ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಾದಿ ಶರಣರು ಮತ್ತು ಅವರ ವಚನ ಸಾಹಿತ್ಯವನ್ನು ವಿಶ್ವದ ನಾನಾ ಭಾಷೆಗಳಿಗೆ ಅನುವಾದಿಸಿ ಪ್ರಸಾರ ಮಾಡುವ ಯೋಜನೆ ಪೂರ್ಣಗೊಳಿಸಲು ₹5 ಕೋಟಿ ಅನುದಾನ ನೀಡುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಗ್ರಂಥಾಲಯ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಬಸವಾದಿ ಶರಣರನ್ನು ಬೆಳಕಿಗೆ ತಂದಿದರೆ, ಕಲಬುರ್ಗಿಯವರು ಹಳಕಟ್ಟಿಯವರ ಸಮಗ್ರ ಸಾಹಿತ್ಯ ಸಂಪಾದಿಸುವ ಮೂಲಕ ಅವರ ಸಂಶೋಧನೆ ಮತ್ತು ಸಾಹಿತ್ಯವನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೇ, ಸಂಶೋಧನ ಕೇಂದ್ರದಿಂದ ಆದಿಲ್ ಶಾಹಿ ಅರಸರ ದಖನಿ, ಪಾರ್ಸಿ ಸಾಹಿತ್ಯವನ್ಮು ಕನ್ಮಡಕ್ಕೆ ಅನುವಾದ ಮಾಡಿಸಲು ನೆರವಾಗಿದ್ದಾರೆ. ಸಂಶೋಧನ ಕೇಂದ್ರದಿಂದ ಬಸವಾದಿ ಶರಣರು ಮತ್ತು ಅವರ ಸಾಹಿತ್ಯವನ್ನು ವಿಶ್ವದ ನಾನಾ ಭಾಷೆಗಳಿಗೆ ಅನುವಾದಿಸುವ ಕೆಲಸ ಈ ಹಿಂದೆ ಪ್ರಾರಂಭಿಸಲಾಗಿತ್ತು. ಅದನ್ನು ಮುಂದುವರೆಸಿ ಪೂರ್ಣಗೊಳಿಸಲು ಒಟ್ಟು ₹5 ಕೋಟಿ ಅನುದಾನ ನೀಡುತ್ತೇನೆ ಎಂದು ಹೇಳಿದರು.ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದೇವರು ಮಾತನಾಡಿ, ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಸಚಿವ ಎಂ.ಬಿ.ಪಾಟೀಲರ ಕಾರ್ಯ ಸದಾ ಸ್ಮರಣೀಯವಾಗಿರಲಿದೆ. ರಾಜಕೀಯ ನಾಯಕರು ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದುವುದು ಅಪರೂಪ. ಆದರೆ, ಎಂ.ಬಿ.ಪಾಟೀಲರ ಕಾರ್ಯ ಆದರ್ಶ ಮಾತ್ರವಲ್ಲ, ಅನುಕರಣೀಯವಾಗಿದೆ. ಕಲಬುರ್ಗಿಯವರೊಂದಗಿನ ಒಡನಾಟದಿಂದ ಎಂ.ಬಿ.ಪಾಟೀಲರು ಸತ್ಯ ಮತ್ತು ಸುಳ್ಳನ್ನು ದಿಟ್ಟವಾಗಿ ಹೇಳುವ ಗಟ್ಟಿತನ ಬೆಳೆಸಿಕೊಂಡಿದ್ದಾರೆ. ಎಲ್ಲ ವಿದ್ವಾಂಸರು ಒಗ್ಗೂಡಿ ಬಸವಣ್ಣನವರ ಜನ್ಮದಿನಾಂಕ ಮತ್ತು ವರ್ಷದ ಬಗ್ಗೆ ಸಂಶೋಧನೆ ಮಾಡಬೇಕು. ವಚನ ಸಾಹಿತ್ಯದ ಕೆಲಸ ಇನ್ನೂ ಬಹಳವಿದೆ. ಬಸವಣ್ಣನ ರಥ ಜಾಗತಿಕ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಮೈಸೂರು ಕುಂದೂರು ಮಠದ ಡಾ.