ಮಾಗಡಿ: ಶ್ರೀರಂಗನಾಥಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 5 ಕೋಟಿ ಮಂಜೂರಾಗಿ, 2 ಕೋಟಿ ಬಿಡುಗಡೆಯಾಗಿದ್ದು ಭಾನುವಾರ ದೇಗುಲದ ಅರ್ಚಕರ ಸಭೆ ಕರೆದು ಚರ್ಚಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದದರು.
ಪಟ್ಟಣದ ಐತಿಹಾಸಿಕ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಷ್ಣು ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೀಪ ಜ್ಞಾನದ ಸಂಕೇತ, ಕತ್ತಲೆ ಕಳೆಯಲು ದೀಪ ಬೇಕು. ಒಳಗಿರುವ ಅಜ್ಞಾನವನ್ನು ಕಳೆಯಲು ಭಗವಂತನ ದರ್ಶನ ಮಾಡಬೇಕು. ದೇವಾಲಯಗಳಲ್ಲಿ ಸಾಲು ದೀಪ ಹಚ್ಚುವ ಮೂಲಕ ನಮ್ಮೊಳಗಿನ ಅಜ್ಞಾನ, ಮೂಢ ನಂಬಿಕೆ ಹೊಗಲಾಡಿಸಿ ಅಂತರಂಗದ ಶುದ್ಧಿ ಮಾಡಿಕೊಂಡಾಗ ಬದುಕು ಸಾರ್ಥ. ಸೂರ್ಯ, ಚಂದ್ರ ನಕ್ಷತ್ರಗಳಂತೆ ಭೂಮಿಗೆ ನಮ್ಮ ಮನಸ್ಸಿನ ದೀಪ ಹಚ್ಚುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದರು.ವಿಷ್ಣು ದೀಪೋತ್ಸವ ಅಂಗವಾಗಿ ಮಹಾಲಕ್ಷ್ಮೀ, ಸುದರ್ಶನ ಹೋಮ, ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಪಶ್ಚಿಮ ವೆಂಕಟಾಚಲಪತಿ ಶ್ರೀರಂಗನಾಥಸ್ವಾಮಿಗೆ ತೋಮಾಲೆ ಅಲಂಕಾರ ಹಾಗೂ ವಜ್ರ ಖಚಿತ ಚಿನ್ನದ ಕಿರೀಟ ಧಾರಣೆ ಭಕ್ತರ ಗಮನ ಸೆಳೆಯಿತು. ದೇವಾಲಯದ ಮುಂಭಾಗದ ಕಲ್ಯಾಣಿಯಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ನೆರವೇರಿತು. ಮಂಗಳವಾದ್ಯದೊಂದಿಗೆ ಉತ್ಸವಮೂರ್ತಿ ಮೆರವಣಿಗೆ ನಡೆಯಿತು. ದೇವಾಲಯದ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಅಳವಡಿಸಲಾಗಿತ್ತು. ಸಿಡಿ ಮದ್ದು ಪ್ರದರ್ಶನ ಆಕರ್ಷಣೆಯವಾಗಿತ್ತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷೆ ಶಿವರುದ್ರಮ್ಮ ವಿಜಯ ಕುಮಾರು, ಸದಸ್ಯರಾದ ಶಿವಕುಮಾರ್, ಪ್ರಕಾಶ್, ಗುತ್ತಿಗೆದಾರ ದೇವರಾಜು, ಕುಮಾರ್, ಶಿವಕುಮಾರ್, ದೇವಸ್ಥಾನದ ಅರ್ಚಕ ವೆಂಕಟೇಶ ಅಯ್ಯಂಗಾರ್, ಕಾರ್ತಿಕ ಅಯ್ಯಂಗಾರ್ ಇತರರು ಭಾಗವಹಿಸಿದ್ದರು.