ಟೆನ್ನಿಸ್ ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಭೂಮಿ

KannadaprabhaNewsNetwork |  
Published : Sep 29, 2025, 01:02 AM IST
ಾಾಾೀ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಟೆನ್ನಿಸ್ ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು ನೀಡಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಟೆನ್ನಿಸ್ ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು ನೀಡಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಭರವಸೆ ನೀಡಿದರು. ನಗರದ ವಿಶ್ವವಿದ್ಯಾನಿಲಯ ಆವರಣದಲ್ಲಿ ನವೀಕರಿಸಲ್ಪಟ್ಟ ಟೆನ್ನಿಸ್ ಕ್ರೀಡಾಂಗಣ ಹಾಗೂ ಆಟಗಾರರ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 41 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಹಾಗೂ ಅಕಾಡೆಮಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕ್ರೀಡಾಂಗಣ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಅದರ ಸಮೀಪದಲ್ಲೇ 5 ಎಕರೆ ಪ್ರದೇಶವನ್ನು ಟೆನ್ನಿಸ್ ಕ್ರೀಡಾಂಗಣ ಹಾಗೂ ಅಕಾಡೆಮಿ ನಿರ್ಮಾಣ ಮಾಡಿದರೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್ ಪಂದ್ಯಾವಳಿಗಳನ್ನು ನಮ್ಮ ಜಿಲ್ಲೆಯಲ್ಲಿಯೇ ಆಯೋಜಿಸಲು ಸಹಕಾರಿಯಾಗಲಿದೆ ಎಂದ ಅವರು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ದ್ಯಾಬೇರಿ ಹಾಗೂ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರಿಗೆ ಮನವಿ ಮಾಡಿದರು. ನಮ್ಮ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಮೂಲಕ ಅವರ ಪ್ರತಿಭೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರಲ್ಲದೆ, 2013ರಲ್ಲಿ ಶಿಕ್ಷಣ ಸಚಿವನಾಗಿದ್ದಾಗ ಅಂದಿನ ತುಮಕೂರು ಜಿಲ್ಲಾಧಿಕಾರಿ ಎಂ.ಬಿ. ದ್ಯಾಬೇರಿ ಅವರ ಸಹಕಾರದಿಂದ ಟೆನ್ನಿಸ್ ಕೋರ್ಟ್ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿ ಟೆನ್ನಿಸ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸ್ಮರಿಸಿದರು. ಈಗಾಗಲೇ ಈ ಟೆನ್ನಿಸ್ ಕ್ರೀಡಾಂಗಣದ ಮೂಲಕ ಉತ್ತೇಜನ ಪಡೆದು ತುಮಕೂರಿನ ಯುವ ಕ್ರೀಡಾಪಟುಗಳು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟ ತಲುಪುವ ಅವಕಾಶ ಗಳಿಸಿದ್ದಾರೆ ಎಂದರು.ತುಮಕೂರು ಜಿಲ್ಲೆ ಈಗಾಗಲೇ ಕಬ್ಬಡ್ಡಿ, ಖೋ-ಖೋ ಹಾಗೂ ವಿವಿಧ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದಿದ್ದು, ತುಮಕೂರು ದಸರಾ ಉತ್ಸವದ ಅಂಗವಾಗಿ ಈ ಬಾರಿ ಟೆನ್ನಿಸ್, ಮ್ಯಾರಥಾನ್, ಚೆಸ್, ಶೂಟಿಂಗ್, ಕಬ್ಬಡ್ಡಿ, ಖೋ-ಖೋ ನಾಡಕುಸ್ತಿ, ಜಿಮ್ನಾಸ್ಟಿಕ್ಸ್ ಸೇರಿದಂತೆ ಹಲವು ಕ್ರೀಡೆಗಳನ್ನು ನಡೆಸಲಾಗುವುದು ಎಂದರು. ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಮೈಸೂರು ದಸರಾ ಉತ್ಸವದ ರೀತಿಯಲ್ಲಿ ತುಮಕೂರು ದಸರಾ ಉತ್ಸವ ನಡೆಯುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ತುಮಕೂರು ದಸರಾ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಜ್ಞಾನ ವೈಭವ ನೀಡುವ ಉದ್ದೇಶದಿಂದ ಹಲವು ರೀತಿಯ ಕಾರ್ಯಕ್ರಮಗಳನ್ನು ದಸರಾ ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಕರ್ನಾಟಕ ಸೋಲಾರ್ ಪವರ್ ಅಭಿವೃದ್ಧಿ ನಿಗಮದ ಸಿಎಸ್‌ಆರ್ ಅನುದಾನದಡಿ 75 ಲಕ್ಷ ರು. ವೆಚ್ಚದಲ್ಲಿ ಟೆನ್ನಿಸ್ ಕ್ರೀಡಾಂಗಣವನ್ನು ಉತ್ತಮ ಗುಣಮಟ್ಟದಿಂದ ಸಂಪೂರ್ಣವಾಗಿ ಮರು ನಿರ್ಮಿಸಲಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಹಾಗೂ ಅಭ್ಯಾಸದ ವಾತಾವರಣ ಸಿಗಲಿದೆ. ಜಿಲ್ಲೆಯ ಕ್ರೀಡಾ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್, ನಿರ್ದೇಶಕರುಗಳಾದ ರಾಜಶೇಖರ್, ಮೋಹನ್ ಗುರ್ಜಾರ್, ಜಿ.ಆರ್. ಅಮರನಾಥ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