5 ಕೋಟಿ ಬಾಕಿ ವ್ಯಾಜ್ಯ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಿ: ನ್ಯಾ. ಅಬ್ದುಲ್ ನಝೀರ್

KannadaprabhaNewsNetwork | Published : Nov 18, 2024 12:03 AM

ಸಾರಾಂಶ

ಉಡುಪಿ ಜಿಲ್ಲಾ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವರ್ಷಾಚರಣೆ ನಡೆಯಿತು. ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ನ್ಯಾಯಾಲಯಗಳಲ್ಲಿ ಸುಮಾರು 5 ಕೋಟಿಗೂ ಅಧಿಕ ವ್ಯಾಜ್ಯಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಇದು ಸುಮಾರು 25 ಕೋಟಿಗೂ ಹೆಚ್ಚು ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಆದ್ದರಿಂದ ಈ ಸಮಸ್ಯೆಗೆ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಪರಿಹಾರ ಕ್ರಮ ಕಂಡುಹಿಡಿಯಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಸಲಹೆ ಮಾಡಿದ್ದಾರೆ.

ಅವರು ಭಾನುವಾರ ಉಡುಪಿ ಜಿಲ್ಲಾ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವರ್ಷಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಮ್ಮ ರಾಜ್ಯದ ಹೈಕೋರ್ಟ್‌ನಲ್ಲಿ 3 ಲಕ್ಷಕ್ಕೂ ಅಧಿಕ ವ್ಯಾಜ್ಯಗಳು ಬಾಕಿ ಇವೆ, ಅಂದರೆ ಇವುಗಳಿಂದಾಗಿ ರಾಜ್ಯದ 30 ಲಕ್ಷಕ್ಕೂ ಅಧಿಕ ಕುಟುಂಬಗಳ ನೆಮ್ಮದಿ ಹಾಳಾಗಿರುತ್ತದೆ. ಆದ್ದರಿಂದ ಇದು ಚಿಕ್ಕ ಸಮಸ್ಯೆಯಲ್ಲ, ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದವರು ವೇದಿಕೆಯಲ್ಲಿದ್ದ ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮತ್ತು ಹೈಕೋರ್ಟಿನ ನ್ಯಾಯಾಧೀಶರನ್ನು ಉದ್ದೇಶಿಸಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜ. ಅರವಿಂದ ಕುಮಾರ್, ದೇಶದ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಬಾಕಿ ವ್ಯಾಜ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಬ್ಯಾಂಕಿಂಗ್, ಭೂವಿವಾದ, ಮೋಟಾರು ವಾಹನದಂತಹ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಲೋಕ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಬೇಕು, ನ್ಯಾಯಾಲಯಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ವ್ಯಾಜ್ಯಗಳನ್ನು ತ್ವರಿತವಾಗಿ ವಿಲೇ ಮಾಡಬೇಕು, ವಕೀಲರು ಅನವಶ್ಯಕವಾಗಿ ವಿಚಾರಣೆ ಮುಂದೂಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ಮಾಡಿದರು.

ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಜಸ್ಟೀಸ್‌ ಎನ್‌.ವಿ. ಅಂಜಾರಿಯಾ ಅವರು, ವಕೀಲರಿಗಾಗಿ ಮಣಿಪಾಲ ಕೆಎಂಸಿ ವತಿಯಿಂದ ವಿಶೇಷ ಆರೋಗ್ಯ ಕಾರ್ಡನ್ನು ಬಿಡುಗಡೆ ಮಾಡಿದರು.

ಸ್ಮರಣಸಂಚಿಕೆಯನ್ನು ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯದೀಶ ಜಸ್ಟೀಸ್ ಇ.ಎಸ್. ಇಂದಿರೇಶ್ ಬಿಡುಗಡೆ ಮಾಡಿದರು.ಉಡುಪಿ ಜಿಲ್ಲೆಯಲ್ಲಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿ ಮುಂದೆ ನ್ಯಾಯಾಧೀಶರಾದ, ಸರ್ಕಾರಿ ಅಭಿಯೋಜಕರಾದ ಸಾಧಕರನ್ನು ಅಭಿನಂದಿಸಲಾಯಿತು. ಈ ಹಿಂದೆ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಹಿರಿಯರನ್ನು ಗೌರವಿಸಲಾಯಿತು.

ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಹೈಕೋರ್ಟ್ ನ್ಯಾಯಧೀಶರಾದ ಜಸ್ಟೀಸ್ ಎಂ.ಜಿ. ಉಮಾ, ಜಸ್ಟೀಸ್ ರಾಮಚಂದ್ರ ಡಿ. ಹುದ್ದಾರ್, ಜಸ್ಟೀಸ್ ವೆಂಕಟೇಶ್ ನಾಯ್ಕ್ ಟಿ., ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ್ ಎಸ್. ಶೆಟ್ಟಿ, ಹೈಕೋರ್ಟ್ ರಿಜಿಸ್ಟರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಲ್‌ ಇದ್ದರು.

ಶತಮಾನೋತ್ತರ ಬೆಳ್ಳಿಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್‌ ಪ್ರವೀಣ್ ಕುಮಾರ್ ಸ್ವಾಗತಿಸಿದರು, ಹಿರಿಯ ನ್ಯಾಯವಾದಿ ಮೇರಿ ಶ್ರೇಷ್ಟ ನಿರೂಪಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಎ.ಆರ್. ವಂದಿಸಿದರು.

ಅತಿಥಿಗಣ್ಯರನ್ನು ಜೋಡುಕಟ್ಟೆಯಿಂದ ನ್ಯಾಯಾಲಯದವರೆಗೆ ಸಾಂಸ್ಕೃತಿಕ - ವೈವಿಧ್ಯಮಯ ಮೆರವಣಿಗೆಯಲ್ಲಿ ಕರೆ ತರಲಾಯಿತು. ಸಭಾ ಕಾರ್ಯಕ್ರಮದ ನಂತರ ವಕೀಲರಿಗಾಗಿ ಎರಡು ವಿಚಾರಗೋಷ್ಠಿಗಳು ನಡೆದವು.

Share this article