ಮಂಗಳೂರು: ಬಿಲ್ಲವ ಸಮುದಾಯಕ್ಕೆ ಸೇರಿದ ಕೇರಳದ ಶಿವಗಿರಿ ಮಠದ ಶಾಖಾ ಮಠಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ 5 ಎಕರೆ ಜಾಗ ನೀಡಲು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಾರಾಯಣ ಗುರುಗಳು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ ತೊಡೆದುಹಾಕಲು ಪ್ರಯತ್ನ ಮಾಡಿದ್ದರು. ಅವರು ಶಿವ ದೇವಾಲಯ ಸ್ಥಾಪನೆ ಮಾಡಿದಾಗ ಎದುರಾದ ಆಕ್ಷೇಪಗಳಿಗೆ ‘ನಿಮ್ಮ ಶಿವನನ್ನು ಸ್ಥಾಪಿಸಿಲ್ಲ, ನಮ್ಮ ಶಿವನನ್ನು ಸ್ಥಾಪನೆ ಮಾಡಿದ್ದೇವೆ’ ಎಂದವರು. ಅಸ್ಪೃಶ್ಯರು ಎಂಬ ಕಾರಣಕ್ಕೆ ದೇವಾಲಯಗಳಿಗೆ ಪ್ರವೇಶ ನೀಡದಿದ್ದರೆ ಆ ದೇವಾಲಯಗಳಿಗೇ ಹೋಗಬೇಡಿ, ನಿಮ್ಮದೇ ದೇವಾಲಯ ಮಾಡಿ ಎಂಬ ಸಂದೇಶ ನೀಡಿದವರು. ನಾರಾಯಣ ಗುರುಗಳ ಜೀವನವೇ ಒಂದು ಇತಿಹಾಸ ಎಂದರು.ಸರ್ಕಾರದ ವತಿಯಿಂದಲೇ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ’ ಆಚರಣೆ ಆರಂಭಿಸಿದ್ದು 2016ರಲ್ಲಿ ಕಾಂಗ್ರೆಸ್ ಸರ್ಕಾರ ಎಂದು ಹೇಳಿದ ಸಿಎಂ, ನೂರು ವರ್ಷಗಳ ಹಿಂದೆ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವೆ ನಡೆದ ಮಹತ್ವದ ಸಂವಾದವು ಭಾರತದ ಆಧುನಿಕ ಇತಿಹಾಸದ ಹಾದಿಗೆ ದಿಕ್ಸೂಚಿ ನೀಡಿತು. ಗುರುಗಳ ತತ್ವಗಳಾದ ಸಹಬಾಳ್ವೆ ಮತ್ತು ಧರ್ಮ ಸಹಿಷ್ಣುತೆಯನ್ನು ಅಂಬೇಡ್ಕರ್ ದೇಶದ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಮೌಲ್ಯಗಳು ಎಲ್ಲರಲ್ಲೂ ಬೆಳೆಯಬೇಕು ಎಂದು ಆಶಿಸಿದರು.ಗುಲಾಮಗಿರಿ ಮನಸ್ಥಿತಿ ಬಿಡಿ: ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳಾದರೂ ಸಮಾಜದಲ್ಲಿ ಗುಲಾಮಗಿರಿ ಮನಸ್ಥಿತಿ ಇನ್ನೂ ಹೋಗಿಲ್ಲ. ಮೇಲ್ಜಾತಿಯವನು ಬಡವನಾದರೂ ‘ಸ್ವಾಮೀ, ಬುದ್ಧೀ’ ಎಂದು ಕರೆಯುತ್ತಾರೆ, ದಲಿತ ಶ್ರೀಮಂತನಾದರೂ ಏಕವಚನದಲ್ಲಿ ಸಂಬೋಧಿಸುತ್ತಾರೆ. ಇದೇ ಗುಲಾಮಗಿರಿ ಸಂಕೇತ ಎಂದು ವಿಶ್ಲೇಷಿಸಿದ ಸಿದ್ದರಾಮಯ್ಯ, ಈ ಗುಲಾಮಗಿರಿ ಮನಸ್ಥಿತಿ ಹೋಗುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ ಎಂದರು.ಸಹಿಷ್ಣುತೆ, ಸಹಬಾಳ್ವೆ ಎಲ್ಲರಲ್ಲೂ ಬೆಳೆಯಲಿ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ದ್ವೇಷಿಸುವಂತೆ ಹೇಳಿಲ್ಲ. ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಆಪರೇಶನ್ ಮಾಡುವಾಗ ತಮ್ಮದೇ ಜಾತಿಯವರ ರಕ್ತ ಬೇಕು ಅಂತ ಕೇಳ್ತೀರಾ? ರೋಗ ವಾಸಿಯಾದ ಮೇಲೆ ಸಮಾಜಕ್ಕೆ ಬಂದು ನೀನ್ಯಾವ ಜಾತಿ ಅಂತ ಕೇಳ್ತಾರಲ್ಲ, ಅದೇ ಸ್ವಾರ್ಥ. ಈ ಮನಸ್ಥಿತಿಯನ್ನು ಬಿಟ್ಟು ಎಲ್ಲರೂ ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಗುರು- ಗಾಂಧಿ ಮೈದಾನ: ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್ ಯು. ಟಿ. ಖಾದರ್ ಮಾತನಾಡಿ, ಗುರು- ಗಾಂಧಿ ಸಂವಾದ ಶತಮಾನೋತ್ಸವ ನಡೆದ ಮಂಗಳೂರು ವಿವಿ ಕ್ಯಾಂಪಸ್‌ನ ಮೈದಾನಕ್ಕೆ ಗುರು- ಗಾಂಧಿ ಮೈದಾನ ಎಂದು ನಾಮಕರಣಗೊಳಿಸಿ ಇಲ್ಲಿ ಪಾರ್ಕ್, ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.