5.70 ಕೋಟಿ ಡ್ರಗ್ಸ್‌ ಜಪ್ತಿ: 11 ಪೆಡ್ಲರ್ಸ್‌ ಸೆರೆ

KannadaprabhaNewsNetwork |  
Published : Jul 08, 2026, 04:00 AM IST
ಡ್ರಗ್ಸ್‌ ಪರಿಶೀಲನೆ | Kannada Prabha

ಸಾರಾಂಶ

ಡ್ರಗ್ಸ್‌ ಪೆಡ್ಲರ್ಸ್‌ಗಳಿಂದ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ಸೀಮಂತ್‌ ಕುಮಾರ್‌ ಸಿಂಗ್‌ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ಮಾರಾಟ ಜಾಲ ವಿರುದ್ಧ ಪೊಲೀಸರ ಬೇಟೆ ಮುಂದುವರಿದಿದ್ದು, 9 ಮಂದಿ ಹೊರ ರಾಜ್ಯದವರು ಸೇರಿದಂತೆ 11 ಪೆಡ್ಲರ್‌ಗಳನ್ನು ಸೆರೆ ಹಿಡಿದು 5.70 ಕೋಟಿ ರು.ಮೌಲ್ಯದ ಡ್ರಗ್ಸ್ ಅನ್ನು ಪ್ರತ್ಯೇಕವಾಗಿ ಪೊಲೀಸರು ಜಪ್ತಿ ಮಾಡಿದ್ದಾರೆ.

ತ್ರಿಪುರದ ಸಂದೀಪ್ ಮಲ್ಲಿಕ್‌, ಶಾಂತನು ಹೆರ್ಬಮಾ, ಬಿಹಾರದ ತುಪಾನಿ ಯಾದವ್‌, ಲಿಟನ್ ದೇಬನಾಥ್‌, ಪಶ್ಚಿಮ ಬಂಗಾಳದ ಸುಮನ್‌ ದಾಸ್, ಬಿಹಾರ ಕುಮಾರ್‌, ಸುಶಾಂತ್ ಕುಮಾರ್, ಮೊಹಮ್ಮದ್ ಕಲಂದರ್‌, ನಿತೇಶ್ ಪೂಜಾರಿ, ಕೇರಳದ ಜಾಸೀರ್ ಹಾಗೂ ಅಭಿಷೇಕ್ ಬಂಧಿತರಾಗಿದ್ದು, ಆರೋಪಿಗಳಿಂದ 2 ಕೆಜಿ ಎಂಡಿಎಂಎ, 1.7 ಕೆಜಿ ಹೈಡ್ರೋ ಗಾಂಜಾ, 32.9 ಕೆಜಿ ಗಾಂಜಾ, 5.90 ಲಕ್ಷ ರು ನಗದು ಹಾಗೂ 2 ಮೊಬೈಲ್ ಗಳು ಸೇರಿದಂತೆ 2.85 ಕೋಟಿ ರು ಮೌಲ್ಯದ ಜಪ್ತಿ ಮಾಡಲಾಗಿದೆ. ಈ ಡ್ರಗ್ಸ್ ಮಾರುಕಟ್ಟೆ ಮೌಲ್ಯವು 5.70 ಕೋಟಿ ಇದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಡ್ರಗ್ಸ್ ಮಾಫಿಯಾ ವಿರುದ್ಧ ಪ್ರತ್ಯೇಕವಾಗಿ ವಿದ್ಯಾರಣ್ಯಪುರ, ಜೀವನ್ ಭೀಮಾನಗರ, ದೇವನಹಳ್ಳಿ ಹಾಗೂ ಹೆಬ್ಬಗೋಡಿ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹೊರರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ದುಬಾರಿ ಬೆಲೆಗೆ ಆರೋಪಿಗಳು ಮಾರುತ್ತಿದ್ದರು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಬಿಇ ಡ್ರಾಪ್ ಔಟ್ ವಿದ್ಯಾರ್ಥಿಗಳು