ಶರತಚಂದ್ರ ಸ್ವಾಮೀಜಿ ಮಾತನಾಡಿ, ಇಂದು ಚಲನಶೀಲ ಸಂಶೋಧಕರ ಅಗತ್ಯವಿದೆ. ಗತಕಾಲದ ಸತ್ಯವನ್ನು ವರ್ತಮಾನದಲ್ಲಿ ಜನತೆಗೆ ಮನವರಿಕೆ ಮಾಡಿಕೊಡುವುದು ಸಂಶೋಧಕನ ಕೆಲಸವಾಗಿದೆ. ಜನರಲ್ಲಿ ಸಂವಾದ ಮನಸ್ಥಿತಿ ಇಲ್ಲ. ಸಂಹಾರದ ಮನಸ್ಥಿತಿ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸದುಪಯೋಗದ ಜೊತೆ ದುರುಪಯೋಗವಾಗುತ್ತಿದೆ. ವಿದ್ಯಾವಂತರು ಸಂಕುಚಿತರಾಗುತ್ತಿರುವುದು ವಿಪರ್ಯಾಸ. ಅದನ್ನು ತೊಲಗಿಸಲು ಕಲಬುರ್ಗಿಯವರ ಗ್ರಂಥಗಳನ್ನು ಓದಿ ಅವರ ನಡವಳಿಕೆ ಅಳವಡಿಸಿಕೊಳ್ಳಬೇಕು. ಹಳಕಟ್ಟಿ ಸಂಶೋಧನ ಕೇಂದ್ರದ ಸಾಧನೆ ಅಪೂರ್ವವಾಗಿದೆ ಎಂದು ಹೇಳಿದರು.ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಈಗ ಬಿಡುಗಡೆಯಾಗಿರುವ ಸಂಪುಟಗಳಲ್ಲಿ ಕಲಬುರ್ಗಿಯವರು ಮಹಾಯಾನದ ಕಥೆಯಿದೆ. ಎಲ್ಲ ವಿದ್ಯಾಸಂಸ್ಥೆಗಳಿಗೆ ಆದರ್ಶವಾಗುವ ಅಂಶಗಳಿವೆ. ಎಲ್ಲ ಸಾಹಿತಿಗಳಿಗೆ ಪ್ರೇರಣೆಯಾಗಿವೆ ಎಂದರು. ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ 40 ಸಂಪುಟ ಸಂಪಾದಿಸಿದ 15 ಜನ ಸಂಶೋಧಕರಾದ ಡಾ.ವೀರಣ್ಣ ರಾಜೂರ, ಡಾ.ಕೃಷ್ಣ ಕೊಲ್ಹಾರಕುಲಕರ್ಣಿ, ಪಿ.ಬಿ.ಶಿರೂರ, ಡಾ.ಎಸ್.ಕೆ. ಕೊಪ್ಪಾ, ಡಾ.ಗುರುಪಾದ ಮರಿಗುದ್ದಿ, ಡಾ.ಕೆ.ರವೀಂದ್ರನಾಥ, ಡಾ.ಎಂ.ಪಿ.ಹಳ್ಳಿಕೇರಿ, ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ.ಪಿ.ಕೆ.ರಾಠೋಡ, ಡಾ.ಹಣಮಂತ ಮೇಲಿನಮನಿ, ಡಾ.ಎಸ್.ಎಸ್.ಭಗವತಿ, ಶ್ರೀಧರ ತೋಡಕರ ಹಾಗೂ ಡಾ.ಎಂ.ಎಂ.ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ, ಡಾ.ಹನುಮಾಕ್ಷಿ ಗೋಗಿ, ಸಂಪುಟ ಮುದ್ರಕ ಬಸವರಾಜ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಾ. ಎಂ. ಎಸ್. ಮದಭಾವಿ, ಡಾ.ವಿಜಯ ಕೋರಿಶೆಟ್ಡಿ, ಡಾ.ವೈ.ಎಂ. ಜಯರಾಜ, ಡಾ.ಆರ್.ವಿ.ಕುಲಕರ್ಣಿ, ಡಾ.ಎಂ.ಎಂ.ಕಲಬುರ್ಗಿ ಕುಟುಂಬ ಸದಸ್ಯರು, ನಾನಾ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಎಸ್.ಬಿ.ಆರ್ಟ್ಸ್ ಮತ್ತು ಕೆಸಿಪಿ ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಸುಭಾಸ ಕನ್ನೂರ ಮತ್ತು ಉಷಾದೇವಿ ನಿರೂಪಿಸಿದರು. ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ವಂದಿಸಿದರು.