ರಾಜ್ಯದ 27 ಸಂಸದರು ಕನ್ನಡದಲ್ಲಿ, ಕಾಗೇರಿ ಸಂಸೃತದಲ್ಲಿ ಪ್ರಮಾಣ

KannadaprabhaNewsNetwork |  
Published : Jun 25, 2024, 12:32 AM ISTUpdated : Jun 25, 2024, 09:23 AM IST
ಕಾಗೇರಿ ಸಂಸೃತದಲ್ಲಿ ಪ್ರಮಾಣ | Kannada Prabha

ಸಾರಾಂಶ

ಹದಿನೆಂಟನೇ ಲೋಕಸಭೆ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾದ 28 ಮಂದಿ ನೂತನ ಸಂಸದರು ಸೋಮವಾರ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

 ನವದೆಹಲಿ :  ಹದಿನೆಂಟನೇ ಲೋಕಸಭೆ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾದ 28 ಮಂದಿ ನೂತನ ಸಂಸದರು ಸೋಮವಾರ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಂಸದ ಕಾಗೇರಿ ಹೊರತುಪಡಿಸಿ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಸೇರಿ ಉಳಿದೆಲ್ಲ ಸಂಸದರು ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿದ್ದು ವಿಶೇಷ. ಇವರಲ್ಲಿ ಕೆಲವರು ದೇವರು, ಮತದಾರರ ಹೆಸರಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.

ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಜಗದೀಶ್‌ ಶೆಟ್ಟರ್‌, ಪಿ.ಸಿ.ಗದ್ದಿಗೌಡರ್‌, ರಮೇಶ್‌ ಜಿಗಜಿಣಗಿ, ರಾಧಾಕೃಷ್ಣ ದೊಡ್ಡಮನಿ, ಕುಮಾರ್‌ ನಾಯ್ಕ್‌, ಸಾಗರ್ ಖಂಡ್ರೆ, ಇ.ತುಕಾರಾಂ, ರಾಜಶೇಖರ್‌ ಹಿಟ್ನಾಳ್‌, ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್‌, ಯಧುವೀರ್‌ ಸೇರಿ ಎಲ್ಲ ಹಿರಿಯ, ಕಿರಿಯ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಶೇಷತೆ ಮೆರೆದರು.ಇವರಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತದಾರರು, ಚಾಮರಾಜನಗರ ಸಂಸದ ಸುನೀಲ್‌ ಬೋಸ್‌, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ದೇವರು ಮತ್ತು ಮತದಾರರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರೆ, ದಕ್ಷಿಣ ಕನ್ನಡ ಸಂಸದ ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ತುಳುಭಾಷೆಯಲ್ಲಿ ನಮನ: ದಕ್ಷಿಣ ಕನ್ನಡದ ನೂತನ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್‌ ಚೌಟ ಅವರು ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು. ಜತೆಗೆ ಪ್ರಮಾಣವಚನದ ಕೊನೆಯಲ್ಲಿ ತುಳುಭಾಷೆಯಲ್ಲಿ ‘ಮಾತೆರೆಗ್ಲಾ ಸೊಲ್ಮೆಲು’ (ಎಲ್ಲರಿಗೂ ನಮನಗಳು) ಎಂದೂ ಹೇಳಿದ್ದು, ತುಳುನಾಡಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿರುವ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತ್ರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಭತೃಹರಿ ಮಹತಾಬ್‌ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದರು.

ಕನ್ನಡ ಶಾಲು ಹೊದ್ದು ಪ್ರಮಾಣ:ಉಡುಪಿ-ಚಿಕ್ಕಮಗಳೂರಿನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕನ್ನಡದ ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. 

ಉಡುಪಿಯ ಸಾಸ್ತಾನದಲ್ಲಿ ಭಾನುವಾರ ಕೋಟ ಅವರ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ್ದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು, ಕನ್ನಡದ ಶಾಲು ಹಾಕಿಕೊಂಡು, ಕನ್ನಡದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುವಂತೆ ಕೋರಿದ್ದರು. ಜತೆಗೆ ಕೋಟ ಅವರಿಗೆ ಕನ್ನಡ ಶಾಲು ಹೊದಿಸಿ ಗೌರವಿಸಿದ್ದರು. ಇದೀಗ ಕೋಟ ಅವರು ಅದೇ ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿರುವುದಕ್ಕೆ ಕಸಾಪ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಎಸ್ಸೆಸ್ಸೆಲ್ಸಿ: ಕನ್ನಡ ಪರೀಕ್ಷೆ ಬರೆದ 254 ವಿದ್ಯಾರ್ಥಿಗಳು