ಎಂಜಿನಿಯರಿಂಗ್ ವ್ಯಾಸಂಗಕ್ಕೆ ಉದ್ಯಾನನಗರಿಗೆ ಬಂದು ಹಣದಾಸೆಗೆ ಮಾದಕ ವಸ್ತು ದಂಧೆಗಿಳಿದಿದ್ದ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಹೆಸರಘಟ್ಟ ಸಮೀಪದ ತಮ್ಮನಹಳ್ಳಿ ನಿವಾಸಿಗಳಾದ ಸಂದೀಪ್ ಹಾಗೂ ಶಾಂತನು ಬಂಧಿತರಾಗಿದ್ದು, ಆರೋಪಿಗಳಿಂದ 4 ಕೋಟಿ ರು. ಮೌಲ್ಯದ 2 ಕೆಜಿ ಎಂಡಿಎಂ ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2 ವರ್ಷಗಳ ಹಿಂದೆ ಬಿಇ ಓದಲು ತ್ರಿಪುರದಿಂದ ಸಂದೀಪ್ ಹಾಗೂ ಶಾಂತನು ಬಂದಿದ್ದರು. ಆದರೆ ಓದಿಗೆ ಅರ್ಧಕ್ಕೆ ಟಾಟಾ ಹೇಳಿದ ಇಬ್ಬರು, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದರು. ನೈಜೀರಿಯಾ ಮೂಲದ ಪೆಡ್ಲರ್‌ಗಳಿಂದ ಎಂಡಿಎಂಎ ಖರೀದಿಸಿ ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು. ಈ ಆರೋಪಿಗಳನ್ನು ಇನ್ಸ್‌ಪೆಕ್ಟರ್‌ ಕೆ.ಆರ್‌.ಮಂಜುನಾಥ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಫೆ ನೆಪದಲ್ಲಿ ಡ್ರಗ್ಸ್

ಕೆಫೆ ಆರಂಭಿಸುವ ನೆಪದಲ್ಲಿ ಡ್ರಗ್ಸ್ ದಂಧೆಗಿಳಿದಿದ್ದ ಕೇರಳ ಮೂಲದ ಇಬ್ಬರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಜಾಸೀರ್ ಹಾಗೂ ಅಭಿಷೇಕ್ ಬಂಧಿತರಾಗಿದ್ದು, ಆರೋಪಿಗಳಿಂದ 1.37 ಕೋಟಿ ರು. ಮೌಲ್ಯದ 1.767 ಗ್ರಾಂ ಹೈಡ್ರೋ ಗಾಂಜಾ, 5.90 ಲಕ್ಷ ರು. ನಗದು, 2 ಐಫೋನ್ ಹಾಗೂ ಬೈಕ್ ಜಪ್ತಿಯಾಗಿದೆ. ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ಎಲೆಕ್ಟ್ರಾನಿಕ್ ಸಿಟಿ ಸಮೀಪ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ನಗರದಲ್ಲಿ ಕೆಫೆ ಪ್ರಾರಂಭಕ್ಕೆ ಜಾಸೀರ್ ಹಾಗೂ ಅಭಿಷೇಕ್ ಸಿದ್ಧತೆ ನಡೆಸಿದ್ದರು. ಆದರೆ ಕೆಫೆ ವ್ಯವಹಾರ ನೆಪದಲ್ಲಿ ಹಣ ಸಂಪಾದನೆಗೆ ಡ್ರಗ್ಸ್ ಮಾರಾಟಕ್ಕಿಳಿದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಟಿ.ಎಲ್.ಪ್ರವೀಣ್ ಕುಮಾರ್ ತಂಡ ದಾಳಿ ನಡೆಸಿದೆ. ಜಾಸೀರ್‌, ಅಭಿಷೇಕ್. ಕೇರಳದ ಮೂಲದವರು. ಜಾಸೀರ್. ಎರಡು ವರ್ಷಗಳಿಂದ ಅಪಾರ್ಟ್‌ಮೆಂಟ್‌ ನೆಲೆಸಿದ್ದರು. ಕೆಫೆ ಆರಂಭಕ್ಕೆ ತಯಾರಿಸಿದ್ದರು.

ಪ.ಬಂಗಾಳದ ಕಾರ್ಮಿಕರು ಬಲೆಗೆ

ಇನ್ನು ದೇವನಹಳ್ಳಿ ಠಾಣೆ ಪೊಲೀಸರ ಗಾಳಕ್ಕೆ ಬಿಹಾರ ಹಾಗೂ ಪಶ್ಚಿಮ ಬಂಗಾಳ ಮೂಲದ ಐವರು ಕಾರ್ಮಿಕರು ಬಿದ್ದಿದ್ದಾರೆ. ತಮ್ಮ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಕೂಲಿ ಕಾರ್ಮಿಕರಿಗೆ ಆರೋಪಿಗಳು ಮಾರುತ್ತಿದ್ದರು. ಇವರಿಂದ 16.70 ಲಕ್ಷ ರು.ಮೌಲ್ಯದ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಇಬ್ಬರು ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದು, ಈ ಆರೋಪಿಗಳಿಂದ 16 ಲಕ್ಷ ರು. ಮೌಲ್ಯದ 16 ಕೇಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತನ ಕಿರಿಯ ಸೋದರನಿಗೂಪರಿಹಾರದ ಹಕ್ಕಿದೆ: ಹೈಕೋರ್ಟ್
ಕಾರು ಓವರ್‌ ಟೇಕ್‌ ವಿಚಾರಕ್ಕೆ 5ಪುಂಡರಿಂದ ವ್ಯಕ್ತಿಯ ಮೇಲೆ ಹಲ್ಲೆ