ಹಿಂದೂ, ಮುಸ್ಲಿಂ, ದಲಿತರು, ಕ್ರೈಸ್ತರು, ಶ್ರೀಮಂತರು, ಶೋಷಿತರ ಮಕ್ಕಳು ಕೈ ಕೈ ಹಿಡಿದು ಜತೆಯಾಗಿ ಸಾಗುವ ವಾತಾವರಣ ನಿರ್ಮಾಣ ಅದಾಗ ಮಾತ್ರ ಅಭಿವೃದ್ಧಿ ಆದಂತೆ ಎಂದು ಹೇಳಿದ ಅವರು, ಸಾಮರಸ್ಯ ನಿರ್ಮಾಣಕ್ಕೆ ತಾನು ಯಾವ ಹೆಜ್ಜೆ ಇಡಲೂ ಸಿದ್ಧ ಎಂದರು.ಕಾರ್ಯಕ್ರಮದ ಕೇಂದ್ರ ಸಮಿತಿ ಅಧ್ಯಕ್ಷ, ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಗಿರಿ ಮಠದ ಕಾರ್ಯದರ್ಶಿ ಶುಭಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಗೃಹ ಸಚಿವ ಡಾ.ಜಿ. ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಜನಾರ್ದನ ಪೂಜಾರಿ, ಶಾಸಕರಾದ ಅಶೋಕ್ ರೈ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖಂಡರಾದ ರಕ್ಷಿತ್ ಶಿವರಾಂ, ಪ್ರತಿಭಾ ಕುಳಾಯಿ, ಹರೀಶ್ ಕುಮಾರ್, ವಿಶ್ವಾಸ್ ಕುಮಾರ್ ದಾಸ್, ಶಶಿಧರ್ ಹೆಗ್ಡೆ, ಪದ್ಮರಾಜ್, ಪಿವಿ ಮೋಹನ್, ಎಂ.ಎ. ಗಫೂರ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು. ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ ಸ್ವಾಗತಿಸಿದರು.
ಸಂವಿಧಾನದ ತತ್ವಗಳಿಗೆ ಬೆದರಿಕೆ: ಕೆ.ಸಿ. ವೇಣುಗೋಪಾಲ್‌ಬಸವಣ್ಣ, ಮಹಾತ್ಮ ಗಾಂಧಿ, ನಾರಾಯಣ ಗುರುಗಳ ತತ್ವಗಳು ಈ ದೇಶದ ಸಂವಿಧಾನದಲ್ಲಿ ಅಡಕವಾಗಿವೆ. ಇಂಥ ಮಹಾನ್ ಸಂವಿಧಾನದ ತತ್ವಗಳು ಈಗ ಬೆದರಿಕೆ ಎದುರಿಸುತ್ತಿದೆ. ಗಾಂಧಿ, ಗುರುಗಳು ದಶಕಗಳ ಹಿಂದೆ ಎದುರಿಸಿದ ಬೆದರಿಕೆಯಂತೆಯೇ ಸಂವಿಧಾನದ ತತ್ವಗಳೂ ಬೆದರಿಕೆ ಎದುರಿಸುತ್ತಿರುವುದು ದುರದೃಷ್ಟ. ಈ ಮಹಾನ್ ನಾಯಕರ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಮುಂದುವರಿಯಬೇಕಿದೆ ಎಂದು ಲೋಕಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಹೇಳಿದರು. ನಾರಾಯಣ ಗುರು ಮತ್ತು ಗಾಂಧಿ ಸಮಾಗಮ ಬಗ್ಗೆ ಪ್ರಧಾನ ಸಂದೇಶ ನೀಡಿದ ಅವರು, ಒಂದೇ ದೇಶ ಒಂದೇ ಮತ ಒಂದೇ ದೇವರು ಎಂಬ ಸಿದ್ಧಾಂತ ಪಸರಿಸಿದವರು ನಾರಾಯಣ ಗುರುಗಳು. ಸತ್ಯ, ಅಹಿಂಸೆಯ ಸಂದೇಶ ಗಾಂಧಿ ಅವರದು. 1925ರಲ್ಲಿ ಈ ಇಬ್ಬರು ಮಹಾನ್ ನಾಯಕರು ಸಂವಾದ ನಡೆಸಿದ್ದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಆ ಕಾಲದಲ್ಲಿ ಒಂದೆಡೆ ಸ್ವಾತಂತ್ರ್ಯ ಹೋರಾಟ ಇದ್ದರೆ ಇನ್ನೊಂದೆಡೆ ಅಸ್ಪೃಶ್ಯತೆ, ಅಸಮಾನತೆ ತಾಂಡವ ಆಡುತಿತ್ತು. ಈ ಸಂವಾದ ದೇಶದ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿತ್ತು ಎಂದು ಹೇಳಿದರು.