಹ ಬಗೆದಿದ್ದೇವೆ; ಸಂವಿಧಾನಕ್ಕೆ ಅಪಚಾರ ಮಾಡಿದ್ದೇವೆ’ ಎಂಬುದಾಗಿ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಮೊದಲಾದ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಿದ್ದರು. ರಾಹುಲ್ ಗಾಂಧಿ ಅವರಿಗೆ ಮಾನ, ಮರ್ಯಾದೆ ಇದ್ದರೆ ರಾಮಲೀಲಾ ಮೈದಾನಕ್ಕೆ ಬಂದು ಇಡೀ ದೇಶದ ಜನರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸಂವಿಧಾನವನ್ನು ಬಿಜೆಪಿ ಬದಲಿಸಿದೆ ಎಂಬ ಆರೋಪ ಮಾಡುತ್ತಿದ್ದು, ನಾವೇನೂ ಬದಲಾವಣೆ ಮಾಡಿಲ್ಲ. ಸಂವಿಧಾನ ಬದಲಿಸದಿದ್ದರೂ ಬಿಜೆಪಿ ಮೇಲೆ ಅಪವಾದ ಹೊರಿಸುತ್ತಾರೆ. ಸಂವಿಧಾನಕ್ಕೆ ಅಪಚಾರ, ದ್ರೋಹ ಬಗೆದವರು ಕಾಂಗ್ರೆಸ್ಸಿಗರು.

ಬಿಜೆಪಿ ಮುಖಂಡರು

Share this article