ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ, ವಂದೇ ಮಾತರಂಗೆ 150 ವರ್ಷ, ರಾಣಿ ಅಬ್ಬಕ್ಕ 500ನೇ ಜಯಂತ್ಯುತ್ಸವ, ಸರ್ದಾರ ವಲ್ಲಭಾಯಿ ಪಟೇಲರ 150ನೇ ಜಯಂತ್ಯುತ್ಸವ, ಸಂವಿಧಾನಕ್ಕೆ 75 ವರ್ಷ, ತುರ್ತು ಪರಿಸ್ಥಿತಿಗೆ 50 ವರ್ಷ, ರಾಷ್ಟ್ರೀಯ ಭದ್ರತೆ, ಸೈಬರ್ ಸೆಕ್ಯೂರಿಟಿ ಈ ವಿಷಯಗಳ ಸಮಾನಾಂತರ ಗೋಷ್ಠಿಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 45ನೇ ಪ್ರಾಂತ ಸಮ್ಮೇಳನವು ನಗರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಜ.24, 25 ಹಾಗೂ 26ರಂದು ನಡೆಯಲಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.

ನಗರದ ಎಬಿವಿಪಿ ಪ್ರೇರಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮ್ಮೇಳನಕ್ಕೆ ಉತ್ತರ ಪ್ರಾಂತದ 6 ವಿಭಾಗಗಳ 16 ಜಿಲ್ಲೆಗಳಿಂದ ಸುಮಾರು 700 ವಿದ್ಯಾರ್ಥಿಗಳು, 300 ವಿದ್ಯಾರ್ಥಿನಿಯರು ಮತ್ತು 100ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಶಿಕ್ಷಣ ತಜ್ಞರು ಸೇರಿ ಒಟ್ಟು 1100ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಜ.23 ರಂದು ರಾತ್ರಿ 9 ಗಂಟೆಗೆ ರಾಜ್ಯದ ವಿದ್ಯಾರ್ಥಿ ಪರಿಷತ್ ನ ಚಟುವಟಿಕೆಗಳು ಹಾಗೂ ವಿಶೇಷ ಅಭಿಯಾನಗಳನ್ನು ಒಳಗೊಂಡ ಪ್ರದರ್ಶಿನಿಯ ಉದ್ಘಾಟನೆಯನ್ನು ನಗರದ ಶ್ರೀ ಸಿದ್ದೇಶ್ವರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ನೆರವೇರಿಸಲಿದ್ದಾರೆ.‌ ಜ.24 ರಂದು ಬೆಳಗ್ಗೆ ದ್ವಜಾರೋಹಣದಿಂದ ಸಮ್ಮೇಳನ ನೆರವೇರಲಿದೆ. ರಾಜ್ಯ ಅಧ್ಯಕ್ಷರ ಮತ್ತು ರಾಜ್ಯ ಕಾರ್ಯದರ್ಶಿಗಳ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ ಚವ್ಹಾಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ಕುರಿತು ವಿಶೇಷ ಭಾಷಣ ನಡೆಯಲಿದೆ ಎಂದರು.

ಜ.25 ರಂದು ವಾದಿರಾಜರಿಂದ ಸಂವಿಧಾನ ವಿಷಯದ ಕುರಿತು ಭಾಷಣ ನಡೆಯಲಿದೆ. ಸಂಜೆ 4ಕ್ಕೆ ನಗರದ ಗೋದಾವರಿ ಹೋಟೆಲ್‌ನಿಂದ ಗಾಂಧಿ ಚೌಕ್, ಸಿದ್ದೇಶ್ವರ ದೇವಸ್ಥಾನ, ಗಣಪತಿ ಚೌಕ, ಬಸವೇಶ್ವರ ವೃತ್ತ ಮಾರ್ಗವಾಗಿ ದರ್ಬಾರ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ‌ ಡಾ.ವೀರೇಂದ್ರಸಿಂಗ ಸೋಲಂಕಿ ಹಾಗೂ ರಾಜ್ಯದ ವಿದ್ಯಾರ್ಥಿ ನಾಯಕರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಜ.26 ರಂದು ಬೆಳಗ್ಗೆ ತ್ರಿವರ್ಣ ಧ್ವಜಾರೋಹಣ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಲಾಗುವುದು. ಅದೇ ದಿನ ಕಾರ್ಯಕರ್ತರ ವಿಕಾಸ ವಿಷಯದ ಕುರಿತು ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಭಾಷಣ ಮಾಡಲಿದ್ದಾರೆ. 26 ರಂದು ನ್ಯಾಕ್ ಚೇರಮನ್ ಅನಿಲ ಸಹಸ್ರಬುದ್ಧಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಿತಿಯ ಶೀಲಾ ಬಿರಾದಾರ ಮಾತನಾಡಿ, ಯುವಶಕ್ತಿ ರಾಷ್ಟ್ರಶಕ್ತಿ ಎಂಬ ಧ್ಯೇಯದಡಿ ಸಮ್ಮೇಳನ ನಡೆಸಲಾಗುತ್ತಿದೆ. ಈ ಸಮ್ಮೇಳನಕ್ಕೆ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ಸರ್ವ ಜನತೆ ಸಹಕರಿಸಿದ್ದಾರೆ. ಕಳೆದ 25 ವರ್ಷಗಳ ಬಳಿಕ ನಗರದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ವಿಜೃಂಭಣೆಯಿಂದ ಜರುಗಲಿದ್ದು, ಯಶಸ್ವಿಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ 45ನೇ ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿ ವಿಕಾಸ ದರ್ಬಾರ, ಶೀಲಾ ಬಿರಾದಾರ, ಸುಧೀರ ಟಂಕಸಾಲೆ, ಎಬಿವಿಪಿಯ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರಡ್ಡಿ, ವ್ಯವಸ್ಥಾ ಪ್ರಮುಖ ಅಮಿತಕುಮಾರ ಬಿರಾದಾರ ಇತರರಿದ್ದರು.

ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಸ್ಥಿತಿಗತಿ ವರ್ತಮಾನ ಪರಿಸ್ಥಿತಿ ಹಾಗೂ ನೇಮಕಾತಿಗಳ ಕುರಿತು, ಸ್ಕ್ರೀನ್ ಟೈಮ್ ಟು ಆಕ್ಟಿವಿಟಿ ಟೈಮ್ ಕುರಿತು ರಾಜ್ಯಾದ್ಯಂತ ಅಭಿಯಾನ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಯಲಿದೆ.‌ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ, ವಂದೇ ಮಾತರಂಗೆ 150 ವರ್ಷ, ರಾಣಿ ಅಬ್ಬಕ್ಕ 500ನೇ ಜಯಂತ್ಯುತ್ಸವ, ಸರ್ದಾರ ವಲ್ಲಭಾಯಿ ಪಟೇಲರ 150ನೇ ಜಯಂತ್ಯುತ್ಸವ, ಸಂವಿಧಾನಕ್ಕೆ 75 ವರ್ಷ, ತುರ್ತು ಪರಿಸ್ಥಿತಿಗೆ 50 ವರ್ಷ, ರಾಷ್ಟ್ರೀಯ ಭದ್ರತೆ, ಸೈಬರ್ ಸೆಕ್ಯೂರಿಟಿ ಈ ವಿಷಯಗಳ ಸಮಾನಾಂತರ ಗೋಷ್ಠಿಗಳು ನಡೆಯಲಿವೆ.

ಸಚಿನ ಕುಳಗೇರಿ, ರಾಜ್ಯ ಕಾರ್ಯದರ್ಶಿ ಎಬಿವಿಪಿ