ಗದಗ: ₹17 ಲಕ್ಷ ಸಾಲ ಪಡೆದ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಘಟನೆಯೊಂದು ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೊಸ ಮುಖ ಇದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಡಮಾನ ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿ, ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರ ಸಿದ್ಧಪಡಿಸಿ, ಶೇಷಗಿರಿಸಾ ಬಾಕಳೆ ಹೆಸರಿಗೆ ಜಮೀನಿನ ಖರೀದಿ ಪತ್ರ ಮಾಡಿಸಲಾಗಿದೆ. ಈ ಬಡ್ಡಿ ದಂದೆಕೋರರು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ದೂರು ಸಲ್ಲಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಎಸ್‌ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಧನ: ಈ ವಂಚನೆಯ ಹಿಂದೆ ಬೆಟಗೇರಿ ಮೂಲದ ರೌಡಿಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದ ಹಿನ್ನಲೆಯಲ್ಲಿ ಪೊಲೀಸರು ರೌಡಿಶೀಟರ್ ಯುವರಾಜ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಹೆಚ್ಚುತ್ತಿದೆ ಅಕ್ರಮ ಬಡ್ಡಿ ದಂಧೆ
ಅಪರಾಧ ಹಿನ್ನೆಲೆ: ಈ ಪ್ರಕರಣದಲ್ಲಿ ತೊಂದರೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡು, ಆರೋಪಿತರು ನಮಗೆ ನಂಬಿಸಿ ಮೋಸ ಮಾಡಿ ಜಮೀನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ನಂತರ ಪರಿಶೀಲನೆ ಮಾಡಿದಾಗ ಆ ವ್ಯಕ್ತಿ ಅಪರಾಧ ಹಿನ್ನೆಲೆ ತಿಳಿದು ಬಂದಿದೆ. ಅದಕ್ಕಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.