ನೆಟ್‌ ನೀಟ್‌ ಪರೀಕ್ಷಾ ಅಕ್ರಮ ತನಿಖೆಗೆ ಒತ್ತಾಯ

KannadaprabhaNewsNetwork |  
Published : Jun 25, 2024, 12:32 AM IST
24ಎಚ್‌ಪಿಟಿ11ಹೊಸಪೇಟೆಯ ತಹಸೀಲ್ದಾರ ಕಚೇರಿ ಎದುರು ಎಐಡಿವೈಒ ಮತ್ತು ಎಐಡಿಎಸ್‌ಒ ಸಂಘಟನೆಗಳ ಸದಸ್ಯರು ಜಂಟಿಯಾಗಿ ವಿಜಯನಗರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಆದರೆ ಇದರಿಂದ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ.

ಹೊಸಪೇಟೆ: ಯುಜಿಸಿ-ನೆಟ್‌ ಹಾಗೂ ನೀಟ್‌ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದವರನ್ನು ತಕ್ಷಣವೇ ಬಂಧಿಸಬೇಕು. ಪರೀಕ್ಷೆ ನಡೆಸುವ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನಗರದ ತಹಸೀಲ್ದಾರ ಕಚೇರಿ ಎದುರು ಎಐಡಿವೈಒ, ಎಐಡಿಎಸ್‌ಒ ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದವು.

ಎಐಡಿವೈಒನ ರಾಜ್ಯ ಸಮಿತಿ ಸದಸ್ಯ ಜಗದೀಶ್‌ ಮಾತನಾಡಿ, ಜೂ.18ರಂದು ಎನ್‌ಟಿಎ ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಆದರೆ ಇದರಿಂದ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಈ ವರ್ಷದಿಂದ ಪಿಎಚ್‌ಡಿ ಪ್ರವೇಶಕ್ಕೂ ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ ಮಾಡಲಾಗಿದೆ. ಪಿಎಚ್‌ಡಿ ಪ್ರವೇಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯುವುದಕ್ಕಾಗಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎಲ್ಲ ನೇಮಕಾತಿಗಳಲ್ಲೂ ನಡೆಯುವ ಭ್ರಷ್ಟಾಚಾರದ ಭೂತ ಈಗ ಈ ಪರೀಕ್ಷೆಗೂ ಬಡಿದುಕೊಂಡಿದೆ. ವೈದ್ಯಕೀಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಯಾದ ನೀಟ್ ಕೂಡ ನೀಟಾಗಿ ನಡೆಯಲಿಲ್ಲ, ನೆಟ್ ನೆಟ್ಟಗಾಗಲಿಲ್ಲ ಎಂದು ವ್ಯಂಗ್ಯವಾಡಿದರು.

ಎಐಡಿಎಸ್‌ಒ ಜಿಲ್ಲಾಸಮಿತಿ ಸದಸ್ಯೆ ಶಾಂತಿ ಎ. ಮಾತನಾಡಿ, ಅಕ್ರಮ ಮಾಡಿದವರು ದುಡ್ಡಿದ್ದವರಿಗೆ ಉದ್ಯೋಗ, ದುಡ್ಡಿದ್ದವರಿಗೆ ಶಿಕ್ಷಣ ಎನ್ನುವ ವಾತಾವರಣ ಸೃಷ್ಟಿಸಿದ್ದಾರೆ. ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳಲಾಗಿದೆ. ಲಕ್ಷಾಂತರ ಪರೀಕ್ಷಾರ್ಥಿಗಳ ಶ್ರಮವನ್ನು ಹಾಳು ಮಾಡಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಹೊಸಪೇಟೆ ಗ್ರೇಡ್‌-2 ತಹಸೀಲ್ದಾರ ವೆಂಕಟೇಶ್‌ ಆಶ್ರಿತ್‌ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಶಿವು ಚಿತ್ತವಾಡಗಿ, ಡಾ.ಸಂದೀಪ್, ಡಾ.ದೊಡ್ಡಬಸವ, ಡಾ.ಮಹೇಶ್, ಡಾ. ವಿರೂಪಾಕ್ಷ, ಡಾ. ಸಿದ್ದಪ್ಪ, ಪ್ರಮೋದ್, ಮನೋಜ್, ರಮೇಶ್, ಪ್ರೇಮಾ, ಕೀರ್ತಿ, ಪ್ರಕಾಶ ನಾಯಕ, ರವಿಕಿರಣ, ಎಐಡಿವೈಒ ನ ಜಿಲ್ಲಾ ಸಮಿತಿ ಸದಸ್ಯರಾದ ಪಾಲಾಕ್ಷ ಹಡಗಲಿ, ಅಜಯ್ ಬೊಮ್ಮಗಟ್ಟ, ಎಐಡಿಎಸ್‌ಒನ ಸದಸ್ಯರು ಹಾಗೂ ನೆಟ್ ಪರೀಕ್ಷೆಗೆ ಒಳಗಾಗಿದ್ದ ಪರೀಕ್ಷಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...